ಜನರಿಗೆ ವಿಜ್ಞಾನ ಅರಿವು ಅಗತ್ಯ: ಶಾಸ್ತ್ರಿ

ಶನಿವಾರ, ಜೂಲೈ 20, 2019
27 °C

ಜನರಿಗೆ ವಿಜ್ಞಾನ ಅರಿವು ಅಗತ್ಯ: ಶಾಸ್ತ್ರಿ

Published:
Updated:

ಕೋಲಾರ: `ಜನರಿಗೆ ವಿಜ್ಞಾನದ ಅರಿವು ಅಗತ್ಯ. ಅದಿಲ್ಲದಿದ್ದರೆ ಏನು ಬೇಕಾದರೂ ಮಾಡಿ ಕೈ ತೊಳೆದುಕೊಳ್ಳಬಹುದು ಎಂದು ಸರ್ಕಾರ, ಬಹುರಾಷ್ಟ್ರೀಯ ಕಂಪೆನಿಗಳು ಭಾವಿಸಿವೆ. ಈ ಸನ್ನಿವೇಶ ತೊಲಗಬೇಕು~.-ಇವು, ತಾಲ್ಲೂಕು ಮಟ್ಟದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜ್ಞಾನ ಲೇಖಕ ವಿ.ಶಿವಶಂಕರಶಾಸ್ತ್ರಿ (ವಿಎಸ್‌ಎಸ್ ಶಾಸ್ತ್ರಿ) ಅವರ ಖಚಿತ ನುಡಿಗಳು.ಬಂಗಾರಪೇಟೆ ಕೆನರಾಬ್ಯಾಂಕ್ ಶಾಖೆಯಲ್ಲಿ ವಿಶೇಷ ಸಹಾಯಕ (ಸ್ಪೆಷಲ್ ಅಸಿಸ್ಟೆಂಟ್) ಆಗಿರುವ ನಗರದ ಜಯನಗರದ ನಿವಾಸಿ, ಬಿಎಸ್‌ಸಿ ಪದವೀಧರರಾದ ಶಾಸ್ತ್ರಿಯವರದು ಬಹುಮುಖ ಪ್ರತಿಭೆ.ವಿಜ್ಞಾನ ಲೇಖಕ, ಓರಿಗಾಮಿ ತಜ್ಞ, ಗಣಿತ-ವಿಜ್ಞಾನ ಬೋಧಕ, ವ್ಯಂಗ್ಯಚಿತ್ರಕಾರ, ಸಂಗೀತ ಪ್ರೇಮಿ, ನಕ್ಷತ್ರ ವೀಕ್ಷಕ, ಚಾರಣ ಪ್ರಿಯ, ಶಿಲ್ಪಿ, ಗೊಂಬೆಯಾಟದಲ್ಲೂ ಆಸಕ್ತ, ಮೌನ ಸಾಧಕ. ಮೋಡಿ ಮಾಡುವ ಮಾತುಗಾರ. ಕನ್ನಡದ ಜತೆ ಇಂಗ್ಲಿಷ್, ತೆಲುಗು, ಉರ್ದು, ಸಂಸ್ಕೃತ ಬಲ್ಲ ಬಹುಭಾಷಾ ಪ್ರಯೋಗಶೀಲ.ಸಮ್ಮೇಳನದ ಹಿನ್ನೆಲೆಯಲ್ಲಿ ಅವರು `ಪ್ರಜಾವಾಣಿ~ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಏನನ್ನಿಸುತ್ತದೆ ?

ಸಂತಸವೇ. ಆದರೆ, ಸಮ್ಮೇಳನದ ಮೂಲಕ ಒಂದಷ್ಟು ಜನರಲ್ಲಿ ವಿಜ್ಞಾನದ ಅರಿವು ಮೂಡಿಸಲು ಸಾಧ್ಯವಾದರೆ ಅದೇ ನನಗೆ ಹೆಚ್ಚು ಖುಷಿಯ ವಿಚಾರ. ಇದುವರೆಗೂ ಶೈಕ್ಷಣಿಕ ಸಂಕಿರಣಗಳಲ್ಲಿ, ವಿದ್ಯಾರ್ಥಿಗಳ ನಡುವೆ ವಿಜ್ಞಾನ, ಗಣಿತ ಮತ್ತಿತರ ವಿಷಯ ಮಾತನಾಡುತ್ತಿದ್ದೆ. ಈಗ ಸಾಹಿತ್ಯಾಸಕ್ತರ ನಡುವೆ ನಿಂತು ವಿಜ್ಞಾನ ಸಾಹಿತ್ಯದ ಬಗ್ಗೆ ಮಾತನಾಡಬೇಕಾಗಿದೆ. ಇದು ಹೊಸ ಅವಕಾಶವೇ ಸರಿ.* ಬ್ಯಾಂಕ್ ಉದ್ಯೋಗಿಯಾಗಿ, ವಿಜ್ಞಾನ ಸಂವಹನದ ಕಡೆಗೆ ನಿಮ್ಮ ಆಸಕ್ತಿ ಹೊರಳಲು ಪ್ರಮುಖ ಕಾರಣ ?

ಬೃಹತ್ ಕೈಗಾರಿಕೆಗಳಿಂದ ಆಗಬಹುದಾದ ಅತ್ಯಂತ ದೊಡ್ಡ ದುರಂತಕ್ಕೆ ನಿದರ್ಶನವಾದ ಭೂಪಾಲ್ ಅನಿಲ ದುರಂತವೇ ಪ್ರಮುಖ ಪ್ರೇರಣೆ. ದುರಂತಕ್ಕೆ ಕಾರಣವಾದ ಮೀಥೈಲ್ ಐಸೋ ಸೈನೈಡ್ ರಾಸಾಯನಿಕದ ಬಗ್ಗೆ ನಮ್ಮ ಜನರಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅಂಥ ವಿಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ಜನರಿಗೆ ಗೊತ್ತುಪಡಿಸುವ ಸಣ್ಣಮಟ್ಟದ ಪ್ರಯತ್ನ 30 ವರ್ಷಗಳಿಂದ ನನ್ನನ್ನು ಮುನ್ನಡೆಸುತ್ತಿದೆ.* ಜನಸಾಮಾನ್ಯರ ಸಮುದಾಯದಿಂದ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳ ಕಡೆಗೆ ನಿಮ್ಮ ನಡಿಗೆ ಹೇಗೆ ಸಾಧ್ಯವಾಯಿತು ?

ವಿಜ್ಞಾನದ ಅರಿವು ಮೂಡಿಸುತ್ತಿದ್ದ ಹೊತ್ತಿನಲ್ಲಿ ನಗರದಲ್ಲಿ ಕೆಲವು ಆಸಕ್ತರು ಸೇರಿ ಸ್ಟಡಿ ಸರ್ಕಲ್ ನಡೆಸುತ್ತಿದ್ದೆವು. ಅಲ್ಲಿಗೆ ಹಲವರು ಬಂದು ಭಾಗವಹಿಸಿ ಚರ್ಚಿಸುತ್ತಿದ್ದರು. ಹಾಗೆ ಚರ್ಚಿಸುತ್ತಿದ್ದವರ ಪೈಕಿ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹೆಚ್ಚಿದ್ದರು. ಅವರ ಜೊತೆ ಸಂವಾದದ ಮೂಲಕ ನನಗೆ ಅರ್ಥವಾದದ್ದೆಂದರೆ, ಆ ಶಿಕ್ಷಕರಿಗೆ ವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂವಹನದಲ್ಲಿ ಹಲವು ಸಮಸ್ಯೆ ಎದುರಾಗಿವೆ ಎಂಬುದು. ವೈಯಕ್ತಿಕ ನೆಲೆಯಲ್ಲಿ ಪರಿಹರಿಸುವ ಪ್ರಯತ್ನಗಳು ಶಾಲೆ-ಕಾಲೇಜುಗಳೆಡೆಗೆ ನನ್ನನ್ನು ಕೊಂಡೊಯ್ದವು.* ಓರಿಗಾಮಿ, ಕಿರಿಗಾಮಿ, ವ್ಯಂಗ್ಯ ಚಿತ್ರಕಲೆ, ನಕ್ಷತ್ರ ವೀಕ್ಷಣೆ, ಗೊಂಬೆಯಾಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪರಿಶ್ರಮ ಹೇಗೆ ಸಾಧ್ಯವಾಯಿತು?

ಸರಳವಾಗಿ ಹೇಳುವುದಾದರೆ, ಬೇಗನೆ ಬೇಸರ ಮೂಡಿರುವ ಬ್ಯಾಂಕ್ ಕೆಲಸದ ನಡುವೆ ನನ್ನನ್ನು ಕ್ರಿಯಾಶೀಲನನ್ನಾಗಿಟ್ಟುಕೊಳ್ಳುವ ಉಪಾಯಗಳಾಗಿ ಇವು ನನಗೆ ಕಂಡಿವೆ. ಆದರೆ, ಈ ಯಾವುದನ್ನೂ ನಾನು ಉದ್ದೇಶಪೂರ್ವಕವಾಗಿ ಶುರು ಮಾಡಿ ಮುಂದುವರಿಸಿದ್ದಲ್ಲ.

ವಿಜ್ಞಾನ ಸಂವಹನದ ಭಾಗವಾಗಿಯೇ ಆಯಾ ಕಾಲಕ್ಕೆ ಅವುಗಳನ್ನು ಕಲಿತೆ. ನನಗಾಗಿ ಮತ್ತು ಇತರರಿಗೆ ಹೇಳುವುದಕ್ಕಾಗಿ ಎಂಬುದೂ ಉದ್ದೇಶವಾಗಿತ್ತು. ಆಗಾಗ ನಾನು ಕಲಿತು ಪ್ರದರ್ಶಿಸಿದ್ದನ್ನು, ವಿವರಿಸಿದ್ದನ್ನು ಜನ ಮೆಚ್ಚಿದರು ಅಷ್ಟೆ. ಇವನ್ನೆಲ್ಲ ಕಲೆಗೋಸ್ಕರವೇ ಮಾಡಿದ್ದಲ್ಲ.* ತಾಲ್ಲೂಕಿನಲ್ಲಿ ವಿಜ್ಞಾನ-ಗಣಿತ ಸಂವಹನದ ಅರಿವು, ಶೈಕ್ಷಣಿಕ ವಾತಾವರಣದ ಕುರಿತು ?

ಮೊದಲಿಗೆ, ಜನರಲ್ಲಿ ವಿಜ್ಞಾನದ ಅರಿವು ಕಡಿಮೆ. ಎಲ್ಲ ಊರುಗಳಲ್ಲಿ ಇರುವಂತೆ ಇಲ್ಲಿಯೂ ವಿಜ್ಞಾನ ಮತ್ತು ಗಣಿತ ಸಂವಹನದ ಹೊಸ ಸಾಧ್ಯತೆಗಳ ಬಗ್ಗೆ ಶೈಕ್ಷಣಿಕವಾಗಿ ಗಂಭೀರವಾಗಿ ಯೋಚಿಸುವರು ಕಡಿಮೆ.

ಅಲ್ಲೊಬ್ಬರು, ಇಲ್ಲೊಬ್ಬರು ಶಿಕ್ಷಕರು, ಉಪನ್ಯಾಸಕರನ್ನು ಬಿಟ್ಟರೆ, ವಿದ್ಯಾರ್ಥಿಗಳಿಗೆ ಸರಳವಾಗಿ, ಸುಲಭವಾಗಿ ಅರ್ಥವಾಗುವಂತೆ, ಖುಷಿಯಾಗುವಂತೆ ಗಣಿತ, ವಿಜ್ಞಾನವನ್ನು ಕಲಿಸುವವರು ಹೆಚ್ಚು ಕಾಣುತ್ತಿಲ್ಲ. ಈ ವಾತಾವರಣ ಬದಲಾಗಬೇಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry