ಜನರ ಸಂಭ್ರಮದ ಕೇಕೆ ನಡುವೆ ಎತ್ತಿನಓಟ

7

ಜನರ ಸಂಭ್ರಮದ ಕೇಕೆ ನಡುವೆ ಎತ್ತಿನಓಟ

Published:
Updated:

ಶಿವಮೊಗ್ಗ: ಎಲ್ಲೆಂದರಲ್ಲಿ ಚಿಮ್ಮುವ ಆಳೆತ್ತರದ ಕೆಸರು, ಒಡೆಯನ ಆರ್ಭಟ, ಹುರುಪಿಗೆ ಅಷ್ಟೇ ಭರದಲ್ಲಿ ಕೆಸರಿನಲ್ಲಿ ನೆಗೆನೆಗೆದು ಓಡುವ ಬಲಶಾಲಿ ಎತ್ತುಗಳು, ಕಿಕ್ಕಿರಿದು ತುಂಬಿದ ಜನಸ್ತೋಮ, ಎತ್ತಿನ ಓಟಕ್ಕೆ ಜನರ ಸಂಭ್ರಮದ ಕೇಕೆಯ ಸದ್ದು.- ಇದು ಸಾಗರ ತಾಲ್ಲೂಕು ಹೊಸೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಕಂಬಳ ಎತ್ತಿನ ಓಟದ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಾವಳಿಗಳು.ಕಂಬಳ ಎಂದರೇ ಕೇವಲ ಕರಾವಳಿ ಪ್ರದೇಶವಲ್ಲ, ಮಲೆನಾಡಿನಲ್ಲಿಯೂ ನಡೆಸಲು ಸಾಧ್ಯವಿದೆ ಎಂಬುದನ್ನು ಹೊಸೂರು ಗ್ರಾಮಸ್ಥರು ಸಾಬೀತು ಮಾಡಿದರು.ಗ್ರಾಮದ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಆರಂಭಿಸಿದ ಈ ಕಂಬಳ, ಇದೀಗ ಮನರಂಜನೆಯ ಕೇಂದ್ರ ಬಿಂದುವಾಗಿದೆ. ಯಾವುದೇ, ಪಕ್ಷಭೇಧ, ಜಾತಿ ಭೇದವಿಲ್ಲದೇ ಒಂದಾಗಿ ನಡೆಸುವ ಈ ಕಂಬಳದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ನೋಡುಗರು ಆಗಮಿಸಿ ಕಂಬಳಕ್ಕೆ ಆಗಮಿಸಿದ ಎತ್ತುಗಳಿಗೆ ಪ್ರೋತ್ಸಾಹ ನೀಡಿದರು.ಭಾನುವಾರ ನಡೆದ ಕಂಬಳದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸುಮಾರು 25 ಜತೆ ಎತ್ತುಗಳು ಪಾಲ್ಗೊಂಡಿದ್ದವು. ಅಲ್ಲದೇ, ಸುಮಾರು 50 ಮಂದಿ ಯುವಕರು ಕೆಸರುಗದ್ದೆ ಓಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.ಜಿ.ಪಂ. ಸದಸ್ಯ ಹುಲುಕೋಡು ರತ್ನಾಕರ್ ಉದ್ಘಾಟಿಸಿದರು. ಹೊಸೂರು ಗ್ರಾ.ಪಂ. ಅಧ್ಯಕ್ಷರಾದ ಪ್ರಭಾವತಿ ಶಂಕ್ರಪ್ಪ, ಉಪಾಧ್ಯಕ್ಷ ಕಂಚಕುಣಿ ನಾರಾಯಣಪ್ಪ, ಸದಸ್ಯರಾದ ಲೋಕೇಶ್, ನಾಗರಾಜ್, ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳಾದ ಚಿದಂಬರ ಶಿವಗಂಗೆ, ನಾಗೇಂದ್ರ ಶಿವಗಂಗೆ, ಕಟ್ಟೆ ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry