ಜನರ ನೆಮ್ಮದಿ ಕೆಡಿಸಿದ ಜಲ್ಲಿ ಕ್ರಷರ್

ತುಮಕೂರು: ಬಂಡೆಗಳ ಸ್ಫೋಟದ ಸದ್ದು ಜನರ ನೆಮ್ಮದಿ ಕಸಿದಿದೆ. ತಾಲ್ಲೂಕಿನ ಗೇರಹಳ್ಳಿ ಗ್ರಾಮದ ಸುತ್ತಮುತ್ತ ಹಲವು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ.
ಅಕ್ರಮ ಗಣಿಗಾರಿಕೆ ತಡೆಯಬೇಕಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಗಣಿ ಮಾಲೀಕರೊಂದಿಗೆ ಶಾಮೀಲಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಈ ಭಾಗದ ಜನರು ಆರೋಪಿಸುತ್ತಾರೆ. ಈ ಬೆಟ್ಟದ ಸುತ್ತಮುತ್ತ 60ಕ್ಕೂ ಹೆಚ್ಚು ಕ್ರಷರ್ಗಳಿವೆ. ಇವುಗಳಲ್ಲಿ ಬಹಳಷ್ಟು ಕ್ರಷರ್ಗಳು ನೀತಿ ನಿಯಮ ಮೀರಿ ಗಣಿಗಾರಿಕೆಯಲ್ಲಿ ತೊಡಗಿವೆ. ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ. ಸುರಕ್ಷಿತ ವಲಯ ಎಂದು ಘೋಷಿಸಲಾಗಿದೆ. ಆದರೆ ಕಾನೂನು ಮೀರಿ ಇಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ.
ಸಾಕಷ್ಟು ಕ್ರಷರ್ ಮಾಲೀಕರು ಗಣಿಗಾರಿಕೆಗೆ ಬೇಕಾದ ದಾಖಲೆ, ಪರವಾನಗಿ ಹೊಂದಿಲ್ಲ. ಕಲ್ಲು ಗಣಿ ಸ್ಫೋಟಕ್ಕೆ ಮನೆಗಳು ಬಿರುಕುಬಿಟ್ಟಿವೆ. ನೆಮ್ಮದಿ ಹಾಳಾಗಿದೆ ಎಂದು ಹಿರೇಗುಂಡಗಲ್, ಕುಚ್ಚಂಗಿ, ಚಿಕ್ಕಗುಂಡಗಲ್, ಕುರುಡೀರಯ್ಯನಹಟ್ಟಿ, ಅಮಲಾಪುರ ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ. ಬೆಟ್ಟದಿಂದ 100 ಮೀಟರ್ ಅಂತರದಲ್ಲಿ ಅರಣ್ಯ ಪ್ರದೇಶವಿದ್ದು, ಗಣಿಗಾರಿಕೆಯಿಂದಾಗಿ ನವಿಲು, ಚಿರತೆ, ಕರಡಿ ಹಾಗೂ ಇತರ ಜಾತಿಯ ಪ್ರಾಣಿಗಳು ಆಪತ್ತು ಎದುರಿಸುತ್ತಿವೆ.
ರೆಹಮತ್ ಸ್ಟೋನ್ ಕ್ರಷರ್ ಸರ್ಕಾರದಿಂದ 2.2 ಎಕರೆಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದಿದ್ದು, ಒತ್ತುವರಿ ಮಾಡಿಕೊಂಡು 5 ಎಕರೆಗೆ ವ್ಯಾಪಿಸಿದೆ. ಗ್ರಾಮಸ್ಥರ ಹೋರಾಟಕ್ಕೂ ಜಗ್ಗದ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಗಣಿ ಗುತ್ತಿಗೆ ಪರವಾನಗಿ ನೀಡಿದೆ ಎಂದು ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿ ಹೋರಾಟ ಸಮಿತಿ ಹಾಗೂ ಆಂಜನೇಯ ಯುವಕ ಸಂಘ ದೂರಿದೆ.
2015 ಫೆ. 20ರಂದು ಕೋರಾ ಕಂದಾಯ ನಿರೀಕ್ಷಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಇದರಲ್ಲಿ ಗಣಿಗಾರಿಕೆ ಸ್ಥಳದಿಂದ 150ರಿಂದ 500 ಮೀಟರ್ ಒಳಗೆ ನಾಲ್ಕು ಪುರಾತನ ದೇವಾಲಯಗಳಿವೆ. ಸಿಡಿಮದ್ದು ಬಳಕೆಯಿಂದ ದೇವಾಲಯಗಳು ಹಾನಿಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಗಣಿಗಾರಿಕೆಗೆ ತಡೆ ಹಾಕಿಲ್ಲ ಎಂದು ದೂರಿದೆ.
ಜತೆಗೆ ಜ. 17ರಂದು ಆಂಜನೇಯಸ್ವಾಮಿ ಯುವಕ ಸಂಘ ನೀಡಿದ ದೂರಿನ ಮೇರೆಗೆ ನಡೆಸಲಾದ ಪೊಲೀಸ್ ತನಿಖೆಯಲ್ಲೂ ಅಕ್ರಮ ಗಣಿಗಾರಿಕೆ ಸಾಬೀತಾಗಿದೆ. ಜಲ್ಲಿ ಕ್ರಷರ್ ಕಂಪೆನಿಗೆ ₨ 1.20 ಲಕ್ಷ ದಂಡ ವಿಧಿಸಿ, ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಆದರೂ ಜಿಲ್ಲಾಧಿಕಾರಿ ಗಣಿಗಾರಿಕೆ ಅನುಮತಿ ವಾಪಸ್ ಪಡೆದಿಲ್ಲ.
ಕೋಟಿ ನಷ್ಟ: 1997ರಲ್ಲಿ ಗೇರಹಳ್ಳಿ ಸರ್ವೇ ನಂ. 30ರಲ್ಲಿ ರೆಹಮಾನ್ ಎಂಬುವರು 2 ಎಕರೆ ಜಮೀನು ಖರೀದಿಸಿದ್ದರು. ಇದರ ಪಕ್ಕದಲ್ಲೇ ಇರುವ ಸರ್ವೇ ನಂ. 31ರ ಬೆಟ್ಟ ಪ್ರದೇಶದಲ್ಲಿ ಸೈಜು ಕಲ್ಲು ಹೊಡೆಯಲು ಪರವಾನಗಿ ಪಡೆಯಲಾಗಿತ್ತು. 2000ನೇ ಇಸವಿಗೆ ಪರವಾನಗಿ ಮುಗಿದಿತ್ತು. ಮತ್ತೆ ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ನವೀಕರಿಸಲಾಗಿದೆ. ಕೂಡಲೇ ನವೀಕರಿಸಿರುವ ಪರವಾನಗಿ ವಾಪಸ್ ಪಡೆಯಬೇಕು ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.
ಒಂದೇ ದಿನದಲ್ಲಿ ಗುತ್ತಿಗೆ: ಗೇರಹಳ್ಳಿ ಸರ್ವೇ ನಂ. 31ರಲ್ಲಿ ಕಲ್ಲು ಗಣಿ ಗುತ್ತಿಗೆ ನೀಡುವಂತೆ ಎಚ್.ಎ.ಮುಕ್ತಿಯಾರ್ ಸಲ್ಲಿಸಿದ್ದ ಅರ್ಜಿಗೆ ವಿಷಯ ನಿರ್ವಾಹಕರಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಒಂದೇ ದಿನದಲ್ಲಿ ಅನುಮತಿ ದೊರೆತಿದೆ. ಕೋರಾ ಕಂದಾಯ ನಿರೀಕ್ಷಕರು 2014 ಫೆ. 20ರಂದು ಜಿಲ್ಲಾಧಿಕಾರಿಗೆ ನೀಡಿದ ವರದಿಯಲ್ಲಿ ಕಲ್ಲು ಗಣಿ ಗುತ್ತಿಗೆ ನೀಡಬಹುದು ಎಂದು ತಿಳಿಸಿದ್ದರು. ಯಾವುದೇ ಪೂರ್ವಾಪರ ಯೋಚಿಸದೆ ಆ ದಿನವೇ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎಂದು ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿ ಹೋರಾಟ ಸಮಿತಿಯ ಗೋಪಾಲರಾವ್ ಆರೋಪಿಸಿದರು.
ಲೋಕಾಯುಕ್ತಕ್ಕೆ ದೂರು: ನಿಯಮಗಳ ಪ್ರಕಾರ ಕಡತ ಮಂಡಿಸಿದಾಗ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳು ಟಿಪ್ಪಣಿ ಬರೆದ ನಂತರ ಸಹಿಯೊಂದಿಗೆ ಕಡ್ಡಾಯವಾಗಿ ದಿನಾಂಕ ನಮೂದಿಸಬೇಕು. ಆದರೆ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ವಿಷಯ ನಿರ್ವಾಹಕರು, ಅಧೀಕ್ಷಕರು ಹಾಗೂ ಅಧಿಕಾರಿಗಳು ಬರೆದಿರುವ ಕಚೇರಿ ಟಿಪ್ಪಣಿಯಲ್ಲಿ ದಿನಾಂಕ ನಮೂದಿಸದೇ ಕಡತಕ್ಕೆ ಜಿಲ್ಲಾಧಿಕಾರಿ ಅನುಮೋದನೆ ಪಡೆದಿದ್ದಾರೆ ಎಂದು ಕಚೇರಿ ಟಿಪ್ಪಣಿಯ ಪ್ರತಿ ಸಮೇತ ಲೋಕಾಯುಕ್ತರಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಆರೋಪ ಸುಳ್ಳು: ಸ್ಪಷ್ಟನೆ
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ₨ 1.2 ಲಕ್ಷ ದಂಡ ಕಟ್ಟಲಾಗಿದೆ ಎಂಬ ಆರೋಪ ಸುಳ್ಳು. ಗಣಿಗಾರಿಕೆ ಪ್ರದೇಶದಲ್ಲಿ ಹೆಚ್ಚು ಸರಕು ಸಂಗ್ರಹ ಮಾಡಿದಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದಂಡ ಕಟ್ಟಿದ್ದೇವೆ. ನಮ್ಮ ಕ್ರಷರ್ ಮಾತ್ರವಲ್ಲದೆ ಅನೇಕರು ಕ್ರಷರ್ ನಡೆಸುತ್ತಿದ್ದಾರೆ ಎಂದು ಕ್ರಷರ್ ಮಾಲೀಕ ಎಚ್.ಎ.ಮುಕ್ತಿಯಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
17 ವರ್ಷಗಳಿಂದ ಇಲ್ಲದ ಸಮಸ್ಯೆ ಕಳೆದ 5 ತಿಂಗಳಲ್ಲಿ ಬರಲು ಕಾರಣವೇನು? ಗ್ರಾಮದ ಸುತ್ತ 60ಕ್ಕೂ ಹೆಚ್ಚು ಕ್ರಷರ್ಗಳಿದ್ದು, ನಮ್ಮ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.