ಸೋಮವಾರ, ನವೆಂಬರ್ 18, 2019
29 °C
ವೋ

ಜನರಿಂದ ರಾಜಕೀಯ ಭ್ರಷ್ಟವೋ? ರಾಜಕೀಯದಿಂದ ಜನ ಭ್ರಷ್ಟರೋ?

Published:
Updated:

ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಪಕ್ಷಗಳು ಕಾರ್ಯತಂತ್ರದಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ವಿಧಾನಸಭಾ ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಅಥವಾ ನಿಲ್ಲಿಸುವ ಪಕ್ಷ ಆ ಕ್ಷೇತ್ರದ ಮತದಾರನನ್ನು ಭೇಟಿ ಮಾಡುವುದಕ್ಕೆ ತನ್ನ ಪೂರ್ಣ ಸಮಯವನ್ನು ಹಾಗೂ  ಕಾರ್ಯಕರ್ತರನ್ನು ಬೂತ್ ಮಟ್ಟದಲ್ಲಿ ಕೇಂದ್ರೀಕರಿಸಬೇಕು. ಖರ್ಚು ಮಾಡುವ ಎಲ್ಲಾ ಮೊತ್ತವೂ ಬೂತ್ ನಾಯಕರ ಮೂಲಕವೇ ಆಗಬೇಕು. ತಲಾ ಬೂತಿಗೆ ಅಗತ್ಯವಿರುವಷ್ಟು ಮಾತ್ರ ಖರ್ಚು ಮಾಡಬೇಕು. ಸ್ವಲ್ಪ ಜಾಹೀರಾತು, ಪುಟ್ಟ ಪುಟ್ಟ ಸಭೆಗಳಿಗಾಗಿ ಸ್ಪಲ್ಪ ಖರ್ಚು ಮಾಡಲಿ ಸಾಕು!ಮತದಾರನ ಬಳಿ ತಲುಪುವುದು-ಮನವರಿಕೆ ಮಾಡುವುದು ಮುಖ್ಯ. ನಿರ್ಧಾರ ಆತನದೇ! ಯುವಕ ಮಂಡಲದ ಅಧ್ಯಕ್ಷ, ಜಾತಿ ನಾಯಕ-ಧಾರ್ಮಿಕ ನೇತಾರರು ನಿರ್ದಿಷ್ಟ ವ್ಯಕ್ತಿಗೆ ಓಟು ಕೊಡಿಸುವ ಪರಿಸ್ಥಿತಿ ತೀರಾ ಅವಾಸ್ತವಿಕ! ನಾವು ಕೊಡುವ ಹಣ ಎಲ್ಲವೂ ಓಟಾಗುತ್ತದೆ ಎಂದಾದರೆ 3 ಕೋಟಿಯಂತೆ ಹಣ ಹಂಚಿದ 3 ಪಕ್ಷದ ಅಭ್ಯರ್ಥಿಯೂ ಗೆಲ್ಲಬೇಕಲ್ಲವೇ?ರಾಜ್ಯಸಭೆ ಸದಸ್ಯರಾಗಲು, ವಿಧಾನಪರಿಷತ್ ಸದಸ್ಯರಾಗಲು ಕೆಲವು ಕೋಟಿ ಹಣ ಆಯಾ ಪಕ್ಷಕ್ಕೆ ನೀಡಬೇಕು. ಅಲ್ಲೊಂದು, ಇಲ್ಲೊಂದು ಪಕ್ಷದ ಹಿರಿಯರನ್ನು ಮಾತ್ರ ಹಣವಿಲ್ಲದೆ ಆಯ್ಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಆಗರ್ಭ ಶ್ರಿಮಂತರು ಮಾತ್ರ ಆಯ್ಕೆಯಾಗುವ ದುರಂತ! ಮುಂದೊಂದು ದಿನ ನಿತ್ಯಾನಂದ ಸ್ವಾಮಿ ರಾಜ್ಯಸಭೆ ಸದಸ್ಯರಾದರೂ ಆಶ್ಚರ್ಯಪಡಬೇಕಾಗಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ, ನೂರು ವರ್ಷ ಕಳೆದರೂ, ಅಣ್ಣಾ ಹಜಾರೆಯಂತಹವರು ರಾಜ್ಯಸಭಾ ಸದಸ್ಯರಾಗಲು ಸಾಧ್ಯವಿಲ್ಲ.ಯಾರು ಭ್ರಷ್ಟರು?

ರಾಜಕಾರಣದಿಂದ ಜನ ಭ್ರಷ್ಟರಾಗ್ದ್ದಿದಾರೊ, ಭ್ರಷ್ಟ ಜನರಿಂದ ರಾಜಕಾರಣಿ ಭ್ರಷ್ಟನಾಗಿದ್ದಾರೊ ಎಂಬ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ, ಭ್ರಷ್ಟ ರಾಜಕಾರಣಿ ಬೇಡ ಎಂಬ ನಿಲುವು ಜನತೆಯದ್ದಾದರೆ, ಒಳ್ಳೆಯವರು ಚುನಾವಣೆಯಲ್ಲಿ ಗೆಲ್ಲಬೇಕು. ನಾನು ಚುನಾವಣೆಗೆ ಹಣ ಖರ್ಚು ಮಾಡುವುದಿಲ್ಲ, ಭ್ರಷ್ಟಾಚಾರವನ್ನು ಮಾಡುವುದಿಲ್ಲ ಎಂದು ಘೋಷಿಸಿ ಒಬ್ಬ ಯೋಗ್ಯ ವ್ಯಕ್ತಿ ಗಂಭೀರವಾಗಿ ಚುನಾವಣೆ ನಿಂತರೆ ಅವನು  `ಜೋಕರ್' ಆಗುತ್ತಾನೆ. (ಅಂತಹ ಉದಾಹರಣೆ ಇದೆ) ಭ್ರಷ್ಟಾಚಾರದಲ್ಲಿ, ಅನಾಚಾರದಲ್ಲಿ ಜೈಲು ಸೇರಿದವರಿಗೆ ಜನ ಜೈಕಾರ ಹಾಕುತ್ತಾರೆ. ಅದೇ ಮಂತ್ರಿ ಧಾರ್ಮಿಕ ಸಭೆ, ಶಾಲಾ ವಾರ್ಷಿಕೋತ್ಸವದ ಪ್ರಮುಖ ಭಾಷಣಗಾರ!. ಇದನ್ನೆಲ್ಲ ಮಾಡುವವರು ಮತ್ತು ಭ್ರಷ್ಟ ನಾಯಕನಿಗೆ ಸಾಮಾಜಿಕ ಮಾನ್ಯತೆ ನೀಡುವವರು ಯಾರು? ಎಂಬುದನ್ನು ನೋಡಿದಾಗ ದಿಗಿಲು ಉಂಟಾಗುತ್ತದೆ. ಯಾಕೆಂದರೆ ಅವರೆಲ್ಲ ನಮ್ಮದೇ ಜನ! ಮಾಧ್ಯಮಗಳೂ ಅಷ್ಟೆ, ಅನ್ಯಾಯ-ಅತ್ಯಾಚಾರ ಮಾಡಿ, ಜೈಲು ಶಿಕ್ಷೆ ಅನುಭವಿಸಿ ಹೊರಬಂದವ ಮಂತ್ರಿ ಆದರೆ ಅವನ ಹೇಳಿಕೆಯೂ ಮುಖಪುಟದ ಸುದ್ದಿ! ಟಿ.ವಿ.ಗಳಲ್ಲಿ ಆತನ ವಿಶೇಷ ಸಂದರ್ಶನ!ಆತನಿಗೆ ಸಾಮಾಜಿಕ ಮಾನ್ಯತೆ ಯಾಕೆ? ಇಂತಹವರನ್ನು ತಿರಸ್ಕರಿಸುವ ಶಕ್ತಿ ಸಮಾಜಕ್ಕೆ, ಮಾಧ್ಯಮಕ್ಕೆ ಇಲ್ಲವೆ? ಇಲ್ಲವೆಂದಾದರೆ, ಭ್ರಷ್ಟ ರಾಜಕಾರಣದ ವ್ಯವಸ್ಥೆಯಲ್ಲಿ ನಾವು ಒಂದು ಭಾಗವಾಗುತ್ತೇವೆ. ಕೇವಲ ರಾಜಕಾರಣಿಗಳನ್ನು ದೂರುವುದು ಯಾವ ನ್ಯಾಯ?

ಸಾಹಿತಿಗಳು ಮತ್ತು ಬರಹಗಾರರು!ನಾಡಿನ ಪ್ರಜಾಪ್ರಭುತ್ವದಲ್ಲಿ ಜನಜಾಗೃತಿ ಮೂಡಿಸುವುದು ಸ್ವಾತಂತ್ರ್ಯ, ಧೈರ್ಯ, ಪ್ರತಿಭೆಯುಳ್ಳ ಸಾಹಿತಿಗಳು, ಬರಹಗಾರರು. ಆದರೆ, ಧೀಮಂತ ಸಾಹಿತಿಯೂ ಪ್ರಶಸ್ತಿಗಾಗಿ, ರಾಜಕಾರಣದ ಹಿಂದೆ ಕುರಿ ಮಂದೆಯಲ್ಲಿ ಒಂದಾಗುವ ಪರಿಪಾಠ ಹೆಚ್ಚಾಗಿರುವುದು ದುರಂತ. ಒಬ್ಬ ಪಕ್ಷವೊಂದರ ಸಿದ್ಧಾಂತವನ್ನು ಪ್ರತಿಪಾದಿಸುವ ಧಾವಂತದಲ್ಲಿ, ಭ್ರಷ್ಟ ವ್ಯವಸ್ಥೆಯ ನಾಯಕರ ಪರ ಜನಾಭಿಪ್ರಾಯ ರೂಪಿಸುತ್ತಾನೆ. ಮತ್ತೊಬ್ಬ ಜಡಗಟ್ಟಿದ, ಭ್ರಷ್ಟಾಚಾರದಲ್ಲಿ ಮುಳುಗಿರುವ ಮತ್ತೊಂದು ಪಕ್ಷದ ಪರ ಜನಾಭಿಪ್ರಾಯ ಮೂಡಿಸಿಬಿಡುತ್ತಾನೆ. ಹಾಗಾದರೆ ಭ್ರಷ್ಟಾಚಾರ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾಯಕದಲ್ಲಿ ಇವರೆಲ್ಲರ ಶ್ರಮ ಇದೆ ಎನ್ನಬೇಕಷ್ಟೆ.ಇನ್ನು ಧಾರ್ಮಿಕ ಮುಖಂಡರು ರಾಜಕಾರಣವನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು, ಭ್ರಷ್ಟ ರಾಜಕಾರಣಿಯನ್ನು ಧರ್ಮದ ಬಟ್ಟೆಯೊಳಗೆ ರಕ್ಷಿಸುವ ದರಿದ್ರ ಸ್ಥಿತಿಗೆ ತಲುಪಿದ್ದಾರೆ. ಹಾಗಾದರೆ, ನಾವು ಯಾರನ್ನು ದೂಷಿಸುವುದು? ಯಾರಿಂದ ಪರಿಹಾರ ನಿರೀಕ್ಷಿಸುವುದು?ಏನು ಮಾಡಬಹುದು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಬೇಕು. ಅವು ಸಂಘಟನಾತ್ಮಕವಾಗಿ ಗಟ್ಟಿಯಾಗಿರಬೇಕು. ಹಾಗಾದಾಗ ಮಾತ್ರ ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಮರ್ಪಕ ಸ್ಥಿರ ಆಡಳಿತ ನೀಡಲು ಸಾಧ್ಯ.ಪಕ್ಷದೊಳಗೆ ಒಳಜಗಳ, ಪದೇ ಪದೇ ಚುನಾಯಿತ ಪ್ರತಿನಿಧಿಗಳ ಪಕ್ಷಾಂತರ, ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಮೊಕದ್ದಮೆ ಎದುರಿಸುವವರ ಮೇಲೆ ಕ್ರಮಕೈಗೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ... ಇವೆಲ್ಲವೂ ಪಕ್ಷ ಜನಪರ ಆಡಳಿತ ನೀಡಲು ಅವಕಾಶ ನೀಡುವುದಿಲ್ಲ. ಮೈತುಂಬಾ ತುರಿಕೆ ಇದ್ದವನು ಮೈಮರೆತು ಹಾಡುವುದು ಸಾಧ್ಯವಿಲ್ಲ! ಆದ್ದರಿಂದ ಕಾರ್ಯಕರ್ತರನ್ನೇ ನಂಬಿ ಅವರ ಶಕ್ತಿಯನ್ನೇ ಬಂಡವಾಳ ಮಾಡಿಕೊಂಡು ಪಕ್ಷ ಸ್ಥಿರವಾಗಿರಬೇಕು. ಅದಕ್ಕಾಗಿ ಕಾರ್ಯಕರ್ತರ ಕ್ಷೇಮ ನೋಡಿಕೊಳ್ಳುವ ನ್ಯಾಯಯುತವಾಗಿ ಕಾರ್ಯಕರ್ತರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಪರಂಪರೆಗೆ ಪಕ್ಷ ಬದ್ಧವಾಗಿರಬೇಕು.ಕೊನೆಯ ಮಾತು

ಪ್ರಜಾಪ್ರಭುತ್ವದ ಉಳಿವು- ಬೆಳವಣಿಗೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬನ ಪಾತ್ರವೂ ಇದೆ. ಅವರು ಇವರನ್ನು- ಇವರು ಅವರನ್ನು ದೂರುವುದು ಪರಿಹಾರ ಅಲ್ಲ. ಮತದಾರ, ರಾಜಕೀಯ ಪಕ್ಷದ ಕಾರ್ಯಕರ್ತರು, ನಾಯಕರು, ಮಾಧ್ಯಮ, ನ್ಯಾಯಾಂಗ, ಚುನಾವಣಾ ಆಯೋಗ... ಹೀಗೆ ಎಲ್ಲರ ಮನಸ್ಸು `ರಾಷ್ಟ್ರ' ಕಟ್ಟುವ `ಮನಸ್ಸು' ಆಗಬೇಕು. ಈ ಪ್ರಕ್ರಿಯೆಗೆ ರಾಜಕೀಯ ವ್ಯವಸ್ಥೆ ಸಾಧನವಾಗಬೇಕು. ರಾಷ್ಟ್ರ ಕಟ್ಟುವ ಮನಸುಗಳು ರಾಷ್ಟ್ರ ಕಟ್ಟುವ ಕಾಯಕಕ್ಕಾಗಿ ಪರಿಶುದ್ಧವಾಗಿ ತೊಡಗಿಕೊಳ್ಳುವ ದಿನ ಬೇಗ ಹತ್ತಿರ ಬರಲಿ....

(ಮುಗಿಯಿತು)

ಪ್ರತಿಕ್ರಿಯಿಸಿ (+)