ಭಾನುವಾರ, ಮೇ 16, 2021
23 °C

ಜನರಿಗೆ `ಸಕಾಲ'ದಲ್ಲಿ ಸೇವೆ ತಲುಪಿಸಿ: ಶಾಲಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ:`ಸರ್ಕಾರದ ಯಾವುದಾದರೂ ಒಂದು ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದಕ್ಕೆ ಬೇರೆಯವರನ್ನು ದೂಷಿಸಿ ಯಾವುದೇ ಪ್ರಯೋಜನವಿಲ್ಲ. ವ್ಯವಸ್ಥೆಯ ಹುಳುಕು ಸರಿಪಡಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ' ಎಂದು `ಸಕಾಲ' ಯೋಜನೆಯ ನಿರ್ದೇಶಕಿ ಶಾಲಿನಿ ರಜನೀಶ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ `ಸಕಾಲ' ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.ಸಕಾಲ ಯೋಜನೆಯ ಜಾರಿಯಲ್ಲಿ ಹಾಸನ ಜಿಲ್ಲೆ 10ರಿಂದ 5ನೇ ಸ್ಥಾನಕ್ಕೆ ಏರಿದೆ. ಆದರೆ, ಇನ್ನೂ ಹೆಚ್ಚಿನ ಪ್ರಗತಿಗೆ ಅವಕಾಶವಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಶ್ರಮಿಸಿದರೆ ಮಾತ್ರ ಪ್ರಗತಿ ಸಾಧ್ಯ. ಅಧಿಕಾರಿಗಳಿಗೆ ಇದನ್ನು ಜಾರಿಮಾಡುವ ಮನಸ್ಸಿದ್ದರೆ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಜನರು ಸಂತೋಷದಿಂದ ಸರ್ಕಾರಿ ಕಚೇರಿಗಳಿಗೆ ಬಂದು ಸಂತೋಷದಿಂದಲೇ ಮರಳುವಂತಾದರೆ ಸಕಾಲ ಯೋಜನೆ ಸಾರ್ಥಕವಾದಂತೆ' ಎಂದು ಹೇಳಿದರು.ಸಕಾಲ ಸೇವೆ ಪಡೆದ ಶೇ 89ರಷ್ಟು ಜನರು ಸೇವೆಯಿಂದ ಸಂತುಷ್ಟರಾಗಿದ್ದಾರೆ ಎಂಬುದು ಮೈಸೂರಿನಲ್ಲಿ ಈಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ, ಶೇ 39ರಷ್ಟು ಜನತೆಗೆ ಮಾತ್ರ ಯೋಜನೆಯ ಬಗ್ಗೆ ತಿಳಿವಳಿಕೆ ಇದೆ. ಯೋಜನೆಗೆ ಪ್ರಚಾರ ನೀಡುವ ಕೆಲಸವನ್ನೂ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.ಸಕಾಲದಲ್ಲಿ ಇನ್ನೂ ಕೆಲವು ಬದಲಾವಣೆ ಮಾಡಲಾಗುತ್ತಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಧಿಕಾರಿಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಾಗುತ್ತಿದೆ. ಆನ್‌ಲೈನ್ ಸೇವೆ ನೀಡಿ ಜನರು ಮನೆಯಲ್ಲಿದ್ದುಕೊಂಡೇ ಸೇವೆ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಧಿಕಾರಿಗಳಿಗೆ ವೇತನ ನೀಡಲು ಬಳಸುವ ಸಾಫ್ಟ್‌ವೇರ್‌ಗೆ ಸಕಾಲವನ್ನೂ `ಲಿಂಕ್' ಮಾಡಲಾಗಿದೆ. ಏಳು ಸಾರಿ ಅಧಿಕಾರಿ ವಿಳಂಬ ಮಾಡಿದರೆ ಅವರಿಗೆ ಶಿಕ್ಷೆ ನೀಡಲು ಅವಕಾಶವಿದ್ದು, ಈ ಸಾಫ್ಟ್‌ವೇರ್ ಮೂಲಕ ಅವರ ಸೇವಾ ಪುಸ್ತಕದಲ್ಲೂ ಇದನ್ನು ನಮೂದಿಸಲಾಗುವುದು' ಎಂದು ಹೇಳಿದರು.ಸಕಾಲ ಯೋಜನೆಯ ಹೆಚ್ಚುವರಿ ನಿರ್ದೇಶಕ ಮನೋಜ್ ಮಾತನಾಡಿ, `ರಾಜ್ಯದಲ್ಲಿ 2.5 ಕೋಟಿ ಜನ ಈ ಸೇವೆಯ ಲಾಭ ಪಡೆದಿದ್ದಾರೆ. ಹಾಲಿ 265 ಸೇವೆಗಳು ಈ ಯೋಜನೆಯಡಿ ದೊರೆಯುತ್ತಿದ್ದು, ಇನ್ನು 110 ಸೇವೆ ಸೇರ್ಪಡೆಯಾಗಲಿವೆ' ಎಂದರು.ಸಕಾಲ ಯೋಜನೆಯಡಿ ಇಲಾಖಾವಾರು, ಜಿಲ್ಲಾವಾರು ವಿಲೇವಾರಿಯಾಗುತ್ತಿರುವ ಅರ್ಜಿಗಳ ಪ್ರಮಾಣ, ಕಾಲಮಿತಿಯೊಳಗೆ ಅಥವಾ ಅದಕ್ಕಿಂತ ಶೀಘ್ರವಾಗಿ ನೀಡುತ್ತಿರುವ ಸೇವೆಗಳು, ವಿಳಂಬ, ತಿರಸ್ಕಾರಗಳನ್ನು ಗಮನಿಸಿ ಆನ್‌ಲೈನ್‌ನಲ್ಲಿ ರ‌್ಯಾಂಕಿಂಗ್ ಪ್ರಕಟಿಸಲಾಗುತ್ತಿದೆ. ಹಾಗಾಗಿ ಇನ್ನಷ್ಟು ಶ್ರದ್ಧೆ ಹಾಗೂ ಪರಿಶ್ರಮದಿಂದ ಕೆಲಸ ಮಾಡಬೇಕು' ಎಂದು ಸಲಗೆ ನೀಡಿದರು.ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್, `ಸಕಾಲ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ 5ನೇ ಸ್ಥಾನದಲಿದೆ. ಅಧಿಕಾರಿಗಳು ಇನ್ನಷ್ಟು ಉತ್ತಮ ಸೇವೆ ನೀಡಲು ಶ್ರಮಿಸಬೇಕು ಎಂದು ಹೇಳಿದರು.ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಪಿ. ಸಿಂಗ್ ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ ಸೇವೆಗಳು ಮತ್ತು ಎದುರಾಗುತ್ತಿರುವ ತೊಡಕುಗಳನ್ನು ನಿವಾರಿಸಲು ಅನುಸರಿಸುವ ಕ್ರಮಗಳ ಬಗ್ಗೆ ವಿವರಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಜಗದೀಶ್, ಶ್ರೀವಿದ್ಯಾ, ಸಕಾಲ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ವಿವಿಧ ಇಲಾಖಾ ಅಧಿಕಾರಿಗಳು, ತಹಶೀಲ್ದಾರರು ಉಪತಹಶೀಲ್ದಾರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.