ಜನರಿಲ್ಲದೆ ಬಣಗುಡುತ್ತಿವೆ ಮಳಿಗೆಗಳು

7

ಜನರಿಲ್ಲದೆ ಬಣಗುಡುತ್ತಿವೆ ಮಳಿಗೆಗಳು

Published:
Updated:

ಗಜೇಂದ್ರಗಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ನಾಗರಿಕರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಆಯೋಜಿಸಲಾದ `ಸಾರ್ವಜನಿಕ ಮಾಹಿತಿ' ಆಂದೋಲನ ಕಾರ್ಯಕ್ರಮಕ್ಕೆ ಪ್ರಚಾರದ ಕೊರತೆ ಎದುರಾಗಿದೆ. ಹೀಗಾಗಿಯೇ ಕಾರ್ಯಕ್ರಮದ ಮೊದಲ ದಿನ ಬೆರಳೆಣಿಕೆಯಷ್ಟು ನಾಗರಿಕರು ಸಹ ಪ್ರಚಾರ ಮಳಿಗೆಗಳತ್ತ ಸುಳಿಯದಿರುವುದು ಪ್ರಾಯೋಜಕತ್ವದ ಹೊಣೆ ಹೊತ್ತ ಇಲಾಖೆಗಳು ತೀವ್ರ ಮುಜುಗರ ಅನುಭವಿಸುವಂತಾಯಿತು.ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ, ಭಾರತ ಸರ್ಕಾರದ ವಾರ್ತಾ ಶಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅನ್ಯ ಮಾಧ್ಯಮ ಘಟಕಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಗದಗ ಇವರ ಸಹಭಾಗಿತ್ವದಲ್ಲಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ ಪಟ್ಟಣದ ಜಿ.ಕೆ.ಬಂಡಿ ಗಾರ್ಡ್‌ನಲ್ಲಿ ನಿರಂತರ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಮೊದಲ ದಿನವೇ ಕನಿಷ್ಠ ಪ್ರಮಾಣದ ಜನತೆ ಕಾರ್ಯಕ್ರಮದತ್ತ ಸುಳಿಯದಿರುವುದು ಪ್ರಚಾರದ ಕೊರತೆಯ ತೀವ್ರತೆಯನ್ನು ಸಾರಿ ಹೇಳುತ್ತಿದೆ.ಹತ್ತೆ ಮಳಿಗೆಗಳಿಗೆ ಸೀಮಿತ: ಜಿಲ್ಲಾ ಮಟ್ಟದ ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯ ಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 50ಕ್ಕೂ ಅಧಿಕ ಸಾರ್ವಜನಿಕ ಮಾಹಿತಿ ಆಂದೋಲನ ಮಳಿಗೆಗಳಿರಬೇಕು. ಆದರೆ, ಶುಕ್ರವಾರ ಗಜೇಂದ್ರಗಡದ ಜಿ.ಕೆ.ಬಂಡಿ ಗಾರ್ಡ್‌ನಲ್ಲಿ ಕೇವಲ 10 ಜಾಗೃತಿ ಮಳಿಗೆಗಳ ಮಾತ್ರ ಗೋಚರಿಸಿದವು.ಆಕರ್ಷಣೀಯ ಕೇಂದ್ರ ಕೃಷಿ ಮಳಿಗೆ: ಕೃಷಿ  ಇಲಾಖೆ ರೋಣ ವತಿಯಿಂದ ಸ್ಥಾಪಿಸಲಾದ ಜಾಗೃತಿ ಮಳಿಗೆಗಳಲ್ಲಿ `ವಸ್ತು ಪ್ರದರ್ಶನ', ಸಾವಯವ ಗ್ರಾಮ ಯೋಜನೆಯಡಿಯಲ್ಲಿ ರೋಣ ತಾಲ್ಲೂಕಿನ ಮ್ಯಾಕಲ್‌ಝರಿ ಗ್ರಾಮದ ಸಾವಯವ ರೈತರು ಬೆಳೆದ ಜೋಳ, ಭತ್ತ, ಶೇಂಗಾ, ರಾಗಿ, ಸೂರ್ಯಕಾಂತಿ, ಮೆಕ್ಕೆಜೋಳ, ಕಡಲೆ, ಹುಳಿ, ಈರುಳ್ಳಿ ಇತ್ಯಾದಿ ಬೀಜಗಳು ಮತ್ತು ಸಾವಯವ ಕೃಷಿ ಮಾಹಿತಿಯ ಕೈಪಿಡಿಗಳು, ಸಾವಯವ ಕೃಷಿ ಪದ್ಧತಿಯಿಂದ ಆಗುವ ಲಾಭಗಳ ಕುರಿತಾದ ಸಮಗ್ರ ಮಾಹಿತಿ ಲಭ್ಯವಿತ್ತು.ಎರೆಹುಳು ತಯಾರಿಕೆ ಪದ್ಧತಿಗಳು, ಸಾವಯವ ಕೃಷಿಗೂ, ರಾಸಾಯನಿಕ ಕೃಷಿ ಪದ್ಧತಿಗೂ ಇರುವ ವ್ಯತ್ಯಾಸಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲು ನುರಿತ ಸಿಬ್ಬಂದಿ ಮಳಿಗೆಯಲ್ಲಿದ್ದರು. ರೈತರಿಗೆ ಹೆಚ್ಚುವರಿ ಮಾಹಿತಿ ನೀಡಲು ಸಹಾಯಕ ಕೃಷಿ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್ ಮಳಿಗೆಯಲ್ಲಿಯೇ ಕಾರ್ಯನಿರ್ವಹಿಸಿದ್ದು, ವಿಶೇಷವಾಗಿತ್ತು. ಜಾಗೃತಿ ಆಂದೋಲ ಕಾರ್ಯಕ್ರಮದಲ್ಲಿ ಹಾಕಲ್ಪಟ್ಟ ಉಳಿದೆಲ್ಲ ಮಳಿಗೆಗಳಿಗಿಂತ ಕೃಷಿ ಮಳಿಗೆ ಜನತೆಯನ್ನು ಆಕರ್ಷಿಸಿದ್ದು ವಿಶೇಷ.ಜಲಾನಯನ, ನಿರ್ಮಲ ಭಾರತ ಅಭಿಯಾನ, ಕಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಇಂದಿರಾ ಆವಾಸ (ವಸತಿ ಯೋಜನೆ), ಜಲ ನಿರ್ಮಲ ಯೋಜನೆ ಮಳಿಗೆಗಳಲ್ಲಿ ಜನತೆಗೆ ಮಾಹಿತಿ ನೀಡಲು ಸಿಬ್ಬಂದಿಗಳಿರಲ್ಲಿಲ್ಲ.`ಈ ಕಾರ್ಯಕ್ರಮದ ಕುರಿತು ನಮಗೆ ಮಾಹಿತಿ ಇರಲಿಲ್ಲ. ನಿನ್ನೆ ರಾತ್ರಿ ಹಿರಿಯ ಅಧಿಕಾರಿಗಳು ಪೋನ್ ಮಾಡಿ ನಾಳೆ ಕಾರ್ಯಕ್ರಮವಿದೆ. ಮಳಿಗೆ ಹಾಕಬೇಕು' ಎಂದು ಆದೇಶ ಮಾಡಿದರು. ತರಾತುರಿಯಲ್ಲಿ ಸಿಕ್ಕ ಮಾಹಿತಿ, ಕೈಪಿಡಿಗಳನ್ನು ಮಾತ್ರ ತಂದು ಮಳಿಗೆ ನಿರ್ಮಿಸಿದ್ದೇವೆ' ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕಾರ್ಯಕ್ರಮದ ತರಾತುರಿ ಕುರಿತು `ಪ್ರಜಾವಾಣಿ'ಗೆ ಈ ಸಂದರ್ಭದಲ್ಲಿ ವಿವರಿಸಿದರು

 

ಕಾರ್ಯಕ್ರಮದ ಉದ್ದೇಶ

ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿಯೂ ಶೇ.75 ರಷ್ಟು ಗ್ರಾಮೀಣ ಪ್ರದೇಶದ ಜನತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ ಯೋಜನೆಗಳ ಕುರಿತಾಗಿ ಕನಿಷ್ಠ ಪ್ರಮಾಣದ ತಿಳುವಳಿಕೆ ಇರುವುದಿಲ್ಲ. ಹೀಗಾಗಿಯೇ ಸರ್ಕಾರದ ಬಹುತೇಕ ಯೋಜನೆಗಳು ಅರ್ಹ ಫಲಾನು ಭವಿಗಳನ್ನು ತಲುಪುತ್ತಿಲ್ಲ. ಇದರ ಮುಂದುವರೆದ ಭಾಗವಾಗಿಯೇ ಸರ್ಕಾರಗಳು ಸಾಕಷ್ಟು ಮಹತ್ವಾ ಕಾಂಕ್ಷಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪತ್ತಿಲ್ಲ.ನಾಗರಿಕರಿಗೆ ಸರ್ಕಾರಿ ಯೋಜನೆಗಳ ಸಮಗ್ರ ಮಾಹಿತಿ ಇಲ್ಲದಿರುವುದರಿಂದಾಗಿಯೇ ಸರ್ಕಾರಿ ಯೋಜನೆಗಳಲ್ಲಿ ಬಾರಿ ಪ್ರಮಾಣದ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂಬ ಆರೋಪಿಗಳಿಂದ ಸರ್ಕಾರಿ ಯೋಜನೆಗಳನ್ನು ಮುಕ್ತಗೊಳಿಸುವ ಉದ್ದೇಶದಿಂದಾಗಿಯೇ, ಪ್ರತಿಯೊಬ್ಬರಿಗೂ ಸರ್ಕಾರಿ ಯೋಜನೆಗಳ ಕುರಿತಾಗಿ ಅರಿವು ಮೂಡಿಸುವ ಉದ್ದೇಶವನ್ನು ಸಾರ್ವಜನಿಕ ಮಾಹಿತಿ ಆಂದೋಲನ ಕಾರ್ಯಕ್ರಮದ ಉದ್ದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry