ಬುಧವಾರ, ನವೆಂಬರ್ 13, 2019
23 °C

ಜನರಿಗೆ ನೀರು, ರಸ್ತೆ ಕೊಟ್ಟಿದ್ದೇವೆ, ಇನ್ನೇನು ಬೇಕು?

Published:
Updated:

ಮಂಗಳೂರು: ಬಂದರು, ಒಳನಾಡು ಜಲಸಾರಿಗೆ, ಪರಿಸರ ಜೀವಶಾಸ್ತ್ರ ಸಚಿವರಾಗಿ ಸುಮಾರು ಮೂರೂವರೆ ವರ್ಷ ಸೇವೆ ಸಲ್ಲಿಸಿದ ಕೃಷ್ಣ ಜೆ.ಪಾಲೆಮಾರ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಬಿಜೆಪಿ ಶಾಸಕರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಜಿಲ್ಲೆಗೆ, ಅದಕ್ಕಿಂತಲೂ ಮುಖ್ಯವಾಗಿ ತಮ್ಮ ಕ್ಷೇತ್ರಕ್ಕೆ ಎಂತಹ ಕೊಡುಗೆ ನೀಡಿದರು? ಚುನಾವಣೆ ಹತ್ತಿರವಾದಂತೆ ದೊಡ್ಡದಾಗಿ ಕೇಳಿಬರುವ ಪ್ರಶ್ನೆ ಇದು.ಸಚಿವ ಸ್ಥಾನ ಕೈತಪ್ಪಿ ಹೋದುದು ಏಕಾಗಿ ಎಂಬುದು ಈಗ ಕಳೆದುಹೋದ ಅಧ್ಯಾಯ. ತೆರವಾದ ಈ ಸ್ಥಾನವನ್ನು ಚಿಕ್ಕಮಗಳೂರಿನ ಸಿ.ಟಿ.ರವಿ ತುಂಬಿದ್ದು, ಕೆಡಿಪಿ ಸಭೆಗಳನ್ನು `ಹೆಚ್ಚು ಸಮರ್ಥವಾಗಿ' ನಡೆಸಿದ್ದು ಅವರ ಚಾಕಚಕ್ಯತೆ. ರವಿ ಅವರು ಕೆಡಿಪಿ ಸಭೆ ನಡೆಸಿದ ವೈಖರಿ ಕಂಡಾಗ ಈ ಹಿಂದಿನವರು ಎಲ್ಲೆಲ್ಲಿ ಸೋತಿದ್ದರು, ಏಕೆ ವಿಷಯಗಳ ಅಧ್ಯಯನ ಮಾಡಿ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳದೆ ಹೋದರು ಎಂಬ ಪ್ರಶ್ನೆಗಳೂ ಸಹಜ. ಏನೇ ಆದರೂ ಇವರು ಪಕ್ಷದ ಈ ಭಾಗದ ಬಿಜೆಪಿಯ `ಖಜಾನೆ'ಯಂತೂ ಹೌದು.ಹೇಳಿದ್ದೇನು, ಮಾಡಿದ್ದೇನು ಎಂದು ಕೇಳಿದಾಗ ಪ್ರಮಖವಾಗಿ ಕಾಣಿಸುವುದು ರಸ್ತೆ ಮತ್ತು ಕುಡಿಯುವ ನೀರು. ಕೃಷ್ಣ ಪಾಲೆಮಾರ್ ಕೂಡ ಬೆಟ್ಟುಮಾಡಿ ತೋರಿಸುವುದು ಇವೆರಡನ್ನು. `ಮಂಗಳೂರು ನಗರಕ್ಕೆ ಹಿಂದೆ ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತಿದ್ದು, ರಸ್ತೆಗಳು ಹೊಂಡಗಳಿಂದ ಕೂಡಿದ್ದವು. ಇಂದು ಪ್ರತಿ ದಿನ ನೀರು ಬರುತ್ತಿದೆ. ಬಹುತೇಕ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ಮೊದಲಾಗಿ ಆಗಬೇಕಿರುವುದು ರಸ್ತೆ ಮತ್ತು ಕುಡಿಯುವ ನೀರು. ಹೀಗಾಗಿ ನಾನು ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇನೆ' ಎಂದು ಅವರು ಹೇಳುತ್ತಾರೆ.ಪಾಲೆಮಾರ್ ಅವರ ವ್ಯಾಪ್ತಿಯಲ್ಲಿ ಮೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಬರುತ್ತವೆ. ಇಲ್ಲಿ ಪ್ರತಿನಿಧಿಸುವವರಲ್ಲಿ ಒಬ್ಬರು ಬಿಜೆಪಿ ಮತ್ತು ಇಬ್ಬರು ಕಾಂಗ್ರೆಸ್ ಸದಸ್ಯರು. ಎರಡೂ ಪಕ್ಷಗಳನ್ನು ಮಾತನಾಡಿಸಿದಾಗ, ಪಾಲೆಮಾರ್ ಕೆಲಸ ಮಾಡಿದ್ದಾರೆ, ನಾಲ್ಕೂವರೆ ವರ್ಷ ಸುಮ್ಮನಿದ್ದರೂ, ಕೊನೆಯಲ್ಲಿ ಬಿರುಸಿನಿಂದ ಕೆಲಸ ಮಾಡಿದಂತಿದೆ ಎಂಬ ಮಾತು ಕೇಳಿಬಂತು.ಪಾಲೆಮಾರ್ ಅವರು ರಸ್ತೆಗಾಗಿ ಹಲವು ಮೂಲಗಳಿಂದ ಹಣ ತಂದಿದ್ದಾರೆ. ಕನಿಷ್ಠ 16 ಕಿ.ಮೀ.ನಷ್ಟು ಗ್ರಾಮಾಂತರ ರಸ್ತೆಗಳು ಅಭಿವೃದ್ಧಿಗೊಂಡಿವೆ. ನಬಾರ್ಡ್, ಲೋಕೋಪಯೋಗಿ ಇಲಾಖೆಗಳಿಂದ ಹೆಚ್ಚಿನ ಕೆಲಸ ಮಾಡಿಸಿಕೊಟ್ಟಿದ್ದಾರೆ. 12 ಕಿಂಡಿ ಅಣೆಕಟ್ಟೆ ನಿರ್ಮಿಸಿದ್ದಾರೆ. ಹಲವೆಡೆ ಕಾಲುಸಂಕಗಳೂ ನಿರ್ಮಾಣಗೊಂಡಿವೆ ಎಂಬ ಅಭಿಪ್ರಾಯ ಜಿ.ಪಂ.ಸದಸ್ಯ ಜನಾರ್ದನ ಗೌಡ ಅವರದು.ಗುರುಪುರದಲ್ಲಿ ಸರ್ಕಾರಿ ಐಟಿಐ ಮತ್ತು ಗುರುಪುರ-ಎಡಪದವಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಿಸುವ ಭರವಸೆಯನ್ನು ಶಾಸಕರು ನೀಡಿದ್ದರು, ಆದರೆ ಅದು ಈಡೇರಿಲ್ಲ, ಎರಡು ಕೆರೆಗಳು ಬಿಟ್ಟರೆ ಉಳಿದ ಕೆರೆಗಳ ಪುನರುಜ್ಜೀವನ ಆಗಿಲ್ಲ. ನೆಲ್ಲಿತೀರ್ಥವನ್ನು ಪ್ರವಾಸಿ ತಾಣವಾಗಿ ಮಾಡಬೇಕೆಂಬ ಬೇಡಿಕೆಗೂ ಸ್ಪಂದಿಸಿಲ್ಲ ಎಂಬ ಕೊರಗು ಅವರದು.`ಶಾಸಕರು ಮೊದಲ ನಾಲ್ಕು ವರ್ಷ ಕ್ಷೇತ್ರಕ್ಕಾಗಿ ಏನೂ ಕೆಲಸ ಮಾಡಿಲ್ಲ. ಕೊನೆಯ 3-4 ತಿಂಗಳು ಸ್ವಲ್ಪ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸದಲ್ಲಿ ಪಕ್ಷ ನೋಡಿಕೊಂಡು ಹಣ ಒದಗಿಸಿದ್ದಾರೆ.  ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಮ್ಮಬ್ಬರದೇ ಹೆಸರು ಹಾಕಿಸುವಂತಹ ಸಣ್ಣ ಬುದ್ಧಿಯೂ ಅವರದ್ದು' ಎಂದು ಹೇಳುತ್ತಾರೆ ಕಾಂಗ್ರೆಸ್‌ನ ಜಿ.ಪಂ.ಸದಸ್ಯೆ ಯಶವಂತಿ ಆಳ್ವ.ಸುರತ್ಕಲ್ ಭಾಗದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಎಂಆರ್‌ಪಿಎಲ್, ಎಂಎಸ್‌ಇಜೆಡ್, ನಿರ್ವಸಿತರಿಗೆ ಕೆಲಸದ ಭರವಸೆ ಇನ್ನೂ ಮರೀಚಿಕೆಯಾಗಿದೆ. ಎಂಆರ್‌ಪಿಎಲ್, ಎಸ್‌ಇಜೆಡ್ ತ್ಯಾಜ್ಯ ಸಮುದ್ರಕ್ಕೆ ಸೇರುವಲ್ಲಿನ ಸಮಸ್ಯೆ ಮುಗಿದಿಲ್ಲ. ಸಿಆರ್‌ಜೆಡ್ ಕಾನೂನು ತಿದ್ದುಪಡಿ ಮಾಡುವಲ್ಲಿ ಕೇಂದ್ರದ ಮೇಲೆ ಒತ್ತಡ ತಂದಿಲ್ಲ. ಸುರತ್ಕಲ್‌ನಲ್ಲಿ ಯು.ಎಸ್ ಮಲ್ಯ ರಂಗಮಂದಿರ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂಬಂತಹ ದೂರುಗಳು ಸುರತ್ಕಲ್ ಕಡೆಯಿಂದ ಕೇಳಿಬಂದಿದೆ.ಇದಕ್ಕಿಂತಲೂ ಹೆಚ್ಚಾಗಿ ಮರಳು ಗಣಿಗಾರಿಕೆ ಕರಾವಳಿ ಭಾಗದಲ್ಲಿ ದೊಡ್ಡ ದಂಧೆಯಾಗಿ ಬೆಳೆಯುವಲ್ಲಿ ಸಚಿವರಾಗಿ ಇವರ ಪಾತ್ರ ಪ್ರಮುಖವಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಇದನ್ನು ಪ್ರಶ್ನಿಸಿದ ಹಿರಿಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುತ್ತ ಇವರು ಕಟ್ಟಿದ ಕೋಟೆ ಅಭೇದ್ಯವಾದದ್ದು ಎಂಬ ಟೀಕೆಗಳಲ್ಲಿ ಹುರಳೂ ಇದೆ. ಕಟ್ಟಡ ನಿರ್ಮಾಣ ಕ್ಷೇತ್ರದ ಪ್ರಮುಖ ಸಂಸ್ಥೆಯನ್ನು ನಡೆಸುತ್ತಿರುವ ಇವರು ತಮಗೆ ಬೇಕಾದಂತೆ ಅಧಿಕಾರಿಗಳನ್ನು `ಆಟ' ಆಡಿಸಿದ್ದಾರೆ ಎಂಬ ಆರೋಪಗಳು ಬಲವಾಗಿವೆ.

ಸಿಂಗಲ್ ಸೈಟ್ ಅನುಮೋದನೆ ವಿಚಾರದಲ್ಲಿ ಪಾಲೆಮಾರ್ ವಿರುದ್ಧ ಭಾರಿ ದೂರುಗಳು ಕೇಳಿಬಂದಿವೆ. ಕಳೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಬಲ ಅಸ್ತ್ರವೂ ಇದಾಗಿತ್ತು. ಆದರೆ ಈ ಆರೋಪವನ್ನು ಅಲ್ಲಗಳೆಯುವ ಪಾಲೆಮಾರ್, ಈ ಹಿಂದೆ ಇದ್ದ ನಿಯಮಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ, ಅಕ್ರಮವಾಗಿ, ಯಾರ‌್ಯಾರಿಗೋ ದುಡ್ಡು ಕೊಟ್ಟು ಮನೆ ಕಟ್ಟಿಸಿಕೊಳ್ಳಬೇಕಿತ್ತು, ಆದರೆ ಇಂದು 1.5 ಸೆಂಟ್ಸ್ ನಿವೇಶನ ಇದ್ದವರೂ ಯಾವುದೇ ತೊಂದರೆ ಇಲ್ಲದೆ ಮನೆ ಕಟ್ಟಸಿಕೊಳ್ಳುವುದು ಸಾಧ್ಯವಾಗಿದೆ ಎನ್ನುತ್ತಾರೆ.ಯಡಿಯೂರಪ್ಪ ಸರ್ಕಾರವನ್ನೇ ಅಲ್ಲಾಡಿಸಿದ ಗಣಿ ಹಗರಣದಲ್ಲಿ ನೇರವಾಗಿ ಇವರ ಹೆಸರು ಪ್ರಸ್ತಾಪ ಆಗದೇ ಇದ್ದರೂ ಬೇಲೆಕೇರಿ ಬಂದರಿನಲ್ಲಿ ಕಬ್ಬಿಣದ ಅದಿರಿನ ಅಕ್ರಮ ದಾಸ್ತಾನು ಮತ್ತು ನಾಪತ್ತೆ ಹಗರಣದಲ್ಲಿ ಇವರ ಪಾತ್ರ ಪ್ರಮುಖ ಚರ್ಚೆಗೆ ಒಳಗಾಗಿತ್ತು. ಸದನದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯೂ ನಡೆದಿತ್ತು. ಅಲ್ಲೆಲ್ಲ ಕುಣಿಕೆಯಿಂದ ತಪ್ಪಿಸಿಕೊಂಡು ಬಂದ ಪಾಲೆಮಾರ್ ಅವರಿಗೆ ಕೊನೆಗೂ ಉರುಳಾದುದು ಮಾತ್ರ `ಮೊಬೈಲ್' ಎಂಬುದು ವಿಪರ್ಯಾಸ.ಹೇಳಿದ್ದೇನು? ಮಾಡಿದ್ದೇನು?

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಐದು ವರ್ಷ ಕಾಲ ವಿಧಾನಸಭೆಯಲ್ಲಿ ನಮ್ಮ ಪ್ರತಿನಿಧಿಗಳಾಗಿದ್ದ ಶಾಸಕರು ಚುನಾವಣೆಗೆ ಮೊದಲು ಎಂತಹ ಭರವಸೆ ನೀಡಿದ್ದರು, ಅಧಿಕಾರದ ಕೊನೆಯಲ್ಲಿ ಅವರು ಮಾಡಿದ ಕೆಲಸವಾದರೂ ಏನು? ಇದನ್ನು ಮತದಾರರು ತಿಳಿದುಕೊಳ್ಳಲು ಬಯಸುವುದು ಸಹಜ. ಶಾಸಕರು ಹಲವಾರು ಕೆಲಸಗಳನ್ನು ಮಾಡಿರುತ್ತಾರೆ, ಅದೆಷ್ಟೋ ವೈಫಲ್ಯಗಳನ್ನೂ ಅನುಭವಿಸಿರುತ್ತಾರೆ, ಅದೆಷ್ಟೊ ಕಡೆಗಳಲ್ಲಿ ಅಭಿವೃದ್ಧಿಗೆ ಸಹಕರಿಸಿದ್ದಾರೆ, ಅಡ್ಡಗಾಲೂ ಹಾಕಿರುತ್ತಾರೆ. ಎಲ್ಲವನ್ನೂ ಗಮನಿಸುವುದು ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ವಿಷಯಗಳನ್ನು ಮತದಾರರ ಮುಂದೆ ಇಡುವ ಪ್ರಯತ್ನವನ್ನು `ಪ್ರಜಾವಾಣಿ' ಇಲ್ಲಿ ಮಾಡುತ್ತಿದೆ.

ಪ್ರತಿಕ್ರಿಯಿಸಿ (+)