ಮಂಗಳವಾರ, ನವೆಂಬರ್ 19, 2019
22 °C

`ಜನರಿಗೆ ಬೇಸರ ತರುವ ಕೆಲಸ ಮಾಡಿಲ್ಲ'

Published:
Updated:

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮ್ಮ ಸ್ವಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಂಗಳವಾರ ಪ್ರಚಾರ ಆರಂಭಿಸಿದರು. ಪ್ರಚಾರದ ಮೊದಲ ಭಾಗವಾಗಿ ನಗರದ ವಿಶ್ವೇಶ್ವರ ನಗರ, ಲಿಂಗರಾಜ ನಗರ ಹಾಗೂ ವಾಸವಿ ನಗರದಲ್ಲಿ ಹಿತೈಷಿಗಳ ಸಭೆ ನಡೆಸಿ, ವಿವಿಧ ಸಮುದಾಯದವರ ಬೆಂಬಲ ಕೋರಿದರು.ಬುಧವಾರ ಸರಳವಾಗಿ ನಾಮಪತ್ರ ಸಲ್ಲಿಸಲಿದ್ದು ಮೆರವಣಿಗೆ, ಘೋಷಣೆಗಾಗಿ ಯಾರೂ ಬರುವ ಅಗತ್ಯವಿಲ್ಲ. ಎಲ್ಲರ ಆಶೀರ್ವಾದ ಇದ್ದರೆ ಸಾಕು. ಸತತ ಐದನೇ ಬಾರಿ ಶಾಸಕನಾಗಲು, ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿ ಎಂದು ಶೆಟ್ಟರ್ ಕೈಮುಗಿದು ಕೇಳಿದರು.`ಕಳೆದ ಕೆಲವು ತಿಂಗಳಲ್ಲಿ ಪಕ್ಷ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರೂ ಜನರಿಗೆ ಬೇಸರವಾಗುವ ಯಾವುದೇ ಕೆಲಸವನ್ನು ಮಾಡಲಿಲ್ಲ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. ಗಳು ಮುಂಬೈ ಮೂಲದ ಏಜೆನ್ಸಿಯೊಂದು ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ಸಿಗೇ ಹೆಚ್ಚು ಸೀಟುಗಳು ಸಿಗಲಿದೆ ಎಂಬ ಮಾಹಿತಿ ಇದೆ. ಇಂಥ ಸಮೀಕ್ಷೆಗಳು ನಿಜವಾಗಲಾರವು. ಬಿಜೆಪಿಗೆ ಈ ಬಾರಿ 125ರಿಂದ 135 ಸೀಟುಗಳು ಸಿಗಲಿವೆ' ಎಂದು ಅವರು  ವಿಶ್ವಾಸ ವ್ಯಕ್ತಪಡಿಸಿದರು.`ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮತದಾರರು ಪ್ರಜ್ಞಾವಂತರು. ಈ ಕ್ಷೇತ್ರದ ರಾಜಕಾರಣಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿದ್ದಾರೆ. ಹೀಗಾಗಿ ಇದು ವಿಐಪಿ ಕ್ಷೇತ್ರ ಎಂಬ ಹೆಸರು ಗಳಿಸಿದೆ. ಇಂಥ ಕ್ಷೇತ್ರದಲ್ಲಿ ಮತ ಯಾಚಿಸಲು ಅಭಿಮಾನವೆನಿಸುತ್ತದೆ' ಎಂದರು.`ಅವಳಿ ನಗರದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಎರಡು ಬಾರಿ ತಲಾ ರೂ ನೂರು ಕೋಟಿ ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಒಳ ರಸ್ತೆಗಳ ಅಭಿವೃದ್ಧಿಗಾಗಿ ರೂ 26 ಕೋಟಿ ಬಿಡುಗಡೆ ಮಾಡಲಾಗಿದ್ದು ಚುನಾವಣೆ ಮುಗಿದ ಕೂಡಲೇ ಕೆಲಸ ಆರಂಭವಾಗಲಿದೆ. ಉದ್ಯೋಗ ಸೃಷ್ಟಿಗಾಗಿ ದೊಡ್ಡ ಕಂಪೆನಿಗಳಿಗೆ ಸ್ವಾಗತ ಕೋರಲಾಗಿದೆ. ಶೀಘ್ರದಲ್ಲೇ ಇನ್‌ಫೋಸಿಸ್ ಹುಬ್ಬಳ್ಳಿಗೆ ಕಾಲಿಡಲಿದೆ' ಎಂದು ಶೆಟ್ಟರ್ ಹೇಳಿದರು.`ಒಂಬತ್ತು ತಿಂಗಳ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. ಇದು ಜಾದೂ ಅಲ್ಲ. ಜನರ ವಿಶ್ವಾಸ, ಸಂಪುಟ ಸಹೋದ್ಯೋಗಿಗಳು ಹಾಗೂ ಪಕ್ಷದ ಬೆಂಬಲದಿಂದ ಇದು ಸಾಧ್ಯವಾಗಿದೆ. ಶಾಸಕನಾಗಿದ್ದಾಗ ಹೇಗೆ ಇರುತ್ತಿದ್ದೆನೋ, ಮುಖ್ಯಮಂತ್ರಿಯಾದಾಗಲೂ ಹಾಗೆಯೇ ಇದ್ದೇನೆ. ಮುಂದೆಯೂ ಜನರೊಂದಿಗೆ ಬೆರೆತು ಕೆಲಸ ಮಾಡುತ್ತೇನೆ. ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮತ ಹಾಕಿ' ಎಂದು ಅವರು ವಿನಂತಿಸಿಕೊಂಡರು.    ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, `ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ ಪಕ್ಷ ಕಳಂಕ ರಹಿತ ಆಡಳಿತ ನೀಡಿದೆ. ಕಳಂಕಿತರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಬಿಜೆಪಿಗೆ ಅಭಿವೃದ್ಧಿ ಬಗ್ಗೆ ಸ್ಪಷ್ಟವಾದ ಗುರಿ ಇದ್ದು, ಜನರಿಗೆ ಇದು ತಿಳಿದಿದೆ. ಹೀಗಾಗಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದರು.ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಬೀರಪ್ಪ ಖಂಡೇಕರ, ಸ್ಮಿತಾ ಜಾಧವ, ಲಕ್ಷ್ಮಿ ಉಪ್ಪಾರ, ಮಹೇಶ ಬುರ್ಲಿ, ಪಾಲಿಕೆ ಮಾಜಿ ಸದಸ್ಯ ಶಿವು ಹಿರೇಕೆರೂರ, ಮುಖಂಡರಾದ ಪ್ರದೀಪ ಶೆಟ್ಟರ್, ಶಂಕರಣ್ಣ ಮುನವಳ್ಳಿ, ನಾಗೇಶ ಕಲ್ಬುರ್ಗಿ ಮತ್ತಿತರರು ಪಾಲ್ಗೊಂಡಿದ್ದರು.ಪ್ರೊ. ಸಿ.ಎಂ.ನೀಲಣ್ಣವರ, ಪ್ರೊ. ಬಿ.ಎಸ್.ಅಕ್ಕಿ, ಎಂ.ಜೆ. ಮಾಳವದೆ, ಎಂ.ಎಸ್.ಕುಲಕರ್ಣಿ, ವಿ.ಎಂ. ವಿಜಾಪುರ ಹಾಗೂ ವೈ.ಸಿ.ಭಾಂಡಗೆ ಮಾತನಾಡಿದರು.

ಪ್ರತಿಕ್ರಿಯಿಸಿ (+)