ಜನವರಿಯಿಂದ ನೇರ ವರ್ಗಾವಣೆ

7
ಅಡುಗೆ ಅನಿಲ ಸಿಲಿಂಡರ್‌ನ ಸಹಾಯಧನ

ಜನವರಿಯಿಂದ ನೇರ ವರ್ಗಾವಣೆ

Published:
Updated:

ಬಳ್ಳಾರಿ: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ)ಗೆ ನೀಡುವ  ಸಹಾಯಧನದ ನೇರ ವರ್ಗಾವಣೆ ಯೋಜನೆಯನ್ನು ಈಗಾಗಲೇ ದೇಶದ 20 ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದು, ಇನ್ನೂ 269 ಜಿಲ್ಲೆಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ.ಈ ಜಿಲ್ಲೆಗಳ ಪೈಕಿ ಬಳ್ಳಾರಿಯೂ ಒಂದಾಗಿದ್ದು, 2014ರ ಜನವರಿ 1ರಿಂದ ಈ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುವುದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಸ್.ಎಂ. ಗೋರಬಾಳ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಬ್ಯಾಂಕ್ ಖಾತೆ ಅಗತ್ಯ: ಎಲ್‌ಪಿಜಿ ಗ್ಯಾಸ್ ಸಂಪರ್ಕ ಹೊಂದಿರುವ ಜಿಲ್ಲೆಯ ಗ್ರಾಹಕರು ಆಧಾರ್ ಸಂಖ್ಯೆಯನ್ನು ಜೋಡಣೆ (ಸಿಡ್)  ಮಾಡಿದ ರಾಷ್ಟ್ರೀಕೃತ ವಾಣಿಜ್ಯ ಅಥವಾ ಗ್ರಾಮೀಣ ಬ್ಯಾಂಕ್ ಉಳಿತಾಯ ಖಾತೆಗಳನ್ನು ಹೊಂದುವುದು ಅಗತ್ಯವಾಗಿದೆ. ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕಿನ ಉಳಿತಾಯ ಖಾತೆಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಿಸಬೇಕು.ಇಲ್ಲಿಯವರೆಗೆ ಬ್ಯಾಂಕ್ ಖಾತೆಗಳನ್ನು ಹೊಂದಿರದ ಗ್ರಾಹಕರು ತಮ್ಮ ಸೇವಾ ಕ್ಷೇತ್ರದ ಬ್ಯಾಂಕ್ ಶಾಖೆಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆದು ಆಧಾರ್ ಸಂಖ್ಯೆಯನ್ನು  ಖಾತೆಗೆ ಜೋಡಣೆ ಮಾಡಿಸಬೇಕು.ಖಾತೆಗೆ ನೇರ ಜಮಾ: ಎಲ್‌ಪಿಜಿ ಸಹಾಯ ಧನದ ನೇರ ವರ್ಗಾವಣೆ ಯೋಜನೆ ಅಡಿ ಎಲ್‌ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಪ್ರತಿ ಅಡುಗೆ ಅನಿಲ ಸಿಲಿಂಡರ್‌ಗೆ ಸಿಗುವ ಸರ್ಕಾರದ ಸಹಾಯಧನವನ್ನು ಅವರ ಆಧಾರ್ ಸಂಖ್ಯೆಯ ಜೋಡಣೆ (ಸಿಡ್) ಮಾಡಿದ ಬ್ಯಾಂಕಿನ ಉಳಿತಾಯ ಖಾತೆಗೆ ನೇರ ಜಮಾ ಮಾಡಲಾಗುವುದು.ಮಾಹಿತಿ ನೀಡಿ: ಎಲ್ಲಾ ಎಲ್‌ಪಿಜಿ ಗ್ರಾಹಕರು ತಮ್ಮ ಗ್ಯಾಸ್ ಕಂಪನಿ/ ಏಜೆನ್ಸಿಗಳಿಗೆ ತಾವು ಉಳಿತಾಯ ಖಾತೆ ಹೊಂದಿದ ಬ್ಯಾಂಕಿನ ಹೆಸರು, ಶಾಖೆ, ಉಳಿತಾಯ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಆಧಾರ್ ನೋಂದಣಿ ಸಂಖ್ಯೆ ಮತ್ತು ತಮ್ಮ ದೂರವಾಣಿ ಸಂಖ್ಯೆಗಳ  ಮಾಹಿತಿಯನ್ನು ಕೂಡಲೇ ನೀಡಿ, ಕೇಂದ್ರ ಸರ್ಕಾರದ ಈ ಯೋಜನೆಯ ಸಮರ್ಪಕ ಜಾರಿಗೆ  ನೆರವಾಗಬೇಕು.ಸದರಿ   ಮಾಹಿತಿಯನ್ನು ಒದಗಿಸದಿದ್ದರೆ ಗ್ರಾಹಕರಿಗೆ ದೊರೆಯಬೇಕಾದ ಅಡುಗೆ ಅನಿಲ ಸಿಲಿಂಡರಿನ ಸಹಾಯಧನ ದೊರೆಯುವುದಿಲ್ಲ. ಎಲ್‌ಪಿಜಿ ಗ್ರಾಹಕರು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆಯಲು ಅಥವಾ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಯಾವುದೇ ಸಮಸ್ಯೆ ಉಂಟಾದರೆ ಮೊಬೈಲ್ ದೂರವಾಣಿ ಸಂಖ್ಯೆ 94498- 60601 ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು.ಈ ನಿಟ್ಟಿನಲ್ಲಿ ಗ್ರಾಹಕರು/ ಏಜೆನ್ಸಿಗಳು ಬ್ಯಾಂಕ್‌ಗಳಿಗೆ ಅಗತ್ಯ ಮಾಹಿತಿ ನೀಡಿ ಜಿಲ್ಲಾ ಲೀಡ್ ಬ್ಯಾಂಕಿನೊಂದಿಗೆ ಸಹಕರಿಸಬೇಕು ಅವರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry