ಶನಿವಾರ, ಏಪ್ರಿಲ್ 17, 2021
30 °C

ಜನವರಿ ಒಳಗೆ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಏಳು ಮಹಾನಗರ ಪಾಲಿಕೆಗಳು ಸೇರಿದಂತೆ ಸದ್ಯದಲ್ಲೇ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 210 ನಗರ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್- ಜನವರಿಯಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.ಆದರೆ, ಸರ್ಕಾರ ಇದುವರೆಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಆಯೋಗಕ್ಕೆ ನೀಡದೆ ಇರುವುದರಿಂದ ಚುನಾವಣೆ ಮುಂದೂಡಿಕೆ ಆಗಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಆಡಳಿತಾರೂಢ ಬಿಜೆಪಿಯಲ್ಲಿನ ಗೊಂದಲ ನಿವಾರಣೆಯಾಗದೆ ಇರುವುದರಿಂದ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ.ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ನೀಡುವಂತೆ ಒಂದು ತಿಂಗಳ ಹಿಂದೆಯೇ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಮೀಸಲಾತಿ ಪಟ್ಟಿ ಈವರೆಗೆ ಸಿದ್ಧವಾಗಿಲ್ಲ. ಅಲ್ಲದೆ ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಯೂ ಆಗಿಲ್ಲ.ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ. ಆದರೆ, ಮೀಸಲಾತಿ ಪಟ್ಟಿ ಸಿದ್ಧಪಡಿಸಿ, ನೀಡುವಂತೆ ಸರ್ಕಾರ ಈವರೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿಲ್ಲ. ನಿಗದಿತ ಸಮಯಕ್ಕೆ ಚುನಾವಣೆ ನಡೆಯುವುದು ಸರ್ಕಾರಕ್ಕೆ ಬೇಕಿಲ್ಲ. ಹೀಗಾಗಿಯೇ ವಿಳಂಬ ಮಾಡುತ್ತಿದೆ ಎನ್ನಲಾಗಿದೆ.ಮೈಸೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗುಲ್ಬರ್ಗ, ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆಗಳು, 44 ನಗರಸಭೆ, 94 ಪುರಸಭೆ, 65 ಪಟ್ಟಣ ಪಂಚಾಯಿತಿ ಸೇರಿದಂತೆ 210 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಫೆಬ್ರುವರಿ - ಮಾರ್ಚ್‌ನಲ್ಲಿ ಮುಗಿಯಲಿದೆ.ಈ ಸಂಸ್ಥೆಗಳ ಚುನಾವಣೆಗಾಗಿ ಅಗತ್ಯವಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಯೋಗವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ಲದೆ ಹೆಚ್ಚುವರಿಯಾಗಿ ಬೇಕಾಗುವ 12 ಸಾವಿರ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪೂರೈಕೆ ಮಾಡುವಂತೆ ಬಿಇಎಲ್‌ಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಡಿ.ಕೆ.ರವೀಂದ್ರನಾಥ್ ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಮೀಸಲಾತಿ ಪಟ್ಟಿ ಸಿದ್ಧಪಡಿಸುವುದು ಸರ್ಕಾರದ ಕೆಲಸ. ಈ ವಿಷಯದಲ್ಲಿ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲ. ಸರ್ಕಾರ ನೀಡುವ ಪಟ್ಟಿಗೆ ಅನುಗುಣವಾಗಿ ಚುನಾವಣೆ ನಡೆಸುವುದಷ್ಟೇ ನಮ್ಮ ಜವಾಬ್ದಾರಿ. ಮೀಸಲಾತಿ ಪಟ್ಟಿ ಬಂದ ನಂತರವೇ ವೇಳಾಪಟ್ಟಿ ಪ್ರಕಟಿಸಲು ಸಾಧ್ಯ~ ಎಂದು ಹೇಳಿದರು.`ಚುನಾವಣಾ ಕಾರ್ಯಕ್ಕೆ ಅಗತ್ಯವಿರುವ ನಮೂನೆಗಳು, ಲಕೋಟೆಗಳ ಮುದ್ರಣ ಕಾರ್ಯ ಆರಂಭವಾಗಿದೆ. ಕೈಪಿಡಿಯೂ ಸಿದ್ಧವಾಗಿದೆ. ಚುನಾವಣೆಗೆ ಅಗತ್ಯವಿರುವ ಮತಗಟ್ಟೆಗಳ ಸ್ಥಾಪನೆ, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಒಟ್ಟಾರೆ ಆಯೋಗದ ಕಡೆಯಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಅವರು ಹೇಳಿದರು.ಫೆಬ್ರುವರಿ - ಮಾರ್ಚ್‌ನಲ್ಲಿ ಅವಧಿ ಮುಗಿಯುವುದರಿಂದ ಇನ್ನೂ ಸಮಯವಿದೆ. ಮೀಸಲಾತಿ ಪಟ್ಟಿ ತಯಾರಿಸಲು ಸಿದ್ಧತೆ ನಡೆದಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ ತಿಳಿಸಿದರು. ಚುನಾವಣೆ ಮುಂದಕ್ಕೆ ಹಾಕುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಇದುವರೆಗೆ ಚರ್ಚೆಯಾಗಿಲ್ಲ. ಸರ್ಕಾರ ರಾಜಕೀಯವಾಗಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೊ ಗೊತ್ತಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗಿದೆ. ಈ ಚುನಾವಣೆಯ ಫಲಿತಾಂಶ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಭೀತಿಯಿಂದ ಪಕ್ಷದಲ್ಲಿನ ಗೊಂದಲ ಬಗೆಹರಿಯುವವರೆಗೂ ಚುನಾವಣೆಗೆ ಹೋಗುವುದು ಬೇಡ ಎಂದು ಬಿಜೆಪಿಯ ಕೆಲವರು, ಪಕ್ಷದ ಹಿರಿಯ ಮುಖಂಡರಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.