ಶುಕ್ರವಾರ, ಜನವರಿ 24, 2020
16 °C

ಜನವರಿಯಿಂದ ನೇಮಕಾತಿ ಪ್ರಕ್ರಿಯೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು 2014ರ ಜನವರಿಯಿಂದ ಆರಂಭಿಸಲಾಗುವುದು ಎಂದು ಕಾನೂನು, ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.ನಗರದಲ್ಲಿ ಶುಕ್ರವಾರ ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯಮಟ್ಟದ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.371ನೇ ತಿದ್ದುಪಡಿ ಹಿನ್ನೆಲೆಯಲ್ಲಿ ನೇಮಕಾತಿ ಸ್ಥಗಿತಗೊಂಡಿತ್ತು. ಆದರೆ ಈ ಕುರಿತ ಸಂಪುಟ ಉಪ ಸಮಿತಿಯು ನಿರಂತರ ಸಭೆ ನಡೆಸುತ್ತಿದ್ದು, ವಾಸಸ್ಥಾನ ಪ್ರಮಾಣ ಪತ್ರ, ಮೀಸಲಾತಿ ನಿಗದಿ ಮತ್ತಿತರ ವಿಚಾರಗಳ ಕುರಿತ ಗೊಂದಲ ಬಗೆಹರಿಸಲಾಗಿದೆ. ಶೀಘ್ರವೇ ಅಧಿಸೂಚನೆಯನ್ನು ಹೊರಡಿಸಿ, ಜನವರಿಯಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.ಈಗ ಕಬ್ಬು, ಜೋಳ, ರಾಗಿಗೆ ಬೆಂಬಲ ಬೆಲೆ ಘೋಷಿಸಿರುವ ಸರ್ಕಾರವು ತೊಗರಿಗೂ ಬೆಂಬಲ ಬೆಲೆ ನಿಗದಿ ಪಡಿಸಲಿದೆ. ಈ ಕುರಿತು ಸಭೆ ನಡೆದಿದ್ದು, ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು ಎಂದರು.ಕಬ್ಬಿಗೆ ಸರ್ಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕಾರ್ಖಾನೆ ಹಾಗೂ ರೈತರಿಗೆ ಸಹಮತವಿದೆ. ಆದರೆ ಕೆಲವು ದಲ್ಲಾಳಿಗಳು ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಮಾಜಿ ಸಚಿವರು ಸೇರಿದಂತೆ ಯಾರೇ ಪ್ರಭಾವ ಬೀರಿದರೂ ಸರ್ಕಾರ ಜಗ್ಗುವುದಿಲ್ಲ ಎಂದರು.

ಪ್ರತಿಕ್ರಿಯಿಸಿ (+)