ಜನಮನಗೆದ್ದ ಬೀದಿ ನಾಟಕ

ಮಂಗಳವಾರ, ಜೂಲೈ 16, 2019
25 °C

ಜನಮನಗೆದ್ದ ಬೀದಿ ನಾಟಕ

Published:
Updated:

ಹಾವೇರಿ: ಮಹಿಳಾ ಅತ್ಯಾಚಾರದ ವಿರುದ್ಧ ಮತ್ತು ಪ್ರಕೃತಿ ವಿಕೋಪ ಕುರಿತು ಜಾಗೃತಿ ಮೂಡಿಸುವ `ವಿರಾಟ ವಿಕೋಪ' ಎಂಬ ಮಾನವೀಯ ಸಂವೇದನೆಗಳ ಬೀದಿ ನಾಟಕ ಇಲ್ಲಿಯ ಗಾಂಧಿ ವೃತ್ತದಲ್ಲಿ ಪ್ರದರ್ಶನ ಮಾಡಲಾಯಿತು.ಉತ್ತರಾಖಂಡದಲ್ಲಿ ತಾಂಡವವಾಡುತ್ತಿರುವ ಪ್ರಕೃತಿ ವಿಕೋಪದಲ್ಲಿ ದುರ್ಮರಣಕ್ಕೀಡಾದವರಿಗಾಗಿ ಸಂತ್ರಸ್ತ ನಿಧಿ ಸಂಗ್ರಹಿಸುವ ಉದ್ದೆೀಶದಿಂದ ಈ ಬೀದಿ ನಾಟಕ ಪ್ರದರ್ಶನವನ್ನು ಹಾವೇರಿ ನಗರದ ಕಲಾವಿದರು ಅಭಿನಯಿಸಿದ್ದರು.ಹಿರಿಯ ಸಾಹಿತಿ ಸತೀಶ್ ಕುಲಕರ್ಣಿಯವರು ಬರೆದ ಈ ನಾಟಕವನ್ನು ಕೆ.ಅರ್. ಹಿರೇಮಠ ನಿರ್ದೇಶನದ `ವಿರಾಟ ವಿಕೋಪ' ನಾಟಕವು ತಡವಾಗಿ ಬರುವ ನಾಟಕದ ಕಲಾವಿದರನ್ನು ತರಾಟೆಗೆ ತೆಗೆದುಕೊಳ್ಳುವ ಮೋಜಿನ ಪ್ರಸಂಗದೊಂದಿಗೆ ಆರಂಭವಾಯಿತು.`ನೀವು ಇಷ್ಟ ಕಷ್ಟಪಟ್ಟು ತಡಾ ಆಗಿ ಬಂದ್ರ, ಉತ್ತರಾಖಂಡದಾಗ ಜನ ಎಷ್ಟ ಕಷ್ಟಪಡಾಕತ್ತಾರ' ಎಂದು ಕೇಳುವ ನಿರೂಪಕ ರಂಗದ ಮೇಲೆ ಅಲ್ಲಿಯ ಗೋಳಾಟಕ್ಕೆ ನರಳಾಟಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತಾನೆ. ಎಂಟು ದಿನಾ ಆತು ನನ್ನ ಜೊತೆಗೆ ಬಂದೊರು ಎಲ್ಲಾರೂ ಕೊಚ್ಕೊಂಡ ಹೊದ್ರು ಎಂದು ಒಬ್ಬನೆಂದರೆ, `ನನ್ನ ಮಗಾ ಬಸವಾ ತೇಲ ಹೊಂಟಾನ ನೋಡ್ರೊ' ಎಂದು ಇನ್ನೊಬ್ಬ ರೋಧಿಸುತ್ತಾನೆ. ನನ್ನ ಹೆಂಡ್ತಿ, ನನ್ನ ಮೂರು ವರ್ಷದ ಮಗಳು ಸಿಗ್ವಲ್ಲೆಲ್ರೋ' ಎಂದು ಮತ್ತೊಬ್ಬ ಗೋಳಾಡುತ್ತಾನೆ. ರಂಗದ ಇನ್ನೊಂದು ಭಾಗದಲ್ಲಿ ಇವರ ಸಂಬಂಧಿ `ಫೋನ್ ಹತ್ತವಲ್ದು, ಟೀವ್ಯಾಗ ನಮ್ಮ ಮಂದಿ ಯಾರೂ ಕಾಣಸವಲ್ರೊ' ಎಂದು ರೋಧಿಸುತ್ತಾನೆ. ಈ ದೃಶ್ಯ ರೂಪಕಗಳು ಇಡೀ ಜನ ಸಮುದಾಯವನ್ನು ವಿಷಾದದ ಮಡುವಿಗೆ ನೂಕಿದವು.ನೋವು, ತಲ್ಲಣ, ಆಕ್ರೋಶ, ಹತಾಶೆಗಳ ಬಿರುಗಾಳಿಯನ್ನೇ ಎಬ್ಬಿಸಿದ ಹಲವು ಭಾವಾಭಿನಯಗಳನ್ನು ಕಲಾವಿದರಾದ ಕೆ.ಆರ್. ಹಿರೇಮಠ, ಶಂಕರ ತುಮ್ಮಣ್ಣನವರ, ಜಮೀರ ರಿತ್ತಿ, ವೀರೇಶ ಹ್ಯಾಡ್ಲ್, ಅರ್.ಸಿ. ನಂದಿಹಳ್ಳಿ ಹಾಗೂ ಅರ್ಜುನ  ಸೇಲಮ್ ನೀಡಿದರು.ನಿರೂಪಕ ವೈ.ಬಿ. ಆಲದಕಟ್ಟಿ ಪ್ರಕೃತಿ ವಿಕೋಪವನ್ನು ವಿವರಿಸುತ್ತಾರೆ. ಪ್ರಕೃತಿ ವಿಕೋಪವನ್ನು ತಡೆಯಬಹುದು ಆದರೆ ಮನುಷ್ಯನ ಅತ್ಯಾಚಾರವನ್ನು ತಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ನಾಟಕ ಹೊಸ ತಿರುವು ಪಡೆಯುತ್ತದೆ.`ಪರಿಚಿತರೇ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರ ಮಾಡುದ್ದಾರೆ. ದೆಹಲಿ-ಮಣಿಪಾಲ ನಗರಗಳು ಮರ್ಮಾಘಾತಗೊಂಡಿವೆ. ಹಳ್ಳಿ ಹಳ್ಳಿಗಳಲ್ಲಿ ಮೂಕ ಆಕ್ರಂದನಗಳು ನಡೆಯುತ್ತಿವೆ. ಗಂಡಿನ ಮನಸ್ಸು ಬದಲಾಗಬೇಕೆಂದು ಇನ್ನೊಬ್ಬ ನಿರೂಪಕ ರಾಜು ಹಿರೇಮಠ ಹೇಳಿದ ಮಾತು ನಾಟಕದ ಸಂದೇಶವಾಗಿತ್ತು.

`ವಿರಾಟ ವಿಕೋಪ' ನಾಟಕಕ್ಕೆ ಹಾಡುಗಳನ್ನು ಮಹಾಂತೇಶ ಮರಿಗೂಳಪ್ಪನವರ, ಎ.ಬಿ.ಗುಡ್ದಳ್ಳಿ ಹಾಗೂ ಕುಮಾರದಾಸ ಹೂಗಾರ ಹಾಡಿದರು.ಸಮಕಾಲಿನ ಜ್ವಲಂತ ಸಮಸ್ಯೆಗಳಿಗೆ ಸದಾ ಸಾರ್ವಜನಿಕ ಧ್ವನಿಯಾಗುವ ಹಾವೇರಿ ಕಲಾವಿದರು ಜನ ಧ್ವನಿಯಾಗಿ ವ್ಯವಸ್ಧೆಯ ಸಾಕ್ಷಿ ಪ್ರಜ್ಞೆಯಾದರು. ನಾಟಕ ಪ್ರದರ್ಶನದ ಸಂಘಟನೆಯನ್ನು ವೈ.ಬಿ. ಆಲದಕಟ್ಟಿ, ವಿ.ಎಂ. ಪತ್ರಿ, ಚಂದ್ರಶೇಖರ ಮಾಳಗಿ ಹಾಗೂ ಸಿ.ಎ. ಕೂಡಲಮಠ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry