ಭಾನುವಾರ, ಜೂನ್ 13, 2021
21 °C

ಜನರ ಪ್ರಾಣಕ್ಕೆ ಎರವಾಗಿರುವ ರಸ್ತೆ...

ಪ್ರಜಾವಾಣಿ ವಾರ್ತೆ/ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ರಾಮನಗರ: ಎಲೆಲೆ ರಸ್ತೆ ಏನೀ ಅವ್ಯವಸ್ಥೆ... ಎಂಬ ಕವಿವಾಣಿಯನ್ನು ನೆನೆಪಿಸುವಂತಹ ರಸ್ತೆಯೊಂದು ರೇಷ್ಮೆ ನಗರ ಖ್ಯಾತಿಯ ರಾಮನಗರದ ಹೃದಯ ಭಾಗದಲ್ಲಿದೆ. ಕಿತ್ತು ಹೋಗಿರುವ ಡಾಂಬರು, ಬರೀ ಗುಂಡಿ, ಹಳ್ಳ, ತಗ್ಗುಗಳಿಂದಲೇ ತುಂಬಿರುವ ಹಾಗೂ ಸದಾ ಧೂಳು ರಾಚುವ ಈ ರಸ್ತೆ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.ಹೌದು. ಇದು ನಗರದ ಕೇಂದ್ರ ಭಾಗವಾಗಿರುವ ಐಜೂರು ವೃತ್ತದಿಂದ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ) ಕೆಂಪೇಗೌಡ ವೃತ್ತದವರೆಗೂ ಕಾಣುವ ರಸ್ತೆಯ ಚಿತ್ರಣ.ನಗರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ರಸ್ತೆ ಹಲವು ವರ್ಷಗಳಿಂದ ದುರಸ್ತಿಯಾಗಿಲ್ಲ. ಈ ಪರಿಣಾಮ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳೇ ಬಾಯ್ತೆರೆದುಕೊಂಡಿದ್ದು, ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸುವುದು ಸವಾಲಾಗಿದೆ.ಧೂಳುಮಯ ರಸ್ತೆ: ಕೆಂಪೇಗೌಡ ವೃತ್ತದಿಂದ ಜಾಲಮಂಗಲ ಮತ್ತು ಮಾಗಡಿಗೆ ಸಾಗುವ ರಸ್ತೆಯಿಂದ ನಿತ್ಯ ಸಹಸ್ರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಟ್ರ್ಯಾಕ್ಟರ್, ಲಾರಿ, ಸರ್ಕಾರಿ ಮತ್ತು ಖಾಸಗಿ ಬಸ್‌ಗಳು, ಶಾಲಾ ವಾಹನಗಳು ಹೆಚ್ಚಾಗಿ ಇಲ್ಲಿ ಚಲಿಸುತ್ತವೆ.

 

ಈ ವಾಹನಗಳು ಗುಂಡಿಗಳ ಮೇಲೆ ಸಾಗಿದಾಗೆಲ್ಲ ದೊಡ್ಡ ಪ್ರಮಾಣದಲ್ಲಿ ಧೂಳು ಹೊರಹೊಮ್ಮುತ್ತದೆ. ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಇರುವುದರಿಂದ ಇಡೀ ರಸ್ತೆಯೇ ಧೂಳುಮಯವಾಗುತ್ತದೆ. ಈ ಧೂಳಿನ ನಡುವೆ ಕಣ್ಣು ಮತ್ತು ಮೂಗುನ್ನು ತೆರೆದುಕೊಂಡು ವಾಹನ ಚಲಿಸುವುದು ದ್ವಿಚಕ್ರ ವಾಹನ ಸವಾರರಿಗೆ ದೊಡ್ಡ ಸಂಕಟವೇ ಸರಿ.ಪಾದಚಾರಿಗಳು, ರಸ್ತೆ ಬದಿಯ ಅಂಗಡಿ ಮುಂಗಟ್ಟು ಹಾಗೂ ನಿವಾಸಿಗಳಿಗಂತೂ ಇದು ನಿತ್ಯದ ಗೋಳಾಗಿ ಪರಿಣಮಿಸಿದೆ. ಧೂಳಿನಿಂದಾಗಿ ಉಬ್ಬಸ, ದಮ್ಮು, ಅಲರ್ಜಿ, ಕೆಮ್ಮು, ಉಸಿರಾಟದ ಸಮಸ್ಯೆ, ಶ್ವಾಸಕೋಶ ತೊಂದರೆಗಳು ಈ ಭಾಗದ ಜನರಲ್ಲಿ ಕಾಣುತ್ತಿವೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.ಅಂಗಡಿ ಮಾಲೀಕರ ಅಳಲು: ರಸ್ತೆ ಇಕ್ಕೆಲಗಳಲ್ಲಿ ಇರುವ ಅಂಗಡಿ- ಮುಂಗಟ್ಟಿನ ಮಾಲೀಕರಂತೂ ಈ ರಸ್ತೆಯ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ. ರಸ್ತೆಯಿಂದ ಏಳುವ ಧೂಳಿನ ಕಣಗಳು ಅಂಗಡಿ ಹಾಗೂ ಪದಾರ್ಥಗಳನ್ನು ಮುತ್ತುತ್ತಿವೆ.

 

ಇದರಿಂದ ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಕೊಳ್ಳಲು ಜನತೆ ಮುಂದಾಗುತ್ತಿಲ್ಲ ಎಂದು ಹೇಳುತ್ತಾರೆ. ಅಂಗಡಿಯನ್ನು ಶುಚಿಯಾಗಿ ಇಟ್ಟುಕೊಳ್ಳಲು ಹರಸಾಹಸ ಪಡಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.ರಸ್ತೆಯಲ್ಲಿ ಗುಂಡಿಗಳಿಂದ ಮೇಲೇಳುವ ಧೂಳಿನಿಂದ ಕಣ್ಣನ್ನು ರಕ್ಷಿಸಿಕೊಳ್ಳಲು ಕೆಲ ದ್ವಿಚಕ್ರ ವಾಹನ ಸವಾರರು `ಕೂಲಿಂಗ್ ಗ್ಲಾಸ್~ಗಳ ಮೊರೆ ಹೋಗಿದ್ದಾರೆ. ಪಾದಚಾರಿಗಳು ಮತ್ತು ಅಂಗಡಿಗಳ ಮಾಲೀಕರು ಈ ಧೂಳಿನ ಕಣಗಳು ದೇಹದ ಒಳ ಹೋಗದಂತೆ ನೋಡಿಕೊಳ್ಳಲು  ಕರವಸ್ತ್ರಗಳ ಮೊರೆ ಹೋಗಿದ್ದಾರೆ.ವಿದ್ಯಾರ್ಥಿಗಳಿಗೂ ಸಂಕಷ್ಟ: ಈ ಭಾಗದಲ್ಲಿ ಹಲವು ಶಾಲೆ ಮತ್ತು ಕಾಲೇಜುಗಳು ಬರುತ್ತವೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೂ ಇಲ್ಲಿನ ದೂಳಿನ ಸಿಂಚನ ಆಗುತ್ತಿದೆ. ಅವರು ಮೂಗಿಗೆ ಕರವಸ್ತ್ರ ಹಿಡಿದೇ ಸಾಗಬೇಕಾದ ದುಸ್ಥಿತಿ ಎದುರಾಗಿದೆ.ಈ ರಸ್ತೆಯು ನಗರಸಭೆಯ 27, 28ನೇ ವಾರ್ಡ್ ವ್ಯಾಪ್ತಿಯಲ್ಲಿ ನಗರಸಭೆ ಉಪಾಧ್ಯಕ್ಷರು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಿದರೂ ರಸ್ತೆಯ ಗುಂಡಿಗಳನ್ನು ಮುಚ್ಚಿ ತೇಪೆ ಹಾಕಿಸುವ ಗೋಜಿಗೂ ಹೋಗಿಲ್ಲ. ನಗರಸಭೆ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಭಾಗದ ಜನತೆ ಮನದಲ್ಲಿ ಹಿಡಿ ಶಾಪ ಹಾಕುತ್ತಿದ್ದಾರೆ.`ಮಾಗಡಿ ಮತ್ತು ಜಾಲಮಂಗಲ ರಸ್ತೆಗಳನ್ನು ಸಂಪರ್ಕಿಸುವ ನಗರದ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು. ಈ ಭಾಗದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು, ಮೊರಾರ್ಜಿ ದೇಸಾಯಿ ಶಾಲೆ, ಅಲ್ಲದೆ ಮೂರು-ನಾಲ್ಕು ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ.ನಗರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರಸ್ತೆಗೆ ಹೀನಾಯ ಸ್ಥಿತಿ ಬಂದೆರಗಿದೆ~ ಎಂದು ಲಕ್ಷ್ಮೀ ಟ್ರೇಡರ್ಸ್‌ನ ದೊಡ್ಡ ಗಂಗವಾಡಿ ಗೋಪಾಲ್ ಹೇಳುತ್ತಾರೆ.`ರಸ್ತೆಯ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಿ ಈ ಭಾಗದ ಜನತೆಯನ್ನು ಧೂಳಿನಿಂದ ಮುಕ್ತಗೊಳಿಸುವಂತೆ~ ವ್ಯಾಪಾರಿ ಮೂರ್ತಿ ಆಗ್ರಹಿಸುತ್ತಾರೆ.ಏನೀ ರಸ್ತೆ... ಎಂಥಾ ಅವ್ಯವಸ್ಥೆ?ಗುಂಡಿಮಯ ರಸ್ತೆಯ ದುರವಸ್ಥೆ

ಸದಾ ಧೂಳು-ಆರೋಗ್ಯದ ಗೋಳು

ಪಾದಚಾರಿಗಳಿಗೆ ತೀರದ ಸಂಕಷ್ಟ

ದ್ವಿಚಕ್ರ ವಾಹನ ಸವಾರರಿಗೆ ಸವಾಲು

ನಗರಸಭೆ ನಿರ್ಲಕ್ಷ್ಯಕ್ಕೆ ಜನರ ಶಾಪ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.