ಭಾನುವಾರ, ಜೂನ್ 13, 2021
26 °C

ಜನರ ಮೇಲೆ ಚುನಾವಣಾ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: `ನಮ್ಮ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಫಲಿತಾಂಶವೇ ಉತ್ತರ ನೀಡಲಿದೆ. ಕ್ಷೇತ್ರದ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ~ ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ನಗರದಲ್ಲಿ ಶುಕ್ರವಾರ ಅಭ್ಯರ್ಥಿ ಪರ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಮುಂದಿನ ವಿಧಾನಸಭಾ ಚುನಾವಣೆಗಾಗಿಯಷ್ಟೇ ಅಲ್ಲ; ಗೆಲ್ಲಬೇಕೆಂಬ  ಛಲದಿಂದ ಸ್ಪರ್ಧಿಸಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.ಈ ಉಪಚುನಾವಣೆಯನ್ನು ಜನತೆ ಬಯಸಿರಲಿಲ್ಲ. ಬಿಜೆಪಿ ಸದಾನಂದ ಗೌಡರಿಂದ ರಾಜೀನಾಮೆ ಕೊಡಿಸಿ, ಜನರ ಮೇಲೆ ಚುನಾವಣೆ ಹೊರೆ ಹೊರಿಸಿದೆ. ಈಗ ಅದೇ ಪಕ್ಷ ಸದಾನಂದಗೌಡರನ್ನು ಮುಖ್ಯಮಂತ್ರಿಯಾಗಿ ಆರು ತಿಂಗಳು ಅಧಿಕಾರ ಪೂರ್ಣಗೊಳಿಸುವ ಸ್ಥಿತಿಯಲ್ಲಿಟ್ಟಿಲ್ಲ. ಕ್ಷೇತ್ರದಲ್ಲಿ ನಾವು ಎರಡೂ ಪಕ್ಷಗಳಿಗಿಂತ ಮುಂದಿದ್ದೇವೆ. ಗುಲ್ಬರ್ಗ ಉಪ ಚುನಾವಣೆಯಂತೆ ಇಲ್ಲಿಯೂ ಅಚ್ಚರಿ ಫಲಿತಾಂಶ ಹೊರಹೊಮ್ಮುವುದು ನಿಶ್ಚಿತ. ಇಡೀ ರಾಜ್ಯಕ್ಕೆ ಕ್ಷೇತ್ರದ ಮತದಾರರು ಹೊಸ ಸಂದೇಶ ನೀಡಲಿದ್ದಾರೆ. ಫಲಿತಾಂಶವೂ ಮುಂದಿನ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಲೆನಾಡಿನಲ್ಲಿ ಒಂದೆಡೆ ನಕ್ಸಲ್ ಸಮಸ್ಯೆ, ಇನ್ನೊಂದೆಡೆ ಹುಲಿ ಯೋಜನೆ ಜಾರಿ ಆತಂಕ ಹಾಗೂ ಅಡಿಕೆ ಹಳದಿ ಎಲೆರೋಗ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವು ಹಳ್ಳಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಸಮಸ್ಯೆಗಳಿಂದ ಬೇಸತ್ತಿರುವ ಜನರು ಈ ಚುನಾವಣೆಯಲ್ಲಿ ಪಾಠ ಕಲಿಸುವುದು ಖಚಿತ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.