ಜನರಿಗೆ ವಂಚನೆ; ಇಬ್ಬರ ಬಂಧನ

7

ಜನರಿಗೆ ವಂಚನೆ; ಇಬ್ಬರ ಬಂಧನ

Published:
Updated:

ಚಿಕ್ಕಬಳ್ಳಾಪುರ: ಚೈನ್ ಮಾರ್ಕೆಟಿಂಗ್ ಮತ್ತು ನೆಟ್‌ವರ್ಕಿಂಗ್ ನೆಪದಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಖಾಸಗಿ ಸಂಸ್ಥೆಯ ಇಬ್ಬರು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.

 ಚಿಕ್ಕಬಳ್ಳಾಪುರದ ನಿವಾಸಿಗಳಾದ ಪ್ರಕಾಶ್‌ಬಾಬು (35) ಮತ್ತು ಕೃಷ್ಣ (35) ಬಂಧಿತರು. `ಯುಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್~ ಎಂಬ ಸಂಸ್ಥೆಯ ನಿರ್ದೇಶಕರಾದ ಇಬ್ಬರನ್ನೂ ಜನರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ದಿಣ್ಣೆಹೊಸಹಳ್ಳಿಯ ರಸ್ತೆಯ ಕಟ್ಟಡವೊಂದರಲ್ಲಿ `ಯುಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್~ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಪ್ರಕಾಶ್‌ಬಾಬು ಮತ್ತು ಕೃಷ್ಣ ಅವರು ತಮ್ಮ ಸಂಸ್ಥೆಗೆ ಸದಸ್ಯರಾಗುವಂತೆ ಜನರಿಗೆ ಆಮಿಷ ಒಡ್ಡುತ್ತಿದ್ದರು.

ಹೆಚ್ಚಿನ ಜನರನ್ನು ಸದಸ್ಯರನ್ನಾಗಿಸಿದ್ದಲ್ಲಿ, ಹೆಚ್ಚಿನ ಹಣ ನೀಡಲಾಗುವುದು ಎಂದು ಆಸೆ ತೋರುತ್ತಿದ್ದರು. ಸಂಸ್ಥೆಯ ಸದಸ್ಯತ್ವ ಪಡೆದಿರುವವರು ಇನ್ನಷ್ಟು ಜನರನ್ನು ಸದಸ್ಯರನ್ನಾಗಿಸಿದ್ದಲ್ಲಿ, ಹೆಚ್ಚಿನ ಹಣ ಕೊಡುವುದಾಗಿ ಹೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ನೆಟ್‌ವರ್ಕಿಂಗ್ ವಿಸ್ತರಣೆ ಮಾಡುತ್ತ ಜನರನ್ನು ವಂಚಿಸುತ್ತಿದ್ದ ಇಬ್ಬರೂ ಆರೋಪಿಗಳು 300 ರೂಪಾಯಿಯಿಂದ 3000 ರೂಪಾಯಿಯವರೆಗೆ ನೀಡುವುದಾಗಿ ಹೇಳುತ್ತಿದ್ದರು. ಜಿಲ್ಲೆಯ ಯಾವುದೇ ಅಂಗಡಿಗಳಲ್ಲಿ-ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸಿದ್ದಲ್ಲಿ, ರಿಯಾಯಿತಿ ಸೌಲಭ್ಯ ನೀಡಲಾಗುವುದು ಎಂದು ಹೇಳಿ ಜನರನ್ನು ಸೆಳೆಯುತ್ತಿದ್ದರು. ಇದೇ ರೀತಿ ಸಂಸ್ಥೆಗೆ ಏಳು ಸಾವಿರ ಜನರನ್ನು ಸದಸ್ಯರನ್ನಾಗಿಸಿಕೊಂಡಿದ್ದರು. ಸಂಸ್ಥೆಯ ಕುರಿತು ವೆಬ್‌ಸೈಟ್‌ಗಳಲ್ಲೂ ಪ್ರಚಾರ ಮಾಡಲಾಗುತಿತ್ತು.ಸಂಸ್ಥೆಯಿಂದ ವಂಚನೆಯಾಗುತ್ತಿದೆ ಎಂದು ಸಲೀಮ್ ಎಂಬುವರು ದೂರು ನೀಡಿದ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದೆವು. ಸಂಸ್ಥೆಯ ಕಚೇರಿಗೆ ದಾಳಿ ನಡೆಸಿ, ಕಂಪ್ಯೂಟರ್, ದಾಖಲೆಪತ್ರಗಳು ಮತ್ತು 31 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಶರು ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ.ಪವಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚೆಲುವರಾಜ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ಮತ್ತಿತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry