ಸೋಮವಾರ, ಮೇ 25, 2020
27 °C

ಜನರಿಂದ ಆರೋಪಿಗೆ ಧರ್ಮದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಅಲಹಾಬಾದ್ ಬ್ಯಾಂಕ್ ಶಾಖೆಯ ಕಚೇರಿಯಲ್ಲಿ ಗ್ರಾಹಕರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ದುಷ್ಕರ್ಮಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.ಮಾಲೂರಿನ ಮೋಹನ್ ಕುಮಾರ್ (30) ಹಣ ದೋಚಲು ಯತ್ನಿಸಿ ಸಿಕ್ಕಿ ಬಿದ್ದ ಆರೋಪಿ. ನೈಸ್ ಕಂಪೆನಿಯ ಉದ್ಯೋಗಿಗಳಾದ ಮಾಣಿಕ್ಯ ಗುಪ್ತ, ಸತೀಶ್ ಮತ್ತು ಎಂ.ಪ್ರಕಾಶ್ ಎಂಬುವವರು ನೈಸ್ ರಸ್ತೆಯ ಟೋಲ್‌ಗೇಟ್‌ಗಳಲ್ಲಿ ವಾಹನಗಳಿಂದ ಸಂಗ್ರಹಿಸಲಾಗಿದ್ದ 79 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್‌ಗೆ ಕಟ್ಟಲು ಬಂದಿದ್ದ ಸಂದರ್ಭದಲ್ಲಿ ಮೋಹನ್ ಆ ಹಣವನ್ನು ಕಳವು ಮಾಡಲೆತ್ನಿಸಿ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಕಾಶ್ ಮತ್ತು ಸತೀಶ್ ಬ್ಯಾಂಕ್ ಹೊರಗೆ ನಿಂತಿದ್ದರು. ಮಾಣಿಕ್ಯ ಗುಪ್ತ ಅವರು ಹಣವಿದ್ದ ಎರಡು ಬ್ಯಾಗ್‌ಹಿಡಿದುಕೊಂಡು ಕ್ಯಾಶ್ ಕೌಂಟರ್ ಬಳಿ ನಿಂತಿದ್ದ ವೇಳೆ ಬ್ಯಾಂಕ್‌ನಲ್ಲಿ ಹೊಂಚು ಹಾಕುತ್ತಿದ್ದ ಮೋಹನ್, ಗುಪ್ತ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಒಂದು ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾಗಲೆತ್ನಿಸಿದ.ಆಗ ಅವರು ಕೂಗಿಕೊಂಡಾಗ ಬ್ಯಾಂಕ್‌ನ ಹೊರಗೆ ನಿಂತಿದ್ದ ಪ್ರಕಾಶ್, ಸತೀಶ್ ಹಾಗೂ ಬ್ಯಾಂಕ್‌ನಲ್ಲಿದ್ದ ಇತರೆ ಗ್ರಾಹಕರು ಆರೋಪಿಯನ್ನು ಹಿಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಮೋಹನ್ ಮಾಲೂರಿನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಆದರೆ ವ್ಯಾಪಾರದಲ್ಲಿ ನಷ್ಟ ಸಂಭವಿಸಿ, ಸುಮಾರು ಏಳು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸುವ ಸಲುವಾಗಿ ಕಳವು ಮಾಡಲು ಯತ್ನಿಸಿದ್ದಾನೆ.ಕಳೆದ ಮೂರು ದಿನಗಳಿಂದ ಆತ ಬ್ಯಾಂಕ್ ಬಳಿಯೇ ತಿರುಗಾಡುತ್ತಿದ್ದ. ಪ್ರತಿನಿತ್ಯ ನೈಸ್ ಕಂಪೆನಿ ಉದ್ಯೋಗಿಗಳು ಹಣ ಕಟ್ಟಲು ಬ್ಯಾಂಕ್ ಬರುತ್ತಿದ್ದನ್ನು ಗಮನಿಸಿಯೇ ಆತ ಈ ಕೃತ್ಯ ಎಸಗಿದ್ದಾನೆ ಪೊಲೀಸರು ಮಾಹಿತಿ ನೀಡಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.