ಜನರ ಅನುಕೂಲಕ್ಕೆ ಇನ್ನಷ್ಟು ಎಚ್‌ಡಿ ಒನ್

ಗುರುವಾರ , ಜೂಲೈ 18, 2019
24 °C

ಜನರ ಅನುಕೂಲಕ್ಕೆ ಇನ್ನಷ್ಟು ಎಚ್‌ಡಿ ಒನ್

Published:
Updated:

ಧಾರವಾಡ: “ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಬಿಲ್ ಪಾವತಿ ಸುಲಭವಾಗಿಸಲು ಪ್ರಾರಂಭಿಸಲಾದ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರಗಳಲ್ಲಿ ಕಳೆದ ಸಾಲಿನಲ್ಲಿ ಒಟ್ಟು 9.80 ಲಕ್ಷ ಸಂಖ್ಯೆಯ ಬಿಲ್ಲುಗಳನ್ನು ಪಾವತಿಗಾಗಿ ಸ್ವೀಕರಿಸಿದ್ದು, 58.76 ಕೋಟಿ ರೂ. ಹಣ ಸಂದಾಯವಾಗಿದೆ” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದರು.ಇಲ್ಲಿನ ಬಾರಾಕೊಟ್ರಿಯಲ್ಲಿ ಉದಯ ಹಾಸ್ಟೆಲ್ ಸಮೀಪದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗುವ ಹುಬ್ಬಳ್ಳಿ- ಧಾರವಾಡ ಒಂದರ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಧ್ಯ ಕಲಾಭವನದಲ್ಲಿ ಒಂದು ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಬಾರಾಕೊಟ್ರಿಯ ಈ ಕೇಂದ್ರವನ್ನು ಇನ್ನೆರಡು ವಾರಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗುವುದು ಎಂದು ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಉದಯ ಹಾಸ್ಟೆಲ್ ಸಮೀಪ ಇದ್ದ ಎರಡು ವಸತಿಗೃಹ ಉಪಯೋಗಿಸದೆ ಹಾಳು ಬಿದ್ದಿದ್ದವು. ಕುಲಪತಿಗಳೊಂದಿಗೆ ಚರ್ಚೆ ನಡೆಸಿ ಕಟ್ಟಡ ಹಾಗೂ ಜಾಗೆಯನ್ನು ಲೀಸ್ ಆಧಾರ ಮೇಲೆ ಪಡೆದುಕೊಳ್ಳಗಿದೆ. ಒಂದು ಕಟ್ಟಡವನ್ನು ಈಗಾಗಲೇ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಮೂಲಸೌಲಭ್ಯ ಒದಗಿಸುವ ಕೆಲಸ ಪೂರ್ಣಗೊಂಡಿದ್ದು, ಉಳಿದ ಕಾರ್ಯ ಎರಡು ವಾರಗಳಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಒದಗಲಿದೆ ಎಂದರು.ಈಗ ಹುಬ್ಬಳ್ಳಿಯಲ್ಲಿ ಐದು, ನವನಗರದಲ್ಲಿ ಹಾಗೂ ಧಾರವಾಡ (ಕಲಾಭವನದಲ್ಲಿ) ತಲಾ ಒಂದು ಕೇಂದ್ರ, ವಾರದ ಏಳೂ ದಿನ ಬೆಳಿಗ್ಗೆ 8 ರಿಂದ ರಾತ್ರಿ 8 ರ  ವರೆಗೆ ಕಾರ್ಯನಿರ್ವಹಿಸುತ್ತಿವೆ. 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಅವಳಿ ನಗರದಲ್ಲಿ ಪ್ರಸಕ್ತ ಸಾಲಿನಲ್ಲಿ 13 ರಿಂದ 14 ಲಕ್ಷ  ಬಿಲ್ಲುಗಳು  ಹಾಗೂ 70 ರಿಂದ 80 ಕೋಟಿ ರೂಪಾಯಿ ಹಣ   ಪಾವತಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಹಾಗೂ ಹಳೇ ಹುಬ್ಬಳ್ಳಿಯಲ್ಲಿ ತಲಾ ಎರಡು ಹೊಸ ಹು-ಧಾ ಒನ್ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಬೆಂಗಳೂರು ನಂತರ ರಾಜ್ಯದಲ್ಲಿ ಒಟ್ಟಾರೆ ಹೆಚ್ಚಿನ ಕೇಂದ್ರ ಇರುವುದು ಅವಳಿ ನಗರದಲ್ಲಿ. ಈ ಯೋಜನೆಯಡಿ ಕೇಂದ್ರ ಸ್ಥಾಪನೆಗೆ ಮೂಲಸೌಕರ್ಯವನ್ನು ಜಿಲ್ಲಾಡಳಿತ ನೀಡುತ್ತದೆ. ಕೇಂದ್ರಗಳಲ್ಲಿ ಅವಶ್ಯಕ ಸಾಫ್ಟ್‌ವೇರ್, ಹಾರ್ಡ್‌ವೆರ ಹಾಗೂ ಸಿಬ್ಬಂದಿ ನೇಮಕವನ್ನು ಯೋಜನೆಯ ಸಹಭಾಗಿಯಾದ ಸಿಎಂಸಿ ಕಂಪನಿ ನೀಡುತ್ತಿದ್ದು, ಇದೊಂದು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿಯ ಸೇವೆಯಾಗಿದೆ ಎಂದರು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಜಲಮಂಡಳಿ, ಹೆಸ್ಕಾಂ, ಬಿಎಸ್‌ಎನ್‌ಎಲ್ ದೂರವಾಣಿ ಬಿಲ್‌ಗಳಿಂದಲೇ ಶೇ.70 ರಷ್ಟು ವ್ಯವಹಾರವಿದೆ. ಆದಾಯ ತೆರಿಗೆ, ಬಸ್‌ಪಾಸ್ ಸೇರಿದಂತೆ 15 ಸೇವೆಗಳನ್ನು ಸಧ್ಯ ನೀಡಲಾಗುತ್ತಿದ್ದು, ರೈಲ್ವೆ ಸೇರಿದಂತೆ ಇನ್ನೂ ಜನಾನುಕೂಲ ಸೇವೆಗಳನ್ನು ಈ ಕೇಂದ್ರಗಳ ಮೂಲಕ ನೀಡುವುದಕ್ಕೆ ಸಂಬಂಧಿತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.  ನಗರ ಪ್ರದೇಶದ ಜನರಿಗೆ ನೆಮ್ಮದಿ ಹಾಗೂ ಭೂಮಿ ಕೇಂದ್ರಗಳ ಮೂಲಕ ದೊರಕುವ ಸೌಲಭ್ಯಗಳನ್ನು ಇಲ್ಲಿಯೂ ಸಹ ಕಲ್ಪಿಸಲು ಇಲಾಖಾ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದ ಧಾರವಾಡ ವಿಭಾಗದ ಮೇಲ್ವಿಚಾರಕ ಮಲ್ಲಿಕಾರ್ಜುನ ಭಜಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಹೆಚ್ಚಿನ ಮಳೆ ಸಂಭವ: ಸೂಚನೆ


ಧಾರವಾಡ: ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದ್ದಾರೆ.ಎರಡು ದಿನಗಳಲ್ಲಿ ಅಂದಾಜು 120 ಮಿಮೀ ಕ್ಕಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಜಿಲ್ಲೆಯ ಜನತೆ, ಸ್ಥಳೀಯ ಸಂಸ್ಥೆಗಳು ಮತ್ತು ಪಾಲಿಕೆಗಳು ಜಾಗೃತೆಯಿಂದ ಇರಲು ಜೈನ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry