ಶನಿವಾರ, ನವೆಂಬರ್ 23, 2019
18 °C

ಜನಮನ ಸೆಳೆದ `ಮೈತ್ರಿಗಾಗಿ ಮುರಳಿಗಾನ'

Published:
Updated:

ಕುಮಟಾ:  `ತಲಸೇಮಿಯಾ ಮೇಜರ್' ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಯಲ್ಲಾಪುರದ ಕೃಷಿಕ ಶಂಕರ ಭಟ್ಟರ 11 ವರ್ಷದ ಮಗಳು  ಮೈತ್ರಿಯ ಚಿಕಿತ್ಸೆ ಸಹಾಯಾರ್ಥ ಕುಮಟಾದಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಕುಮಟಾ ಪ್ರೆಸ್  ಕ್ಲಬ್ ನೆರವಿನೊಂದಿಗೆ ಏರ್ಪಡಿಸಿದ್ದ  ಪ್ರವೀಣ ಗೋಡ್ಖಿಂಡಿ ಅವರ ಕೊಳಲು ವಾದನ ಕಾರ್ಯಕ್ರಮ ಜನಮನ ಸೆಳೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರವೀಣ ಗೋಡ್ಖಿಂಡಿ, ` ವಿದ್ಯಾರ್ಥಿನಿ ಮೈತ್ರಿಯ ಆರೋಗ್ಯ ಸುಧಾರಣೆಗಾಗಿ ಎಲ್ಲರೂ ಕೈ ಜೋಡಿಸುತ್ತಿರುವ ಕಾರ್ಯಕ್ರಮ ಇದಾಗಿದೆ' ಎಂದರು.ಉದ್ಯಮಿ ಮುರಳೀಧರ ಪ್ರಭು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರವೀಣ ಗೋಡ್ಖಿಂಡಿ, ತಬಲಾ ವಾದಕ ಪಂಡಿತ್ ರಾಜೇಂದ್ರ ನಾಕೋಡ್, ಕೊಳಲು ತಯಾರಕ ಎಂ.ವಿ.ಹೆಗಡೆ ನೆಟ್ಟಗಾರ ಅವರನ್ನು ಸನ್ಮಾನಿಸಲಾಯಿತು. ಪ್ರವೀಣ ಗೋಡ್ಖಿಂಡಿ ಹಾಗೂ ಅವರ ಮಗ ಷಡಜ್ ಗೋಡ್ಖಿಂಡಿ ಅವರ  ಬಾನ್ಸುರಿ ಜುಗಲ್‌ಬಂದಿ ಸಂಗೀತಾಸಕ್ತರನ್ನು ಸೆಳೆಯಿತು. ಇದಕ್ಕೂ ಮೊದಲು ಸಿಂಧು  ಹೆಗಡೆ ಹಾಗೂ ವೈಭವಿ ಭಟ್ಟ ಅವರು ನೃತ್ಯ ಪ್ರದರ್ಶನ ನೀಡಿದರು.ಯಲ್ಲಾಪುರದ ಶಂಕರ ಭಟ್ಟ, ಮೈತ್ರಿ, ಅನ್ಸಾರ್ ಶೇಖ್, ಎಸ್.ಎಸ್.ಹೆಗಡೆ, ಎಂ.ಎಂ. ಹೆಗಡೆ, ಎಂ.ಬಿ.ಪೈ, ತ್ರಿವಿಕ್ರಮ ಪೈ ಮೊದಲಾದವರಿದ್ದರು.ರೋಟರಿ ಕ್ಲಬ್ ಅಧ್ಯಕ್ಷ ಎಸ್ ವಿ ಹೆಗಡೆ ನಂದಯ್ಯನ್ ಸ್ವಾಗತಿಸಿದರು. ಶ್ರೀಕಾಂತ ಭಟ್ಟ ಹಾಗೂ ಜಿ.ಎಸ್.ಹೆಗಡೆ ನಿರೂಪಿಸಿದರು. ಲಯನ್ಸ್  ಕ್ಲಬ್ ಅಧ್ಯಕ್ಷ ಡಾ. ವಿ.ಡಿ.ಕೇರೂರು ವಂದಿಸಿದರು.

ಪ್ರತಿಕ್ರಿಯಿಸಿ (+)