ಜನರ ವಿಶ್ವಾಸ ಉಳಿಸಿಕೊಳ್ಳಿ: ಡಾ. ಮಾಲಕರೆಡ್ಡಿ

7

ಜನರ ವಿಶ್ವಾಸ ಉಳಿಸಿಕೊಳ್ಳಿ: ಡಾ. ಮಾಲಕರೆಡ್ಡಿ

Published:
Updated:

ಯಾದಗಿರಿ: ರಾಜ್ಯದ ಸರ್ಕಾರದ ದುರಾಡಳಿತ ಹಾಗೂ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿರುವುದರಿಂದ ಜಿಲ್ಲೆಯ ಜನರು ಬಿಜೆಪಿಯನ್ನು ತಿರಸ್ಕರಿಸಿ, ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸವನ್ನು ಜಿ.ಪಂ. ನೂತನ ಸದಸ್ಯರು ಮಾಡಬೇಕು ಎಂದು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಸಲಹೆ ಮಾಡಿದರು.

ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿ.ಪಂ. ನೂತನ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಅಧಿಕಾರ ಕಾಂಗ್ರೆಸ್‌ಗೆ ಸಿಕ್ಕಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಮತದಾರರು ಆಶೀರ್ವದಿಸಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತಮ ಕೆಲಸ ಮಾಡಬೇಕು. ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸಬೇಕು ಎಂದು ತಿಳಿಸಿದರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಪಕ್ಷದ ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಿಡಿಯುವುದು ಸಾಧ್ಯವಾಗಿದೆ.ದುರಾಡಳಿತದಿಂದ ಬೇಸತ್ತಿರುವ ಜನರು ಬಿಜೆಪಿಯನ್ನು ತಿರಸ್ಕರಿಸಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ. ಇದರಿಂದಾಗಿ ಪಕ್ಷದ ಮೇಲಿನ ಜವಾಬ್ದಾರಿ ಹೆಚ್ಚಿದೆ. ಜನರ ಆಶಯದಂತೆ ಗ್ರಾಮೀಣ ಜನರ ಸಂಕಷ್ಟಗಳನ್ನು ಪರಿಹರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯ ಚುನಾವಣಾ ಗಿಮಿಕ್‌ಗಳಿಗೆ ಬೆಲೆ ಕೊಡದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಜನರ ಅಪೇಕ್ಷೆಗಳನ್ನು ಗೌರವಿಸಿ, ಈಡೇರಿಸುವತ್ತ ನೂತನ ಸದಸ್ಯರು ಗಮನ ನೀಡಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸ್ಥಗಿತಗೊಂಡು ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಕೂಡಲೇ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಜೊತೆಗೆ ಗ್ರಾಮಗಳ ಅಭಿವೃದ್ಧಿಗೂ ಗಮನ ನೀಡಬೇಕಾಗಿದೆ ಎಂದು ಹೇಳಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಶಿವಣ್ಣ ವಂಗ್ಯಾಳ, ಸೂಲಪ್ಪ ಕಮತಗಿ, ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ, ಪ್ರಭುಗೌಡ ಪಾಟೀಲ, ಬುಚ್ಚಣ್ಣ ಜೈಗ್ರಾಮ್, ಚಂದ್ರಶೇಖರ ಅರಬೋಳ, ಮರೆಪ್ಪ ಬಿಳ್ಹಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವನಾಥ ನೀಲಳ್ಳಿ, ಸಾಯಿಬಣ್ಣ ಬೋರಬಂಡ್, ಬಸವರಾಜಪ್ಪಗೌಡ ದರ್ಶನಾಪುರ ಸೇರಿದಂತೆ ಹಲವಾರು ಮುಖಂಡರು ವೇದಿಕೆಯಲ್ಲಿದ್ದರು.ಮರಿಗೌಡ ಹುಲಕಲ್ ಸ್ವಾಗತಿಸಿದರು. ಮಧುಸೂದನ ಮಾನಸಗಲ್ ನಿರೂಪಿಸಿದರು. ಮಹಿಪಾಲರೆಡ್ಡಿ ಹತ್ತಿಕುಣಿ ವಂದಿಸಿದರು. ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಪಕ್ಷದ 15 ಸದಸ್ಯರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry