`ಜನರ ಒಗ್ಗೂಡಿಸಲು ಬೇಕಿದೆ ಸೂಜಿ-ದಾರ'

7
ವಿಚಾರ ಸಂಕಿರಣದಲ್ಲಿ ಸಾಹಿತಿ ದೇವನೂರು ಮಹಾದೇವ ಅಭಿಮತ

`ಜನರ ಒಗ್ಗೂಡಿಸಲು ಬೇಕಿದೆ ಸೂಜಿ-ದಾರ'

Published:
Updated:

ಧಾರವಾಡ: `ಭಾರತದಲ್ಲಿ ವಿವಿಧ ಜಾತಿ-ಜನಾಂಗ ಗಳ ಹೆಸರಿನಲ್ಲಿ ಒಡೆದು ಹೋಗಿರುವ ಜನರು, ಚಿಂದಿ ಬಟ್ಟೆಯಂತಾಗಿದ್ದಾರೆ. ಅವರನ್ನು ಒಗ್ಗೂಡಿಸಿ ಕೌದಿಯಂತೆ ಹೊಲಿಯಲು ಸಮಾನತೆಯ ಸೂಜಿ-ದಾರದ ಅವಶ್ಯಕತೆ ಇದೆ' ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗವು ಸೋಮವಾರ ಇಲ್ಲಿ ಏರ್ಪಡಿಸಿದ್ದ `ಆಧುನಿಕ ಕರ್ನಾಟಕದಲ್ಲಿ ದಲಿತ ಮತ್ತು ಬ್ರಾಹ್ಮಣೇತರ ಚಳವಳಿಗಳು' ಕುರಿತ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ರಾಷ್ಟೀಯ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, `ವಿ.ಎಸ್.ನೈಪಾಲ್ ಭಾರತವನ್ನು ಗಾಯಗೊಂಡ ಸಂಸ್ಕೃತಿ ಎಂದು ಕರೆದಿದ್ದಾರೆ.ಹೊರಗಿನ ಆಕ್ರಮಣಗಳಿಂದ ಸಂಸ್ಕೃತಿ ಗಾಯಗೊಂಡಿತು ಎಂದಿದ್ದಾರೆ. ಆದರೆ ಅದು ಸತ್ಯವಲ್ಲ. ಒಳಗಿನ ಆಕ್ರಮಣದಿಂದಲೇ ಗಾಯಗೊಂಡಿದೆ. ವ್ಯಕ್ತಿಯೊಬ್ಬ ದಾರಿಯಲ್ಲಿ ಸಿಕ್ಕರೆ, ನೀನು ಯಾವ ಜಾತಿ, ಯಾವ ಜನಾಂಗದವನು ಎಂದು ಕೇಳುತ್ತಾರೆ. ಈ ಪದವನ್ನು ಬಳಸುವುದರಲ್ಲೇ ತಾರತಮ್ಯ ಭಾವನೆ ವ್ಯಕ್ತವಾಗುತ್ತದೆ. ಇದು ದೊಡ್ಡ ದುರಂತ.

ಇಂತಹ ಭಿನ್ನತೆ ಇರುವುದರಿಂದಲೇ ಕೆಲವರು ಹಂಚಿಕೊಂಡು ತಿನ್ನುತ್ತಿದ್ದರೂ, ಕಿತ್ತುಕೊಂಡು ತಿಂದಂತಹ ಭಾವನೆ ಮೂಡುತ್ತದೆ' ಎಂದು ವಿಶ್ಲೇಷಿಸಿದರು.`ಸಮಾನತೆಗಾಗಿ ಹಾತೊರೆಯುತ್ತಿದ್ದ ದಲಿತ ಸಂಘಟನೆಗಳು ಕ್ರಮೇಣ ಛಿದ್ರವಾಗಿದ್ದು, ಜನ ಸಂಘಟಿತವಾಗದಿರಲು ಪ್ರಮುಖ ಕಾರಣಗಳಲ್ಲೊಂದು.1972ರಲ್ಲಿ ಸ್ಥಾಪನೆಗೊಂಡ ದಲಿತ ಪ್ಯಾಂಥರ್ ಕೆಲ ವರ್ಷಗಳಲ್ಲೇ ಹೋಳಾಯಿತು. ಆ ಬಳಿಕ ಹುಟ್ಟು ಪಡೆದ ದಲಿತ ಸಂಘರ್ಷ ಸಮಿತಿ ಹತ್ತಾರು ಭಾಗಗಳಾಗಿ ಒಡೆದು ಹೋಗಿದೆ' ಎಂದು ವಿಷಾದಿಸಿದರು.

ಮಠಗಳ ಸೆರೆಯಿಂದ ಬಿಡಿಸಿ: `12ನೇ ಶತಮಾನದ ಶರಣರ ಅನುಭವದ ಮೂಸೆಯಲ್ಲಿ ಹೊರಹೊಮ್ಮಿದ ವಚನಗಳು ಇಂದು ಮಠಗಳ ಸೆರೆಯಲ್ಲಿ ಬಂದಿಯಾಗಿವೆ.

ಆ ಸೆರೆಯಿಂದ ಬಿಡಿಸಿ ರಸ್ತೆಯಲ್ಲಿ ನಡೆದಾಡಲು ಬಿಡಬೇಕು. ನಾವು12ನೇ ಶತಮಾನದತ್ತ ಹೊರಳಿ ನೋಡಿ ಅಸಮಾನತೆಯ ಸಮಸ್ಯೆಗೆ ಪರಿಹಾರ ಸಿಗಬಹುದಾ ಎಂದು ಹುಡುಕಬೇಕಿದೆ' ಎಂದು ಮಹಾದೇವ ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿ.ವಿ. ಕುಲಪತಿ ಡಾ.ಎಚ್.ಬಿ.ವಾಲೀಕಾರ, `ದಲಿತ ಚಳವಳಿ, ರೈತ ಚಳವಳಿ ಉದ್ದೀಪನಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ನಾವಿನ್ನೂ ಯುವಕರಾಗಿದ್ದೆವು. ಆದರೆ ಇಂದಿನ ವ್ಯವಸ್ಥೆ ಆ ಚಳವಳಿಗಳನ್ನು ಆಪೋಶನ ತೆಗೆದುಕೊಂಡಿದೆ' ಎಂದು ವಿಷಾದಿಸಿದರು.`ಮಹಾದೇವ ಅವರ ಒಡಲಾಳ ಮತ್ತು ಕುಸುಮಬಾಲೆ ಕೃತಿಗಳು ಓದುಗರ ಅಂತಃಕರಣವನ್ನು ಕಲಕಿವೆ. ಎಂದಿಗೂ ಪ್ರಶಸ್ತಿಗೆ ಆಸೆ ಪಡದ ಅವರಿಗೆ ಕಳೆದ ವರ್ಷ ಕರ್ನಾಟಕ ವಿ.ವಿ.ಯ ಗೌರವ ಡಾಕ್ಟರೇಟ್ ಕೊಡುವ ಸಲುವಾಗಿ ಸಂಪರ್ಕಿಸಿದರೆ, ಅವರು ನಿರಾಕರಿಸಿದರು' ಎಂದರು.`ಪ್ರಜಾವಾಣಿ' ಸಹಾಯಕ ಸಂಪಾದಕ ದಿನೇಶ್ ಅಮಿನ್ ಮಟ್ಟು ಮಾತನಾಡಿ, `ವಾಸ್ತವವಾಗಿ ಎರಡು ಭಾರತಗಳು ಅಸ್ತಿತ್ವದಲ್ಲಿವೆ. ಅತಿ ಶ್ರೀಮಂತರ, ವಿದೇಶಿ ಕಾರುಗಳಿರುವ, ವಿಮಾನ ನಿಲ್ದಾಣ, ಝಗಮಗಿಸುವ ಮಾಲ್‌ಗಳಿರುವುದು ಒಂದು ಭಾರತ.

ಮತ್ತೊಂದು, ತುತ್ತು ಅನ್ನಕ್ಕೂ ಗತಿ ಇಲ್ಲದೇ ಬೀದಿ ಬದಿ ಬದುಕುವ ಜನರನ್ನು ಹೊಂದಿರುವುದು. ಇಂದಿಗೂ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ ನೀಡಿದ ವರದಿಯಂತೆ ಪ್ರತಿ 18 ನಿಮಿಷಕ್ಕೆ ಇಬ್ಬರು ದಲಿತರ ಮನೆಗಳನ್ನು ಸುಡಲಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರನ್ನು ಕೊಲೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry