ಜನರಿಗೆ ಹತ್ತಿರವಾಗಲಿ ಉದ್ಯಾನ

7
ನಗರ ಸಂಚಾರ

ಜನರಿಗೆ ಹತ್ತಿರವಾಗಲಿ ಉದ್ಯಾನ

Published:
Updated:

ಬೀದರ್: ನಾಗರಿಕರ ಸಲಹೆ, ಅಭಿಪ್ರಾಯಗಳನ್ನು ಆಧರಿಸಿ ಪರಿಸರ ರಕ್ಷಣೆ ಮತ್ತು ಜಾಗೃತಿಯನ್ನು ಮೂಡಿಸುವ ಗುರಿಯೊಂದಿಗೆ ಅಸ್ತಿತ್ವ ಪಡೆದ ನಗರ ಹೊರವಲಯದಲ್ಲಿ ಇರುವ ‘ಟ್ರೀ ಪಾರ್ಕ್’ ಹೆಸರಿನ ಸಸ್ಯ ಉದ್ಯಾನವನ ಇನ್ನೂ ನಾಗರಿಕರನ್ನು ತನ್ನತ್ತ ಸೆಳೆಯಬೇಕಾಗಿದೆ. ನಾಗರಿಕರಿಗೆ ಹತ್ತಿರವಾಗಬೇಕಾಗಿದೆ.ನೌಬಾದ್ ಸಮೀಪ ಸುಮಾರು 125 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಸಸ್ಯ ಉದ್ಯಾನ, ಪರಿಸರದ ಮಹತ್ವ ಮತ್ತು ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಅತ್ಯುತ್ತಮ ಯತ್ನ. ಅರಣ್ಯ ಪ್ರದೇಶದ ಒತ್ತುವರಿ ತಡೆಯುವ ದೂರಗಾಮಿ ಚಿಂತನೆಯನ್ನು ಹೊಂದಿದ್ದರೂ, ವಾರಾಂತ್ಯದಲ್ಲಿ ನಾಗರಿಕರಿಗೆ ವಿಹಾರ ತಾಣವಾಗುವ ಸೂಚನೆಗಳಿವೆ.ಉದ್ಘಾಟನೆಗೆ ಪೂರಕವಾಗಿ ಮಕ್ಕಳ ಆಟದ ಪರಿಕರ, ವಿಶ್ರಾಂತಿ ತಾಣವನ್ನು ಅಭಿವೃದ್ಧಿಪಡಿಸಿದ್ದರೂ ಪೂರ್ಣಪ್ರಮಾಣದಲ್ಲಿ ಪಾರ್ಕ್  ಇನ್ನು ಸಿದ್ಧತೆ ಆಗಬೇಕಾಗಿದೆ. ಅಧಿಕಾರಿಗಳ ಪ್ರಕಾರ, ಸಸ್ಯ ಉದ್ಯಾನದ ಅಭಿವೃದ್ಧಿಗಾಗಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷ ರೂ.30 ಲಕ್ಷ ಬಿಡುಗಡೆ ಮಾಡಿದೆ.ಸಸ್ಯ ಉದ್ಯಾನದ ಕಾವಲುಗಾರರ ಪ್ರಕಾರ, ಪಾರ್ಕ್್ ಉದ್ಘಾಟನೆ ಆಗಿದ್ದರೂ ಇನ್ನೂ ನಾಗರಿಕರನ್ನು ಆಕರ್ಷಿಸುತ್ತಿಲ್ಲ. ಆಸುಪಾಸಿನ ಬಡಾವಣೆಗಳ ಕುಟುಂಬಗಳು ಸೀಮಿತ ಸಂಖ್ಯೆಯಲ್ಲಿ ಬರುತ್ತವೆ. ಮಕ್ಕಳು ಬಂದು ಆಡಿಹೋಗುತ್ತಾರೆ. ಮುಖ್ಯ ಧ್ವಾರದ ಬೀಗವನ್ನು ತೆಗೆಯಲಾಗದಷ್ಟು ಪ್ರತಿಕ್ರಿಯೆ ಸದ್ಯದ ಸ್ಥಿತಿಯಲ್ಲಿದೆ.ಆದರೆ, ಉಪ ವಲಯ ಅರಣ್ಯಾಧಿಕಾರಿ ಪಂಚಾಕ್ಷರಿ ಅವರು, ‘ಬೀದರ್ ಪ್ರಸ್ತುತ ನೌಬಾದ್ ಪ್ರದೇಶಕ್ಕೆ ಅಭಿಮುಖವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಪಾರ್ಕ್ ಬರುವ ವರ್ಷಗಳಲ್ಲಿ ನಗರಕ್ಕೆ ಒಂದು ಉತ್ತಮ ಆಸ್ತಿ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.ಒಟ್ಟು 125 ಎಕರೆ ಭೂಮಿಯಲ್ಲಿ ಉದ್ಯಾನ ಇದೆ. ಇಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ಪಾದಚಾರಿ ಮಾರ್ಗದ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕಾಗಿದೆ. ನಾಗರಿಕರ ಸಲಹೆ, ಅಭಿಪ್ರಾಯಗಳನ್ನು ಪರಿಗಣಿಸಿ ಇದನ್ನು ರೂಪಿಸಲಾಗುತ್ತಿದೆ.ಬರುವ ವರ್ಷಗಳಲ್ಲಿ ನಾಗರಿಕರ ಸಮಿತಿಯನ್ನು ರಚಿಸಿ, ಆ ಸಮಿತಿಗೆ ಇದರ ನಿರ್ವಹಣೆ, ಉಸ್ತುವಾರಿಯನ್ನು ವಹಿಸಬಹುದು. ಇದು, ಉದ್ಯಾನ ನಮ್ಮದು ಎಂಬ ಭಾವನೆಯನ್ನು ಸಮುದಾಯದಲ್ಲಿ ಮೂಡಿಸಲಿದ್ದು, ಪ್ರಗತಿಗೂ ಪೂರಕವಾಗಿ ಇರಲಿದೆ ಎಂದು ಅಭಿಪ್ರಾಯಪಡುತ್ತಾರೆ.ಸಾರಿಗೆ ಸೌಲಭ್ಯದ ಕೊರತೆ: ಸಸ್ಯ ಉದ್ಯಾನದ ಅಭಿವೃದ್ಧಿ ಉತ್ತಮ ಬೆಳವಣಿಗೆ ಆದರೆ, ಇದು ನೌಬಾದ್  ಪ್ರದೇಶದ ಆಚೆಗಿದ್ದೂ, ಇದನ್ನು ನಾಗರಿಕರಿಗೆ ಹತ್ತಿರವಾಗಿಸಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.ನಗರ ಪರಿಮಿತಿಯಿಂದ ನೌಬಾದ್  ದೂರವಿದೆ. ಕನಿಷ್ಠ ನಗರ ಸಾರಿಗೆಯನ್ನು ಅಲ್ಲಿಯವರೆಗೂ ವಿಸ್ತರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದರೆ ಕುಟುಂಬ ಸದಸ್ಯರು ಹೋಗಿ, ಭೇಟಿ ನೀಡುವ ಮನಸ್ಸು ಮಾಡಬಹುದು. ಜೊತೆಗೆ,  ನಿಗದಿತ ಅವಧಿಯಲ್ಲಿ, ವಾರಾಂತ್ಯದಲ್ಲಿ ಪರಿಸರದ ಮಹತ್ವ, ಲಕ್ಷವೃಕ್ಷ ಅಭಿಯಾನ ಸೇರಿ ಕಾಡು ಬೆಳೆಸುವ ಹಾಗೂ ಉಳಿಸುವ, ವನ್ಯಜೀವಿಗಳು ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸುವ ಸೌಲಭ್ಯವನ್ನು ಕಲ್ಪಿಸಬಹುದು. ಇಂಥ ಕಾರ್ಯಕ್ರಮಗಳು ಭೇಟಿ ನೀಡುವ ಸಾರ್ವಜನಿಕರಿಗೆ ಮನರಂಜನೆ ಜೊತೆಗೆ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಜಾಗೃತಿಯನ್ನೂ ಮೂಡಿಸಬಹುದಾಗಿದೆ ಎಂಬ ಅಭಿ­ಪ್ರಾಯಯವಿದೆ.ಈ ಕುರಿತು ಪಂಚಾಕ್ಷರಿ ಅವರ ಗಮನಸೆಳೆದಾಗ, ‘ಸಾರಿಗೆ ಸೌಲಭ್ಯ ಕುರಿತಂತೆ ಮೇಲಧಿಕಾರಿಗಳ ಮೂಲಕ ಸಾರಿಗೆ ಸಂಸ್ಥೆ ಜೊತೆಗೆ ಚರ್ಚಿಸಬಹುದು. ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಪರಿಸರ ಜಾಗೃತಿಗೆ ವೇದಿಕೆಯನ್ನಾಗಿಯೂ ಉದ್ಯಾನ ಬಳಸುವ ಸಲಹೆ ಕುರಿತುಚಿಂತನೆ ನಡೆಸಲಾಗುವುದು’ಎಂದು ಪ್ರತಿಕ್ರಿಯಿಸುತ್ತಾರೆ.ಈಗಾಗಲೇ ನಗರದಲ್ಲಿ ದೇವ ದೇವ ವನ ಇದ್ದು, ಕೆಲವೊಮ್ಮೆ ಅಹಿತಕರ ಚಟುವಟಿಕೆಗಳಿಗೆ ಆಸ್ಪದವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಜನರ ಭೇಟಿ ಕಡಿಮೆ ಆಗಿದೆ. ಇನ್ನೊಂದೆಡೆ, ಅರಣ್ಯದ ಮಗ್ಗುಲಲ್ಲೇ ಇರುವ ಪಾಪನಾಶಿನಿ ಕೆರೆಯಲ್ಲಿ ಆರಂಭವಾಗಿದ್ದ ಬೋಟಿಂಗ್ ಯೋಜನೆ ವಿಫಲವಾಗಿರುವ ನಿದರ್ಶನಗಳು ಕಣ್ಣ ಮುಂದಿವೆ.ಜನಪ್ರತಿನಿಧಿಗಳಿಂದ ಈಗ ನವಿಲು ವನ ಅಭಿವೃದ್ಧಿ, ಸಫಾರಿ ಸ್ಥಾಪನೆ ಕುರಿತು ಸಲಹೆಗಳು ಬಂದಿವೆ. ಇಂಥ ಕ್ರಮ ಸ್ವಾಗತಾರ್ಹವಾದರೂ, ಪ್ರಸ್ತುತ ಬಳಕೆಗೆ ಸಜ್ಜಾಗಿರುವ ಸಸ್ಯ ಉದ್ಯಾನದಲ್ಲಿ (ಟ್ರೀ ಪಾರ್ಕ್) ಇನ್ನಷ್ಟು ಸೌಲಭ್ಯ ಕಲ್ಪಿಸುವ ಮೂಲಕ ಜನರಿಗೆ ಹತ್ತಿರವಾಗಿಸುವ ಪ್ರಯತ್ನಗಳು ಆದ್ಯತೆ ಮೇಲೆ ಆಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry