ಜನರನ್ನು ಸಂಕಷ್ಟಕ್ಕೀಡು ಮಾಡಿದ ಉದಾರೀಕರಣ

7

ಜನರನ್ನು ಸಂಕಷ್ಟಕ್ಕೀಡು ಮಾಡಿದ ಉದಾರೀಕರಣ

Published:
Updated:

ಬಳ್ಳಾರಿ: ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣ ನೀತಿಗಳಿಂದ ರಾಷ್ಟ್ರೀಯ ಬ್ಯಾಂಕುಗಳಿಗೆ ದೊಡ್ಡಪೆಟ್ಟು ಬಿದ್ದಿದ್ದು, ಬಡ ಹಾಗೂ ಸಾಮಾನ್ಯ ವರ್ಗ ಸಂಕಷ್ಟಕ್ಕೀಡು ಮಾಡಿದೆ ಎಂದು ರಾಜ್ಯ ಪ್ರದೇಶ ಬ್ಯಾಂಕ್ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಸಂತ ರೈ ತಿಳಿಸಿದರು. ನಗರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಕೇಂದ್ರದಲ್ಲಿ ಆಡಳಿತ ನಡೆಸಿದ ಎನ್‌ಡಿಎ ಹಾಗೂ ಸದ್ಯ ಆಳ್ವಿಕೆ ನಡೆಸುವ   ಯುಪಿಎ ಸರ್ಕಾರವು ಬಡ ಹಾಗೂ ದುಡಿಯುವ ವರ್ಗದ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೇವಲ ಬಂಡವಾಳ ಹೂಡಿಕೆದಾರರ ರಕ್ಷಣೆ ಹಾಗೂ ಪೋಷಣೆಗೆ ನಿಂತಿವೆ ಎಂದು ಅವರು ದೂರಿದರು. ದೇಶದ ಆರ್ಥಿಕ ನೀತಿಗಳು ಈ ವರ್ಗದ ಜನರ ಪರವಾಗಿಲ್ಲ. ಹೀಗಾಗಿಯೇ ಜನಪರ ಧೋರಣೆಗಳು ಕಾಣೆಯಾಗುತ್ತಿವೆ. ಇಲ್ಲಿನ ಬ್ಯಾಂಕಿಂಗ್, ವಿಮಾ ಕ್ಷೇತ್ರಗಳನ್ನು ಸಂಪೂರ್ಣ ಖಾಸಗೀಕರಣಗೊಳಿಸಿ ವಿದೇಶಿ ಬಂಡವಾಳವನ್ನು ಆಹ್ವಾನಿಸಲು ಕೇಂದ್ರ ಸರ್ಕಾರ ತುದಿಗಾಲಲ್ಲಿ ನಿಂತಿದೆ ಎಂದು ಅವರು ತಿಳಿಸಿದರು.ಐಎಂಎಫ್ ಹಾಗೂ ಡಬ್ಲೂಟಿಒ ಒತ್ತಾಸೆಗಳಿಗೆ ಮಣಿದು ಈ ನೆಲದ ಜನರ ಹಿತಾಸಕ್ತಿಗಳನ್ನು ಕಡೆಗಣಿಸಲಾಗುತ್ತಿದೆ. ಇದರ ವಿರುದ್ದ ಕಾರ್ಮಿಕ ವರ್ಗ ಹೋರಾಟ ಕೈಗೆತ್ತಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೂಡಿಕೆಯಾಗುವ ಸಾರ್ವಜನಿಕರ ಲಕ್ಷಾಂತರ ಕೋಟಿ  ಹಣವನ್ನು ಯಾರು ನಿಯಂತ್ರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ನಮ್ಮ ದೇಶದ ಆರ್ಥಿಕ ನೀತಿಗಳು ಹೇಗಿರಬೇಕು ಎಂಬ ನಿರ್ಧಾರ ಕೈಗೊಳ್ಳುವುದು ಯಾರು ಎಂಬ ಪ್ರಶ್ನೆಗೆ ಇನ್ನು ಕೇಂದ್ರ ಸರ್ಕಾರ ಉತ್ತರ ಕಂಡುಕೊಂಡಿಲ್ಲ ಎಂದು ಅವರು ಆಪಾದಿಸಿದರು.ಎಲ್ಲವನ್ನೂ ವಿದೇಶದಲ್ಲಿ ಇರುವ ಐಎಂಎಫ್ ಮತ್ತು ವಿಶ್ವ ವಾಣಿಜ್ಯ ಸಂಸ್ಥೆಯೇ ನಿರ್ಧರಿಸುವಂತಿದ್ದರೆ, ಇನ್ನು ನಮ್ಮ ಕೇಂದ್ರ  ಸರ್ಕಾರದ ಕೆಲಸವೇನು? ಎಂದು ಈ ಮಣ್ಣಿನಲ್ಲಿ ದುಡಿಯುವ ಜನರು ಪ್ರಶ್ನಿಸಬೇಕಿದೆ ಎಂದರಲ್ಲದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ ) ನಿರಂತರವಾಗಿ ಹೋರಾಟ ಕೈಗೆತ್ತಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದರು.ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳು ಸಾರ್ವಜನಿಕ ಸ್ವತ್ತು. ಇಲ್ಲಿ ಗ್ರಾಹಕರ ಹಿತಾಸಕ್ತಿಯೇ ಮುಖ್ಯವಾಗಬೇಕೇ ಹೊರತು ಜನರ ಹಣವನ್ನು ಸಾಲದ ರೂಪದಲ್ಲಿ ಪಡೆದು ತಮ್ಮ ಆಸ್ತಿಯನ್ನು ದ್ವಿಗೊಣಗೊಳಿಸಿಕೊಳ್ಳುವ ಬಂಡವಾಳಗಾರರ ಹಿತ ಕಾಯುವ ಕೆಲಸ ಆಗಬಾರದು ಎಂದರು. ಕೆಪಿಬಿಇಎಫ್ ಅಧ್ಯಕ್ಷ ಎನ್.ವೇಣುಗೋಪಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜೆ.ಯೋಗೇಂದ್ರ, ಹಂಪಯ್ಯ, ಆನಂದ ತೀರ್ಥ, ಜಯರಾಮ್, ಖಜಾಂಚಿ ರಾಜುಲೋಚನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry