ಮಂಗಳವಾರ, ಅಕ್ಟೋಬರ್ 15, 2019
29 °C

ಜನವರಿ 30ರಿಂದ ಜಂಟಿ ಅಧಿವೇಶನ?

Published:
Updated:

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಸಂಘರ್ಷದ ನಡುವೆಯೇ ಮಾಸಾಂತ್ಯದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸುವ ಕಸರತ್ತಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕೈ ಹಾಕಿದ್ದಾರೆ. ಜನವರಿ 30ರಿಂದಲೇ ಅಧಿವೇಶನ ಆರಂಭವಾಗುವ ಸುಳಿವನ್ನು ಅವರು ನೀಡಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲು ತಮ್ಮ ಆಪ್ತ ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಸದಾನಂದಗೌಡ ಅವರು ವಿಧಾನಮಂಡಲ ಅಧಿವೇಶನದ ದಿನಾಂಕ ಪ್ರಕಟಿಸಿರುವುದು ಕುತೂಹಲ ಕೆರಳಿಸಿದೆ.ಶನಿವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸದಾನಂದ ಗೌಡ, ವಿಧಾನ ಮಂಡಲದ ಅಧಿವೇಶನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದರು. ಇದಾದ ಮಾರನೇ ದಿನವೇ ಜನವರಿ 30ರಿಂದ ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ಉದ್ದೇಶಿಸಲಾಗಿದ್ದು, ಜನವರಿ ಮೂರರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ತಮ್ಮ ಅಧಿಕೃತ ನಿವಾಸ `ಅನುಗ್ರಹ~ದಲ್ಲಿ ಭಾನುವಾರ ರಾಜಕೀಯ ಮುಖಂಡರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸದಾನಂದ ಗೌಡ, ಸಂಪ್ರದಾಯದಂತೆ ವರ್ಷದ ಆರಂಭದಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಇದೇ 30ರಿಂದ ಆರಂಭವಾಗುವ ಅಧಿವೇಶನ ಫೆಬ್ರುವರಿ ಮೊದಲ ವಾರದವರೆಗೂ ನಡೆಯಲಿದೆ ಎಂದರು.ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ. ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿ, ನಿರ್ಣಯ ಕೈಗೊಳ್ಳಲಾಗುವುದು. ಬಜೆಟ್ ಅಧಿವೇಶನದ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.ಸಂಕ್ರಾಂತಿ ನಂತರ ಆಡಳಿತಾರೂಢ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತಷ್ಟು ಜೋರಾಗಲಿದೆ. ಶತಾಯ-ಗತಾಯ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹಟ ಹಿಡಿದಿರುವ ಯಡಿಯೂರಪ್ಪ ರಾಜಕೀಯವಾಗಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳತ್ತಾರೆ ಎಂಬ ಬಿಸಿ ಬಿಸಿ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. ಹೀಗಾಗಿ ಸಹಜವಾಗಿಯೇ ಈ ಬಾರಿಯ ಅಧಿವೇಶನ ಮಹತ್ವಪಡೆದುಕೊಂಡಿದೆ.ಕುಟುಂಬ ಕಲಹ: ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನಡುವಿನ ಸಂಘರ್ಷವನ್ನು `ಕೌಟುಂಬಿಕ ಕಲಹ~ ಎಂದು ವ್ಯಾಖ್ಯಾನಿಸಿರುವ ಮುಖ್ಯಮಂತ್ರಿ, ಪಕ್ಷದ ಒಳಗಡೆಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಜಟಾಪಟಿ ಮನೆಯೊಳಗಿನ ಜಗಳವಿದ್ದಂತೆ. ಅದನ್ನು ಪಕ್ಷದ ನಾಯಕರೇ ಸರಿಪಡಿಸಲಿದ್ದಾರೆ ಎಂದರು.`ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ನಿಜ. ಆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ. ಪಕ್ಷ ಕುಟುಂಬವಿದ್ದಂತೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಕುಟುಂಬದ ಒಳಗೆ ಬಗೆಹರಿಸಿಕೊಳ್ಳುತ್ತೇವೆ~ ಎಂದು ತಿಳಿಸಿದರು.`ಪಕ್ಷದ ವಿಚಾರದಲ್ಲಿ ನೀವು ತಲೆ ಕೆಡಿಸಿಕೊಳ್ಳಬೇಡಿ. ಪಕ್ಷದೊಳಗಿನ ಸಮಸ್ಯೆಗಳನ್ನು ಪರಿಹರಿಸುವುದನ್ನು ನಮಗೆ ಬಿಡಿ. ಆದರೆ, ಜನತೆ ಸರ್ಕಾರದ ಮೇಲೆ ವಿಶ್ವಾಸವಿಡುವಂತೆ ಆಡಳಿತ ನಡೆಸಿ ಎಂದು ಪಕ್ಷದ ವರಿಷ್ಠರು ನನಗೆ ಸೂಚನೆ ನೀಡಿದ್ದಾರೆ.ಅದರಂತೆ ನಾನು ನಡೆದುಕೊಳ್ಳುತ್ತೇನೆ. ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆಡಳಿತದ ಕಡೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಮನೆಯ ಜಗಳವನ್ನು ಯಾರೂ ಬೀದಿಗೆ ತರುವುದಿಲ್ಲ. ಆ ಬಗ್ಗೆ ಹೊರಗೆ ಚರ್ಚೆ ನಡೆಸುವ ಅಗತ್ಯವೂ ಇಲ್ಲ. ಪಕ್ಷದೊಳಗಿನಿಂದಲೇ ಎಲ್ಲವೂ ಸುಖಾಂತ್ಯವಾಗಲಿದೆ~ ಎಂದರು.ಯಡಿಯೂರಪ್ಪ ಅವರು ಬಿಜೆಪಿ ತ್ಯಜಿಸುವ ಸಾಧ್ಯತೆ ಕುರಿತು ಪ್ರಶ್ನಿಸಿದಾಗ, `ಯಡಿಯೂರಪ್ಪ ಅವರು ಬಿಜೆಪಿಯ ಶಿಸ್ತಿನ ಸಿಪಾಯಿ. ಅವರು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿಯಲ್ಲ. ಯಡಿಯೂರಪ್ಪ ಅವರು ಬಿಜೆಪಿಯನ್ನು ತ್ಯಜಿಸುವುದೂ ಇಲ್ಲ, ಹೊಸ ಪಕ್ಷವನ್ನೂ ಕಟ್ಟುವುದಿಲ್ಲ. ಈ ಬಗ್ಗೆ ಅನುಮಾನಕ್ಕೆ ಅವಕಾಶ ಬೇಡ~ ಎಂದು ಸದಾನಂದ ಗೌಡ ಉತ್ತರಿಸಿದರು.

Post Comments (+)