ಭಾನುವಾರ, ಜೂನ್ 13, 2021
20 °C

ಜನರ ಗೋಳು ಕೇಳದ ನಗರಸಭೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: `ಎತ್ತು ಎರೆಗೆ ಎಳೆದರೆ ಕೋಣ ಕೆರೆಗೆ ಎಳೆಯಿತು~ ಎಂಬ ಮಾತು ಸ್ಥಳೀಯ ನಗರಸಭೆಗೆ ಅಕ್ಷರಶಃ ಅನ್ವಯ ಆಗುತ್ತಿದೆ. ಅಭಿವೃದ್ಧಿಯ ಮಾತಂತೂ ದೂರವೇ ಉಳಿಯಿತು. ಕನಿಷ್ಠ ಸ್ವಚ್ಛತೆಯನ್ನು ನಗರದಲ್ಲಿ ಕಾಪಾಡಿಕೊಳ್ಳಲು ನಗರಸಭೆಗೆ ಸಾಧ್ಯವಾಗಿಲ್ಲ. ಸಾರ್ವಜನಿಕರ ಗೋಳು ಕೇಳುವವರಿಲ್ಲ.ಕಳೆದ 3-4 ತಿಂಗಳಿನಿಂದ ಕಸ ವಿಲೇವಾರಿ ಗುತ್ತಿಗೆದಾರರಿಗೆ ನಗರಸಭೆಯಿಂದ ಯಾವುದೇ ಹಣ ಪಾವತಿ ಆಗಿಲ್ಲ. ಹಾಗಾಗಿ ಕಾರ್ಮಿಕರಿಗೆ ಗುತ್ತಿಗೆದಾರರು ಸಂಬಳ ಸಂದಾಯ ಮಾಡುವುದನ್ನು ನಿಲ್ಲಿಸಿದ್ದಾರೆ. ಆದ್ದರಿಂದ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.ಸ್ವಚ್ಛತಾ ಕಾರ್ಯ ಸ್ಥಗಿತಗೊಂಡ ಪರಿಣಾಮವಾಗಿ ನಗರದ ಎಲ್ಲ ಕಸದ ತೊಟ್ಟಿಗಳು ತುಂಬಿ ಹೋಗಿ ದುರ್ವಾಸನೆ ಹೊರಡುತ್ತಿದೆ. ರಸ್ತೆಗಳ ಮೇಲೆ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದಕ್ಕೆ ಪ್ರಮುಖ ರಸ್ತೆಗಳು ಸಹ ಹೊರತಾಗಿಲ್ಲ. ಮಾರಕ ರೋಗ ರುಜಿನಗಳು ಹರಡುವ ಅಪಾಯದ ಹಂತ ತಲುಪಿದೆ.ನಗರದ ಕೆಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಹಗಲು ಬೆಳಗುತ್ತವೆ. ರಾತ್ರಿ ಆಗುತ್ತಿದ್ದಂತಯೇ ಆರಿ ಹೋಗುತ್ತಿವೆ. ಇಂತಹ ಸಮಸ್ಯೆಗಳ ಕುರಿತು ನಗರಸಭೆಯ ಗಮನ ಸೆಳೆದರೂ ಪ್ರಯೋಜನ ಆಗುತ್ತಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ರಾತ್ರಿ ವೇಳೆಯಲ್ಲಿ ಇಲ್ಲದ ಬೀದಿ ದೀಪದ ಬೆಳಕು ಹಗಲಿನ ಉರಿಬಿಸಿಲಿನಲ್ಲಿ ಉರಿದು ಇನ್ನಷ್ಟು ಪ್ರಖರತೆಯನ್ನು ಹೆಚ್ಚಿಸುತ್ತಿವೆ.ನಗರಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಪೌರಾಯುಕ್ತರು ಕೆಲಸದ ವೇಳೆಯಲ್ಲಿ ನಗರಸಭೆ ಕಾರ್ಯಾಲಯಕ್ಕೆ ಬರುವುದಿಲ್ಲ. ಕಳೆದ ಹಲವು ತಿಂಗಳುಗಳಿಂದ ಸಾಮಾನ್ಯ ಸಭೆ ಜರುಗಿಲ್ಲ. ನಗರಸಭೆ ಸಂಪೂರ್ಣ ನಿಷ್ಕ್ರಿಯವಾಗಿದೆ.ನಗರಸಭೆ ಅಧ್ಯಕ್ಷರು ಹಾಗೂ ಬಹುತೇಕ ಹೆಚ್ಚಿನ ಸಂಖ್ಯೆಯ ಸದಸ್ಯರು ಪಕ್ಷಭೇದ ಮರೆತು ಪೌರಾಯುಕ್ತರ ಸೇವಾ ವರ್ಗಾವಣೆಗೆ ಆಗ್ರಹಿಸಿ ನಡೆಸಿದ್ದ ಹೋರಾಟ ವಿಫಲವಾದಂತೆ ಆಗಿದೆ. ಮಾಜಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಹುಸಿಯಾಗಿದೆ. ಮತ್ತೆ ಹೋರಾಟ ರೂಪಿಸುವ ಲಕ್ಷಣಗಳು ಕಾಣ ಬರುತ್ತಿಲ್ಲ.ಈ ಮಧ್ಯೆ ನಗರಸಭೆಗೆ ಸರಕಾರದಿಂದ ಬಿಡುಗಡೆ ಆಗಿದ್ದ ಅನುದಾನದ ಬಳಕೆ ಆಗದೇ ಸರಕಾರಕ್ಕೆ ಮರಳಿಸುವ ಪರಿಸ್ಥಿತಿ ನಿರ್ಮಾಣ ಆಗಬಹುದು. ಆದರೆ ಇದುವರೆಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತ ಮೌನವಾಗಿದ್ದಾರೆ.

 

ಯಾರೊಬ್ಬರೂ ಸಮಸ್ಯೆ ಬಗ್ಗೆ ನಗರಸಭೆಗೆ ದೂರು ನೀಡಿಲ್ಲ. ಈ ವರೆಗೆ ಸಮಸ್ಯೆ ಬಗ್ಗೆ ಯಾರೊಬ್ಬರೂ  ದೂರು ಸಲ್ಲಿಸಿಲ್ಲ. ಆದರೆ ಸಮಸ್ಯೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ವಚ್ಛತೆ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಆಯುಕ್ತರು ಹೇಳುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.