ಜನಮನ ಸೆಳೆದ ಅಂತರ ರಾಜ್ಯ ಜನಪದ ನೃತ್ಯೋತ್ಸವ

7

ಜನಮನ ಸೆಳೆದ ಅಂತರ ರಾಜ್ಯ ಜನಪದ ನೃತ್ಯೋತ್ಸವ

Published:
Updated:

ಕೂಡಲಸಂಗಮ: `ದೇಶಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಇಂದಿನ ಯುವ ಜನಾಂಗ ಮಾಡಬೇಕು. ದೇಶದ ಎಲ್ಲ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ನೃತ್ಯೋತ್ಸವಗಳು ದೇಶದ ಎಲ್ಲ ಭಾಗದಲ್ಲಿ ನಡೆಯಬೇಕು, ಬೇರೆ ಬೇರೆ ರಾಜ್ಯದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ನಮ್ಮಲ್ಲಿ ನಡೆಯಬೇಕು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ದೇಶದ ಎಲ್ಲ ರಾಜ್ಯದಲ್ಲಿ ನಡೆಯಬೇಕು~ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಅವರು ಇಲ್ಲಿಯ ಸಭಾ ಭವನದ ಬಸವ ವೇದಿಕೆಯಲ್ಲಿ ಭಾರತ ಸರ್ಕಾರದ ಸಂಸ್ಕೃತ ಸಚಿವಾಲಯ, ದಕ್ಷಿಣ ವಿಭಾಗ ಸಾಂಸ್ಕೃತಿಕ ಕೇಂದ್ರ ನಾಗಪುರ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿನಡೆದ ಲೋಕ ಕಲಾ ಯಾತ್ರಾ ಜನಪದ ನೃತ್ಯೋತ್ಸವ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ  ಉದ್ಘಾಟಿಸಿ ಮಾತನಾಡಿದರು.ಇಂದು ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುವ ಜನಪದ ನೃತ್ಯಗಳನ್ನು ಜನರು ಮರೆಯುತ್ತಿರುವರು ಅಂತಹ ನೃತ್ಯಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ಸರಕಾರ ಮಾಡಬೇಕು. ದೇಶಿಯ ಸಂಸ್ಕೃತಿಯ ಉಳಿವಿಗಾಗಿ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.ಸಮಾರಂಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಪಿ.ಎಸ್. ಚಿನಿವಾರ, ಲೋಕ ಕಲಾ ಯಾತ್ರಾ ತಂಡದ ಸಂಚಾಲಕ ಗೋಪಾಲ ಬೇತಾಳ, ಗುಲ್ಬರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ  ರಾಜೇಂದ್ರ ಯರನಾಳ ಮುಂತಾದವರು ಉಪಸ್ಥಿತರಿದ್ದರು.ಪಿ.ಎಸ್. ಚಿನಿವಾರ ಸ್ವಾಗತಿಸಿದರು. ಶರಣು ಪಾಟೀಲ ವಂದಿಸಿದರು.ಜನಪದ ನೃತ್ಯೋತ್ಸವ
: ಕೂಡಲಸಂಗಮ ಸಭಾ ಭವನದ ಬಸವ ವೇದಿಕೆಯಲ್ಲಿ ಕರ್ನಾಟಕದ ಡೊಳ್ಳು ಕುಣಿತ, ರಾಜಸ್ಥಾನದ ಮಂಗನಿಯಾರ, ಕಾಲಬೇಲಿಯ ಹಾಗೂ ಫುಮರ, ಮಹಾರಾಷ್ಟ್ರದ ಪವಾಡ ಭಾರೂಡ ಹಾಗೂ ಲಾವಣಿ, ಆಂಧ್ರಪ್ರದೇಶದ ದರಗಾಲು ವೀರ ನಾಟ್ಯಂ, ಒಡಿಶಾದ ಭವಾಯಿಯಾ, ಸಂಖಚಿನ್ನ, ಹರಿಯಾಣದ ಘುಮರ ಜನಪದ ನೃತ್ಯಗಳು ಎಲ್ಲರ ಗಮನ ಸೆಳೆದವು ಸಮಾರಂಭದಲ್ಲಿ 2 ಸಾವಿರಕ್ಕೂ ಅಧಿಕ ಜನಸ್ತೋಮ ನೃತ್ಯ ನೋಡುವುದರ ಜೋತೆಗೆ ಚಪ್ಪಾಳೆಯ ಮೂಲಕ ಕಲಾವಿದರಿಗೆ ಸ್ಫೂರ್ತಿ ತುಂಬಿದರು.ಕರ್ನಾಟಕದ ಡೊಳ್ಳು ಕುಣಿತದ ಮೂಲಕ ಸಮಾರಂಭ ಪ್ರಾರಂಭವಾಗಿ ಆಂಧ್ರಪ್ರದೇಶದ ದರಗಾಲು ವೀರ ನಾಟ್ಯಂ ಜನಪದ ನೃತ್ಯದ ಮೂಲಕ ಸಮಾರಂಭ ಮುಕ್ತಾಯಗೊಂಡಿತು.ಒರಿಸ್ಸಾದ ರನ್ನಪ್ಪ ನೃತ್ಯದಲ್ಲಿ ನೃತ್ಯಗಾರ ಬಾಯಿಯಲ್ಲಿ ಬ್ಲೇಡ ನುಂಗುವುದು, ಡೊಳ್ಳು ಕುಣಿತದಲ್ಲಿ ಡೊಳ್ಳಿನ ಮೇಲೆ ನಿಂತು ಡೊಳ್ಳು ಬಾರಿಸುವುದು, ರಾಜ್ಯಸ್ಥಾನದ ನೃತ್ಯಗಾರ್ತಿಯರು ತಟ್ಟೆಯ ಮೇಲೆ ಖಡ್ಗದ ಮೇಲೆ ನೃತ್ಯ ಮಾಡುವುದು, ಒರಿಸ್ಸಾದ ಶಂಖಧ್ವನಿ ಜನಮನ ಸೆಳೆದವು. ಕರ್ನಾಟಕದ ಪುಂಡಲೀಕ ಡೊಳ್ಳು ಬಾರಿಸುವುದು, ರಾಜಸ್ಥಾನದ ಲುಮ್ಮೋನಾಥನ ನೃತ್ಯ, ಮಹಾರಾಷ್ಟ್ರದ ಗುಕಾವಂತ ಪವಾರ ಲಾವಣಿ ಪದ, ಒಡಿಶಾದ ರಾಜೇಂದ್ರ ಪ್ರಸಾದರ ಸಂಖಚಿನ್ನ ನೃತ್ಯ ಪ್ರೇಕ್ಷಕರ ಮನಸೆಳೆಯಿತು.ಲೋಕ ಕಲಾ ಯಾತ್ರೆ ಏನು? ಏಕೆ?: ಭಾರತ ಸರಕಾರ ದೇಶದ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಲುವಾಗಿ ಸಂಸ್ಕೃತಿ ಸಚಿವಾಲಯದ ಮೂಲಕ ಭಾತರದ ಎಲ್ಲ ಭಾಗದಲ್ಲಿ ಲೋಕ ಕಲಾ ಯಾತ್ರೆಯನ್ನು ಹಮ್ಮಿಕೊಂಡಿದೆ. ಭಾರತವನ್ನು 7 ವಲಯವಾಗಿ ವಿಂಗಡಿಸಿ ಈ ಯಾತ್ರೆ ಹಮ್ಮಿಕೊಂಡಿದೆ. ಮಧ್ಯ ದಕ್ಷಿಣ ವಲಯದಲ್ಲಿ ಕರ್ನಾಟಕದ ಜೊತೆಗೆ ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಹರಿಯಾಣ ರಾಜ್ಯಗಳು ಇದರಲ್ಲಿ ಬರುವವು. ಈಗಾಗಲೇ ಈ ಯಾತ್ರೆ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಮುಗಿದಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ 5ರಿಂದ ಪ್ರಾರಂಭವಾಗಿದ್ದು, 12ರಂದು ಮುಕ್ತಾಯವಾಯಿತು. ಕರ್ನಾಟಕದ ಗುಲ್ಬರ್ಗ, ಬೀದರ, ವಿಜಾಪುರದ ಸಿಂದಗಿ, ಬಾಗಲಕೋಟೆ ಕೂಡಲಸಂಗಮದಲ್ಲಿ ನೃತ್ಯೋತ್ಸವ ಸಮಾರಂಭ ನಡೆದಿರುವುದು ಶುಕ್ರವಾರ ರಾಯಚೂರಿನಲ್ಲಿ ಆರಂಭವಾಗಿದ್ದು, ನಂತರ ಆಂಧ್ರಪ್ರದೇಶ, ಒಡಿಶಾ, ಹರಿಯಾಣದಲ್ಲಿ ಈ ಯಾತ್ರೆ ಸಂಚರಿಸುವುದು ಎಂದು ಯಾತ್ರೆಯ ಹಿರಿಯ ಅಧಿಕಾರಿ ದಿನಕರ ದಾಟೇಕರ ಸುದ್ದಿಗಾರರಿಗೆ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry