ಜನರಿಗಾಗಿ ಚಿತ್ರೋತ್ಸವ

7

ಜನರಿಗಾಗಿ ಚಿತ್ರೋತ್ಸವ

Published:
Updated:

ಚಲನಚಿತ್ರೋತ್ಸವ ಎನ್ನುವುದು ಒಂದು ಸಂಸ್ಕೃತಿ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಕೂಡ ಅಭಿರುಚಿಯ ಸಂಕೇತವಾಗಿಯೇ ರೂಪಿತವಾಗಿರುತ್ತವೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಐದನೆ ಚಿತ್ರೋತ್ಸವ ಇಂದು ಮುಕ್ತಾಯ ಕಾಣುತ್ತಿದೆ. ವಿಶ್ವದ ವಿವಿಧ ಮೂಲೆಗಳ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಅರಿಯಲು ಇಂತಹ ಚಿತ್ರೋತ್ಸವ ಸಹಕಾರಿ. ಕಳೆದ ಹತ್ತು ವರ್ಷಗಳ ಹಿಂದಿನ ಚಿತ್ರಣವನ್ನು ನೆನಪಿಸಿಕೊಳ್ಳುವುದಾದರೆ, ನವದೆಹಲಿಯಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವವೇ ಮಹತ್ವದ್ದೆನಿಸುತ್ತಿತ್ತು.ಈಗ ವಿಶ್ವ ಸಿನಿಮಾರಂಗದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ವರ್ಷ ಪೂರ್ತಿ ವಿಶ್ವದ ಒಂದಲ್ಲಾ ಒಂದುಕಡೆ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿದೆ. ಅಲ್ಲಿಗೆ ತೆರಳಲು, ಸ್ಪರ್ಧೆಯಲ್ಲಿ  ಪಾಲ್ಗೊಳ್ಳಲು ಕನ್ನಡಚಿತ್ರರಂಗದವರೂ ಸೇರಿ, ಎಲ್ಲರಿಗೂ ಮುಕ್ತ ಅವಕಾಶವಿದೆ. ಚಿತ್ರೋದ್ಯಮವನ್ನು ಕಟ್ಟಲು, ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು, ಆಧುನಿಕ ತಂತ್ರಜ್ಞಾನವನ್ನು ಅರಿಯಲು ಇಂತಹ ಚಿತ್ರೋತ್ಸವಗಳು ಮಾರ್ಗದರ್ಶಿಯಾಗಿರುತ್ತವೆ. ಅಲ್ಲದೆ ದೇಶವಿದೇಶಗಳಿಂದ ಆಗಮಿಸುವ ನಿರ್ದೇಶಕರೊಂದಿಗೆ ನಡೆಯುವ ವಿಚಾರವಿನಿಮಯದಿಂದಲೂ ಪ್ರಯೋಜನವಿದೆ.ಸಿನಿಮಾ ಪ್ರಜ್ಞೆಗೆ ಬೆಂಗಳೂರು ಖ್ಯಾತಿ. ಇಲ್ಲಿನ ಪ್ರೇಕ್ಷಕರ ಅಭಿರುಚಿಯನ್ನು ಭಾರತೀಯ ಚಿತ್ರರಂಗದ ಪ್ರಖ್ಯಾತರೆಲ್ಲ ವೆುಚ್ಚಿಕೊಂಡಿದ್ದಾರೆ. ಇಂತಹ ಸ್ಥಳದಲ್ಲಿ ಚಿತ್ರೋತ್ಸವವನ್ನು ರಾಜ್ಯ ಸರ್ಕಾರ ಸಿನಿಮಾ ಅಕಾಡೆಮಿಯ ಮೂಲಕ ನಡೆಸುತ್ತಿರುವುದು ಅರ್ಥಪೂರ್ಣ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಿತ್ರೋತ್ಸವಕ್ಕೆ ಜನಸಾಮಾನ್ಯರ ಒಲವು ಹೆಚ್ಚಾಗಿದೆ. ನಿರೀಕ್ಷೆಗೂ ಮೀರಿ ಜನರು ಚಿತ್ರೋತ್ಸವದದಲ್ಲಿ ವಿವಿಧ ದೇಶಗಳ ಚಿತ್ರಗಳನ್ನು ನೋಡಲು ಆಗಮಿಸಿದ್ದಾರೆ.ಅಷ್ಟರಮಟ್ಟಿಗೆ ಸಿನಿಮಾ ಸಂಸ್ಕೃತಿಯನ್ನು ಬಿಂಬಿಸಿದಂತಾಗಿದೆ. ಕಮರ್ಷಿಯಲ್ ಚಿತ್ರಗಳ ಏಕತಾನತೆಯಿಂದ ಬೇಸತ್ತು ಹೋಗಿರುವ ಪ್ರೇಕ್ಷಕರು ಸಿನಿಮಾ ಬೆಳವಣಿಗೆಯನ್ನು ಅರಿಯಲು ಬೇರೆ ದೇಶಗಳ ಚಿತ್ರಗಳನ್ನು ನೋಡಲು ಹಂಬಲಿಸುತ್ತಾರೆ. ನವೆಂಬರ್‌ನಲ್ಲಿ ನಡೆದ ಗೋವಾ ಚಿತ್ರೋತ್ಸವ ಜನಸಾಮಾನ್ಯರನ್ನು ಸೆಳೆಯಲು ವಿಫಲವಾಯಿತು. ಈ ಬೆಳವಣಿಗೆ ಚಿತ್ರೋತ್ಸವಗಳು ವಿವಿಧ ರಾಜ್ಯಗಳಲ್ಲಿ ನಡೆಯಬೇಕು ಎನ್ನುವ ವಾದವನ್ನು ಪುಷ್ಟೀಕರಿಸಿದಂತಾಯಿತು.ಯಾವುದೇ ಚಿತ್ರೋತ್ಸವಗಳು ನಡೆದರೂ, ನೂಕುನುಗ್ಗಲು, ಕುರ್ಚಿಗಾಗಿ ತಡಕಾಟ, ಟಿಕೇಟಿಗಾಗಿ ಪರದಾಟ ತಪ್ಪಿದ್ದೇ ಅಲ್ಲ. ಪ್ರೇಕ್ಷಕರೂ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಸಿನಿಮಾಮಂದಿಯೂ ಅಸಮಾಧಾನಗೊಳ್ಳುತ್ತಾರೆ. ಸಿನಿಮಾಗಳಿಗೆ ಪ್ರೇಕ್ಷಕರೇ ಪ್ರಭುಗಳು. ಸರತಿಸಾಲಿನಲ್ಲಿ ನ್ಲ್ಲಿಲುವ ಸಂಬಂಧದಲ್ಲಿ ಸಾರ್ವಜನಿಕರೊಬ್ಬರಿಂದ ಅಡ್ಡಿಗೊಳಗಾದ ನಿರ್ದೇಶಕರ ಅಸಮಾಧಾನಕ್ಕೆ ಉತ್ತರಿಸಿರುವ ಸಿನಿಮಾ ಅಕಾಡೆಮಿ ಅಧ್ಯಕ್ಷೆ ತಾರಾಅನೂರಾಧ `ಸಿನಿಮಾ ಮಂದಿ ಕೂಡ ಸಾಮಾನ್ಯ ಜನರಂತೆಯೇ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬೇಕು' ಎಂದು ಹೇಳಿರುವುದು ಸಮರ್ಥನೀಯವಾಗಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳೆಂದರೆ ಅದು ಗಣ್ಯರಿಗೆ ಅವರ ಕುಟುಂಬಕ್ಕೆ ಮೀಸಲು ಎನ್ನುವ ಗೊಣಗಾಟವಿದೆ.ಗೋವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಎಂದು ಗುರುತಿಸಲಾದ ಚಿತ್ರ ವೀಕ್ಷಣೆಗೆ, ಉದ್ಘಾಟನಾ ಸಮಾರಂಭಗಳಿಗೆ ಗಣ್ಯರು, ಅತಿಗಣ್ಯರು ತುಂಬಿಕೊಂಡಿರುತ್ತಾರೆ. ಸಿನಿಮಾಗಳಿಗೂ ಅಂತಹ ಗಣ್ಯರಿಗೂ ಏನೇನೂ  ಸಂಬಂಧವಿರುವುದಿಲ್ಲ. ಇದು ಜನಸಾಮಾನ್ಯರಿಗೆ ಮಾಡುವ ಮೋಸ. ಈ ಕಾರಣದಿಂದಲೇ ಬಯಲಿನಲ್ಲಿ ದೊಡ್ಡ ತೆರೆ ಹಾಕಿ, ಜನರಿಗೆ ಸಿನಿಮಾ ತೋರಿಸುವ ಪದ್ಧತಿಯನ್ನು ಗೋವಾದಲ್ಲಿ ಆರಂಭಿಸಲಾಗಿದೆ. ಪ್ರತ್ಯೇಕ ಪ್ರದರ್ಶನ, ಸೀಟುಗಳನ್ನು ಕಾದಿರಿಸುವಿಕೆ ಮೊದಲಾದ ಸೌಲಭ್ಯಗಳನ್ನು ಸಿನಿಮಾರಂಗದವರು ನಿರೀಕ್ಷಿಸುವುದೇ ತಪ್ಪು. ಕೇರಳದಲ್ಲಿ, ಪಶ್ಚಿಮಬಂಗಾಳದಲ್ಲಿ ನಿರ್ದೇಶಕರು ಜನಸಾಮಾನ್ಯರೊಂದಿಗೆ ಕುಳಿತು ಸಿನಿಮಾ ನೋಡಲು ಇಷ್ಟಪಡುತ್ತಾರೆ. ನಮ್ಮವರಿಗೇಕೆ `ಗಣ್ಯ'ರಾಗಿ ಜನಸಂಪರ್ಕದಿಂದ ದೂರ ಹೋಗುವ ತವಕ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry