ಶನಿವಾರ, ಜನವರಿ 25, 2020
16 °C

ಜನರಲ್ಲಿ ಅಚ್ಚರಿ ತಂದ ಶ್ರೀರಾಮಸೇನೆ ಕುತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ/ಸಿಂದಗಿ: `ದೇಶಭಕ್ತ, ಸಂಸ್ಕೃತಿ ರಕ್ಷಕ~ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಶ್ರೀರಾಮ ಸೇನೆಯವರೇ ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ಬಹಿರಂಗಗೊಳ್ಳುತ್ತಿದ್ದಂತೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಇವರು ಹೀಗೂ ಮಾಡುತ್ತಾರಾ? ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, `ಚುನಾವಣೆ ಹತ್ತಿರ ಬಂತ್ ನೋಡ್ರೀ. ಇನ್ನು ಇದೆಲ್ಲ ಸಾಮಾನ್ಯ~ ಎಂದು ಕೆಲವರು ರಾಜಕಾರಣಿಗಳತ್ತ ಬೆರಳು ಮಾಡುತ್ತಿದ್ದಾರೆ.“ಸಿಂದಗಿಯ ಮಿನಿ ವಿಧಾನ ಸೌಧದ ಎದುರು ಪಾಕಿಸ್ತಾನ ಧ್ವಜ ಹಾರಿಸಿದ ಘಟನೆಯ ನಂತರದ ಬೆಳವಣಿಗೆಗಳು ಸಂಶಯಾಸ್ಪದವಾಗಿದ್ದವು. ಈ ಸಂಶಯದ ಜಾಡು ಪೊಲೀಸ್ ತನಿಖೆಗೆ ಸಹಕಾರಿಯಾಯಿತು. ಆರೋಪಿಗಳು ತಾವೇ ಹೆಣೆದ ಬಲೆಗೆ ಬಿದ್ದರು” ಎಂದು ವ್ಯಾಖ್ಯಾನಿಸಲಾಗುತ್ತಿದೆ.“ಸಿಂದಗಿಯ ಮಿನಿ ವಿಧಾನಸೌಧದ ಆವರಣದಲ್ಲಿರುವ ಧ್ವಜ ಸ್ಥಂಭದಲ್ಲಿ ಪಾಕ್ ಧ್ವಜಾರೋಹಣ ಮಾಡಿರುವ ವಿಷಯ ಎಲ್ಲರಿಗಿಂತ ಮೊದಲು ಶ್ರೀರಾಮ ಸೇನೆಯವರಿಗೇ ಗೊತ್ತಾಗಿತ್ತು. ಈ ಘಟನೆ ಖಂಡಿಸಿ ಅವರೆಲ್ಲ `ಕೆರಳಿದ್ದರು~.`ಎಸ್ಪಿ, ಡಿಸಿ ಬರುವರೆಗೆ ಈ ಧ್ವಜ ಕೆಳಗಿಳಿಸುವುದು ಬೇಡ~ ಎಂದು ಅಲ್ಲಿದ್ದ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಮನವಿ ಮಾಡಿದರೂ ಅವರು ಕೇಳಲಿಲ್ಲ. ಒಬ್ಬ ಕಾರ್ಯಕರ್ತ ಸರಸರನೆ ಆ ಧ್ವಜ ಸ್ಥಂಭವನ್ನೇರಿ ಅಲ್ಲಿ ಹಾರುತ್ತಿದ್ದ ಪಾಕ್ ಧ್ವಜ ಕೆಳಗಿಳಿಸಿಬಿಟ್ಟ. ಎಲ್ಲರೂ ಸೇರಿ ಅದನ್ನು ಸುಡಲು ಯತ್ನಿಸುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು ಆ ಧ್ವಜ ಕಿತ್ತುಕೊಂಡರು ಎಂಬುದು ಪ್ರತ್ಯಕ್ಷದರ್ಶಿಗಳ ವಿವರಣೆ~ ಎನ್ನುತ್ತಾರೆ ಸಿಂದಗಿ ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಪಾಟೀಲ (ಗಣಿಹಾರ).“ತಹಸೀಲ್ದಾರರು ಹಾಗೂ ಪಂಚರ ಸಮ್ಮುಖದಲ್ಲಿ  ಪೊಲೀಸರು ಪಂಚನಾಮೆ ನಡೆಸಿ ಆ ಧ್ವಜವನ್ನು ವಶಪಡಿಸಿಕೊಳ್ಳಬೇಕಿತ್ತು. ಧ್ವಜ ಸ್ಥಂಭವನ್ನು ಬೆರಳಚ್ಚು ತಜ್ಞರು ಪರಿಶೀಲಿಸಬೇಕಿತ್ತು. ಆದರೆ, ಇದೆಲ್ಲ ನಡೆಯುವ ಮುನ್ನವೇ ಧ್ವಜ ತೆಗೆಯಲು ಕಾರ್ಯಕರ್ತರೇ ಕಾರ್ಯಾಚರಣೆಗೆ ಇಳಿದಿದ್ದರು. ಒಂದು ಟಿನ್ ಬೀಯರ್ ಬಾಟಲ್, ಮುಸ್ಲಿಂ ಸಮಾಜದವರು ಧರಿಸುವ ಟೊಪ್ಪಿಗೆ ಘಟನಾ ಸ್ಥಳದಲ್ಲಿ ದೊರಕಿತ್ತು. ಆದರೆ, ಆ ಟೊಪ್ಪಿಗೆ ಹೊಚ್ಚ ಹೊಸದಾಗಿತ್ತು. ತಲೆಗೆ ಹಾಕಿಕೊಂಡ ಯಾವ ಕುರುಹೂ ಆ ಟೊಪ್ಪಿಗೆಯಲ್ಲಿ ಇರಲಿಲ್ಲ” ಎಂಬುದು ಅವರ ವಿವರಣೆ.“ಸಿಂದಗಿ ಪಟ್ಟಣದಲ್ಲಿ ಒಂದು ತಿಂಗಳಲ್ಲಿ ಮೂರು ಘಟನೆಗಳು ನಡೆದಿವೆ. ಕಾಳಿಕಾದೇವಿಯ ಮಂದಿರದ ಗೋಡೆಯ ಮೇಲೆ `786~ ಎಂದು ಬರೆಯಲಾಗಿತ್ತು. ಸ್ವಾಮಿ ವಿವೇಕಾನಂದ ಪುತ್ಥಳಿಯ ಕಣ್ಣಿಗೆ ಹಸಿರು ಬಟ್ಟೆ ಕಟ್ಟಲಾಗಿತ್ತು. ಇದನ್ನೆಲ್ಲ ಗಮನಿಸಿದರೆ ಇದು ವ್ಯವಸ್ಥಿತ ಸಂಚು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ” ಎಂಬುದು ಮೆಹಬೂಬ ಹಸರಗುಂಡಗಿ, ಮುಸ್ತಾಕ್ ಮುಲ್ಲಾ ಅವರ ಶಂಕೆ.“ಈ ಘಟನೆಯ ಹಿಂದೆ ದೊಡ್ಡ ರಾಜಕೀಯ ವ್ಯಕ್ತಿಗಳಿದ್ದಾರೆ. ಅವರ ಪಿತೂರಿಯ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಘಟನೆ ಹಿಂದಿದ್ದವರನ್ನೂ ಬಂಧಿಸಬೇಕು. ಈಗ ಬಂಧಿತರು ಯಾರೇ ಇರಲಿ. ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು” ಎಂಬುದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲರ ಆಗ್ರಹ.“ಈಗ ಬಂಧಿತರು ಅಮಾಯಕರು. ಅವರಿಗೆ ಇನ್ನೂ ತಿಳಿವಳಿಕೆ ಇಲ್ಲ. ಅವರ ಈ ಕೃತ್ಯದ ಹಿಂದೆ ರಾಜಕೀಯ ಶಕ್ತಿಗಳ ಕೈವಾಡ ಇರಬಹುದು. ಅದು ಪತ್ತೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎನ್ನುತ್ತಾರೆ ವಕೀಲ ಅಶೋಕ ಗಾಯಕವಾಡ.ಎಲ್ಲರೂ ವಿದ್ಯಾರ್ಥಿಗಳು

ಪೊಲೀಸರಿಂದ ಬಂಧಿಸಲ್ಪಟ್ಟಿರುವ ರಾಕೇಶ್ ಸಿದ್ರಾಮಯ್ಯ ಮಠ ಮೂಲತಃ ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದವ. ಸದ್ಯ ಸಿಂದಗಿಯ ಸಾಯಿ ನಗರದಲ್ಲಿ ವಾಸವಾಗಿದ್ದಾನೆ. ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಈತ ಅನುತ್ತೀರ್ಣನಾಗಿದ್ದಾನೆ. ಈತನ ತಂದೆ ಯಾದಗಿರಿ ಜಿಲ್ಲೆಯ ಮಲ್ಲಾ ಗ್ರಾಮದಲ್ಲಿ ಶಿಕ್ಷಕರಾಗಿದ್ದಾರೆ.`ನಮ್ಮ ತಮ್ಮ ಈ ಕೃತ್ಯವೆಸಗಲು ಸಾಧ್ಯವೇ ಇಲ್ಲ. ಆತ ಆರನೇ ತರಗತಿಯಿಂದಲೂ ಕಟ್ಟಾ ಹಿಂದುತ್ವವಾದಿಯಾಗಿದ್ದ. ಬಾಲ್ಯದಿಂದಲೂ ಹಿಂದುತ್ವ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ. ಆತ ಹೇಗೆ ಈ ಕೃತ್ಯವೆಸಗಲು ಸಾಧ್ಯ~ ಎಂಬುದು ಆತನ ಅಣ್ಣ ರವಿಯ ಪ್ರಶ್ನೆ.ಮಲ್ಲನಗೌಡ ವಿಜಯಕುಮಾರ ಪಾಟೀಲ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮದವ. ಈತನೂ ಡಿಪ್ಲೊಮಾ ಫೇಲ್. ತಂದೆ ವಿಜಯಕುಮಾರ (ವಿಜೂಗೌಡ) ಅವರ ಉದ್ಯೋಗ ಒಕ್ಕಲುತನ. ಈತನ ಅಜ್ಜ ಕನ್ನೊಳ್ಳಿಯ ಗುರುಪಾದಪ್ಪಗೌಡ ಪಾಟೀಲರು ತಾಲ್ಲೂಕಿನ ಜನರಿಗೆ ಚಿರಪರಿಚಿತರು.ಸುನೀಲ್ ಮಡಿವಾಳಪ್ಪ ಅಗಸರ ಸಿಂದಗಿ ತಾಲ್ಲೂಕಿನ ಚಾಂದಕವಠೆ ಗ್ರಾಮದವ. ಈತನ ತಂದೆ ಸಿಂದಗಿಯ ಹಳೇ ಬಜಾರ್‌ನಲ್ಲಿ  ಇಸ್ತ್ರೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.“ಬಂಧಿತ ಆರೋಪಿಗಳ ಬಗೆಗೆ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಅವರ ಉದ್ದೇಶ ಹಾಗೂ ಘಟನೆಗೆ ಏನು ಪ್ರೇರಣೆ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ” ಎಂಬುದು ಎಸ್ಪಿ ಡಾ.ಡಿ.ಸಿ. ರಾಜಪ್ಪ ಅವರ ವಿವರಣೆ.“ಎರಡು ವರ್ಷಗಳ ಹಿಂದೆ ವಿಜಾಪುರ ನಗರದ ಟಿಪ್ಪು ಸುಲ್ತಾನ ಚೌಕ್ ಹಾಗೂ ಮನಗೂಳಿ ಅಗಸಿಯಲ್ಲಿ ಪಾಕ್ ಧ್ವಜ ಹಾರಿಲಾಗಿತ್ತು. ವಿಜಾಪುರ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದ ಆರೋಪಿಗಳನ್ನೂ ಪತ್ತೆ ಹಚ್ಚಬೇಕು” ಎಂಬುದು ದಲಿತ ಮುಖಂಡ ನಾಗರಾಜ ಲಂಬು ಅವರ ಆಗ್ರಹ.

ಪ್ರತಿಕ್ರಿಯಿಸಿ (+)