ಜನರ ನೆಮ್ಮದಿ ಕಳೆದ ನೆಮ್ಮದಿ ಕೇಂದ್ರ

7

ಜನರ ನೆಮ್ಮದಿ ಕಳೆದ ನೆಮ್ಮದಿ ಕೇಂದ್ರ

Published:
Updated:

ಗದಗ: ಅಲ್ಲಿ ಬೆಳಿಗ್ಗೆ 7ಗಂಟೆಗೆ ಉದ್ದನೆಯ ಸಾಲು ನೋಡಬಹುದು. ನೀರಿಗಾಗಿಯೂ ಅಲ್ಲ, ಪಡಿತರ ಪದಾರ್ಥ ಕೊಳ್ಳುವುದಕ್ಕೂ ಅಲ್ಲ ಅಥವಾ ಸಿನಿಮಾ ಟಿಕೆಟ್ ಪಡೆಯುವುದಕ್ಕಂತೂ ಅಲ್ಲವೇ ಅಲ್ಲ.ಜಾತಿ-ಆದಾಯ ಪ್ರಮಾಣ ಪತ್ರ, ರಹವಾಸಿ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ, ವಾರ್ಸಾ ಪ್ರಮಾಣಪತ್ರ, ಜಮೀನಿನ ಪಹಣಿ ಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳನ್ನು ಪಡೆಯಲು ನೆಮ್ಮದಿ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತಿರುತ್ತಾರೆ.ಗದುಗಿನಲ್ಲಿರುವ ಏಕೈಕ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರಗಳನ್ನು ಪಡೆಯಬೇಕು. ಶಾಲಾ ಮಕ್ಕಳು, ಯುವಕ-ಯುವತಿಯರು ಬೆಳಿಗ್ಗೆ 7 ಗಂಟೆಗೆ ಕೇಂದ್ರದ ಮುಂದೆ ನಿಂತಿರುತ್ತಾರೆ. ಹತ್ತು ಗಂಟೆ ಯಾಗುತ್ತಿದ್ದಂತೆ ಕೇಂದ್ರದ ಮುಂದೆ ನೂರಾರು ಜನರು ಜಮಾಯಿಸಿರುತ್ತಾರೆ. ಒಂದು ವಾರದಿಂದ ಕೇಂದ್ರದ ಮುಂದೆ ಸಾಲುಗಟ್ಟಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.ರಹವಾಸಿ ಪಡೆಯಲು ಗಂಟೆಗಟ್ಟಲೆ ನಿಂತು ಅರ್ಜಿ ಸಲ್ಲಿಸಲು ದಿನವೇ ಬೇಕಾಗುತ್ತದೆ. ವಿದ್ಯುತ್ ಕೈಕೊಟ್ಟ ರಂತೂ ಅರ್ಜಿದಾರರು ಶಾಪ ಹಾಕು ತ್ತಾರೆ. ಒಂದು ರೀತಿಯಲ್ಲಿ ನೆಮ್ಮದಿ ಕೇಂದ್ರದಿಂದ ಪ್ರಮಾಣ ಪತ್ರ ಪಡೆಯುವುದು ಎಂದರೆ ಜನರಿಗೆ ಬೇಸರ ಮೂಡಿಸಿದರೂ ಅನಿವಾರ್ಯ ವಾಗಿ ಪ್ರಮಾಣ ಪತ್ರ ಪಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಾಲೇಜು ವಿದ್ಯಾರ್ಥಿಗಳು ಜಾತಿ/ಆದಾಯ ಪ್ರಮಾಣ ಪತ್ರಕ್ಕೆ, ವೃದ್ಧರು ವೃದ್ಧಾಪ್ಯ ವೇತನಕ್ಕೆ, ರೈತರು ಪಹಣಿ ಪತ್ರಕ್ಕೆ, ವಿಧವೆಯರು ವಿಧವಾ ಪ್ರಮಾಣ ಪತ್ರ, ವಾರ್ಸಾ, ರಹವಾಸಿ ಪ್ರಮಾಣ ಪತ್ರ ಪಡೆದುಕೊಳ್ಳಲು ಬರುತ್ತಾರೆ.ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿ ಗಳು, ಪಿಯುಸಿ, ಪದವಿ ವಿದ್ಯಾರ್ಥಿಗಳು ಕಾಲೇಜಿನ ಪ್ರವೇಶಾತಿ ಪಡೆಯಲು ಜಾತಿ ಆದಾಯ ಪ್ರಮಾಣ ಅಗತ್ಯ. ಈಗಷ್ಟೇ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಹೊರಬಂದಿದ್ದರಿಂದ, ಕಾಲೇಜುಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ  ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.`ನಾಲ್ಕು ದಿನದಿಂದ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಸರದಿಯಲ್ಲಿ ನಿಂತಿದ್ದೇನೆ. ಸಾಕಾಗಿ ಹೋಗೈತಿ. ಬೆಳಿಗ್ಗೆ 8 ಗಂಟೆಗೆ ಬಂದು ಸರದಿಯಲ್ಲಿ ನಿಂತ್‌ಕೊಂಡ್ರು ಸಂಜೆ ನಾಲ್ಕು ಗಂಟೆ ಯಾದರೂ ನನ್ನ ಸರದಿ ಬಂದಿಲ್ಲ. ನೀರು ಸಹ ಕುಡಿದಿಲ್ಲ. ಈ ಕಷ್ಟ ಯಾರಿಗೆ ಬೇಕ್ರೀ~ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿಗಳು.ನೆಮ್ಮದಿ ಕೇಂದ್ರದಲ್ಲಿರುವ ಒಂದೇ ಕಂಪ್ಯೂಟರ್‌ನಲ್ಲಿ ಎಲ್ಲ ಕೆಲಸ ಮಾಡಬೇಕು.  ನೂರಾರು ಜನರಿಗೆ  ಒಂದೇ ಯಂತ್ರದಿಂದ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಪ್ರಮಾಣ ಪತ್ರ ಪಡೆಯಲು ಇನ್ನೊಂದು ಕಂಪ್ಯೂಟರ್ ಹಾಗೂ ಕೇಂದ್ರದ ಅಗತ್ಯವಿದೆ ಎಂಬುದು ಸಾರ್ವಜನಿಕರ ಆಗ್ರಹ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry