ಜನಮನ ರಂಜಿಸಿದ ಕಲಾ ತಂಡ, ಸ್ತಬ್ಧಚಿತ್ರ

7

ಜನಮನ ರಂಜಿಸಿದ ಕಲಾ ತಂಡ, ಸ್ತಬ್ಧಚಿತ್ರ

Published:
Updated:

ಶ್ರೀರಂಗಪಟ್ಟಣ: ಶುಕ್ರವಾರ ನಡೆದ ದಸರಾ ಉತ್ಸವದಲ್ಲಿನ ಬಗೆ ಬಗೆಯ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. ಮಹಿಷಾಸುರನ ವೇಶ ಧರಿಸಿದ್ದ ಪುರಸಭೆ ನೌಕರ ಕೆಂಪೇಗೌಡ ತಮ್ಮ ಹಾವ, ಭಾವದಿಂದ ರಂಜಿಸಿದರು. ಥೇಟ್ ಮಹಿಷಾಸುರನಂತೆ ಕಂಗೊಳಿಸಿದರು.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಶಿವಾಜಿ ವೇಷಧಾರಿಗಳು ನೋಡಗರ ಗಮನ ಸೆಳೆದರು.

ನೀರಾವರಿ ನಿಗಮ, ಅರಣ್ಯ, ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ, ತಾ.ಪಂ.ಗಳ ಸ್ತಬ್ದ ಚಿತ್ರಗಳು ವಾಸ್ತವಿಕತೆಗೆ ಕನ್ನಡಿ ಹಿಡಿದಂತಿದ್ದವು. ತಾಲ್ಲೂಕಿನ ನೆಲಮನೆ ಟಿಲ್ಲರ್ ನಾಗರಾಜ್ ಅವರ ರೂ.1.70 ಲಕ್ಷ ಬೆಲೆಯ ಎತ್ತುಗಳು ಸೇರಿದಂತೆ 5 ಜತೆ ಉತ್ತಮ ಮೈ ಕಟ್ಟಿನ ಎತ್ತುಗಳು ಮೆರಣಿಗೆಯಲ್ಲಿ ಪಾಲ್ಗೊಂಡಿದ್ದವು.ಕಾರಸವಾಡಿಯ ಡೊಳ್ಳು ಕುಣಿತ, ಪಟ್ಟಣದ ಅರುಂಧತಿಯಾರ್ ಯುವಕರ ತಂಡದ ಚರ್ಮವಾದ್ಯ ಮೇಳ, ಕನ್ನಲಿ ಗ್ರಾಮದ ಬಸವರಾಜು ಮತ್ತು ತಂಡದ ಪೂಜಾ ಕುಣಿತ, ಸೀನಪ್ಪ ತಂಡದ ಸೋಮನ ಕುಣಿತ ಹಾಗೂ ವೀರ ಮಕ್ಕಳ ಕುಣಿತಗಳು ರಂಜಿಸಿದವು.ಕೋಲಾಟ, ಜಡೆ ಕೋಲಾಟ, ಕಂಸಾಳೆ, ಬೀಸು ಕಂಸಾಳೆ, ಗೊರವರ ಕುಣಿತಗಳು ಗಮನ ಸೆಳೆದವು. ಪೊಲೀಸ್ ಬ್ಯಾಂಡ್, ಅಶ್ವದಳ, ಸ್ಕೌಟ್ ಮತ್ತು ಗೈಡ್ಸ್‌ಗಳು ಮೆರವಣಿಗೆಯಲ್ಲಿ ಸಾಗಿದವು.

ದಾರಿಯುದ್ದಕ್ಕೂ ಸಹಸ್ರಾರು ಮಂದಿ ನಿಂತು ಜಂಬೂ ಸವಾರಿ ಮತ್ತು ಉತ್ಸವವನ್ನು ವೀಕ್ಷಿಸಿ ಪುಳಕಿತರಾದರು. ಶ್ರೀರಂಗನಾಥ ದೇವಾಲಯದ ಬಳಿ ಉತ್ಸವ ಪರಿಸಮಾಪ್ತಿಯಾಯಿತು.

ಎಂಇಎಸ್ ವಿರುದ್ಧ ಗೃಹ ಸಚಿವ ಅಶೋಕ್ ಕಿಡಿ

ಮಂಡ್ಯ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸುವ ಸಂಬಂಧ ಬೆಳಗಾವಿನಗರಪಾಲಿಕೆಯ ಮಹಾ ರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು ಅಡ್ಡಿಪಡಿಸಿ, ಗಲಾಟೆ ಮಾಡಿರುವುದು ಅಕ್ಷಮ್ಯ ಎಂದು ಗೃಹ ಸಚಿವ ಆರ್.ಅಶೋಕ್ ಆಭಿಪ್ರಾಯಪಟ್ಟರು.ಶುಕ್ರವಾರ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ನಡೆದ ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗೆ ಹೀಗೆ ಅಗೌರವ ತೋರಿದ್ದು ಸರಿಯಲ್ಲ; ಈ ವರ್ತನೆ ಅವರು ಸದಸ್ಯರಾಗಲೂ ಯೋಗ್ಯರಲ್ಲ ಎಂಬುದನ್ನು ಬಿಂಬಿಸಿದೆ ಎಂದರು.ಕಂಬಾರ ಅವರಿಗೆ ಸಿಕ್ಕ ಗೌರವ ಕನ್ನಡಿಗರಿಗೇ ಸಿಕ್ಕ ಗೌರವ. ಎಂಇಎಸ್ ಸದಸ್ಯರ ಮೇಲೂ ಈ ನೆಲದ ಅನ್ನದ ಋಣವಿದೆ. ಇದನ್ನು ಅವರು ಮರೆಯಬಾರದು. ಎಂಇಎಸ್ ಸದಸ್ಯರ ವರ್ತನೆ ರಾಜ್ಯಕ್ಕೇ ಮಾಡಿದ ಅಪಮಾನ.  ಈ ವಿಷಯದಲ್ಲಿ ಅಲ್ಲಿನ ಮಹಾನಗರ ಪಾಲಿಕೆಯೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು. ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಅವ ರೊಂದಿಗೂ ಚರ್ಚೆ ನಡೆಸಿದ್ದು, ಎಂಇಎಸ್ ಸದಸ್ಯರ ಉದ್ಧಟತನದ ವರ್ತನೆಗೆ ಕಾನೂನು ಮೂಲಕವೇ ಕಡಿವಾಣ ಹಾಕಲಿದೆ ಎಂದರು.

ಶೂಟ್ ಇನ್ ಮೊಬೈಲ್!

ದಸರಾ ವೀಕ್ಷಣೆಗೆ ವಿದೇಶಿಯರು ಆಗಮಿಸಿದ್ದು ವಿಶೇಷ. ಗ್ರಾಮೀಣ ಭಾಗದಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮೊಬೈಲ್‌ನಿಂದಲೇ ದೃಶ್ಯ ಸೆರೆಹಿಡಿಯುವ ಯತ್ನ ಕಂಡುಬಂದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry