ಗುರುವಾರ , ಮೇ 6, 2021
31 °C
ತಾಂತ್ರಿಕ ದೋಷದತ್ತ ಬೊಟ್ಟು ಮಾಡಿದ ಗುತ್ತಿಗೆದಾರ!

ಜನವಸತಿಯತ್ತ ವಾಲಿದ ತಡೆಗೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಪಟ್ಟಣದ ಎಸ್ಸಿ-ಎಸ್ಟಿ ಹಾಸ್ಟೆಲ್ ರಸ್ತೆ ಬದಿ ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಸಿಮೆಂಟ್ ಕಾಂಕ್ರೀಟ್ ತಡೆಗೋಡೆ, ಜನವಸತಿ ಪ್ರದೇಶದತ್ತ ಅಪಾಯಕಾರಿ ರೀತಿಯಲ್ಲಿ ವಾಲಿಕೊಂಡಿದೆ. ತಡೆಗೋಡೆ ವಾಲಿರುವುದಕ್ಕೆ ಕಾಮಗಾರಿ ಎಂಜಿನಿಯರ್ ತಾಂತ್ರಿಕ ದೋಷಗಳೇ ಕಾರಣ ಎಂದು ಗುತ್ತಿಗೆದಾರರು ಪುರಸಭೆ ಎಂಜಿನಿಯರ್ ವಿರುದ್ಧವೇ ಆರೋಪಿಸಿದ್ದಾರೆ.ಪಟ್ಟಣದ ಗಿಬ್ ಹೈಸ್ಕೂಲ್ ರಸ್ತೆಯಿಂದ ತಿರುಗಿ ಎಸ್ಸಿ, ಎಸ್ಟಿ ಹಾಸ್ಟೆಲ್ ರಸ್ತೆಗೆ ಪ್ರವೇಶಿಸುವಲ್ಲಿ ಎತ್ತರದಲ್ಲಿರುವ ರಸ್ತೆಯ ಭಾಗ ಕೆಳಗಿರುವ ಜನವಸತಿ ಪ್ರದೇಶದತ್ತ ಕುಸಿಯಬಾರದು ಎನ್ನುವ ಉದ್ದೇಶದಿಂದ ಪುರಸಭೆ ವತಿಯಿಂದ ಸುಮಾರು 3 ಲಕ್ಷ ರೂಪಾಯಿ ವೆಚ್ಚದಲ್ಲಿ  ಸದ್ಯ ಕೆಳಭಾಗದಿಂದ ಸಿಮೆಂಟ್ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಮಳೆಯಿಂದಾಗಿ ರಸ್ತೆಯ ಮಣ್ಣು ಕುಸಿದು ಸಿಮೆಂಟ್ ತಡೆಗೋಡೆಯ ಮೇಲೆ ಒತ್ತಡ ಹೆಚ್ಚಿದಾಗ ಕುಸಿತ ತಡೆಯುವ ಸಿಮೆಂಟ್ ತಡೆಗೋಡೆಯೇ ಜನವಸತಿ ಪ್ರದೇಶದತ್ತ ವಾಲಿದ್ದು, ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಅವರು ಕಾಮಗಾರಿ ಗುತ್ತಿಗೆದಾರ ಗೋಪಾಲ ನಾಯ್ಕ ಎನ್ನುವವರಿಗೆ ನೊಟೀಸು ನೀಡಿ, `ನೀವು ಸದ್ಯವೇ ನಿರ್ಮಿಸಿದ್ದ ತಡೆಗೋಡೆ ಬಾಗಿದ್ದು, ಕೆಳಭಾಗದಲ್ಲಿರುವ ಜನವಸತಿ ಪದೇಶದತ್ತ ಬಿದ್ದು ಪ್ರಾಣ ಹಾನಿಯಾಗುವ ಸಂಭವವಿದೆ.ಪುರಸಭೆಯ ಕಿರಿಯ ಎಂಜಿನಿಯರ್ ಸಮ್ಮುಖದಲ್ಲಿ ನಿಮ್ಮ ಸ್ವಂತ ಖರ್ಚಿನಿಂದ ತಡೆಗೋಡೆಯ ಮೆಲ್ಭಾಗದಿಂದ ಎರಡು ಮೀಟರ್ ಕೆಳಭಾಗವನ್ನು ಜಾಗರೂಕತೆಯಿಂದ ಕೂಡಲೇ ಕತ್ತರಿಸಿ ತೆಗೆಯತಕ್ಕದ್ದು. ಹೀಗೆ ಮಾಡುವಾಗ ಯಾವುದೇ ರೀತಿಯ ಹಾನಿಯಾದರೆ ಅದಕ್ಕೆ ಪುರಸಭೆ  ಜವಾಬ್ದಾರವಲ್ಲ. ಮುಂದೆ ಮಳೆಗಾಲ ಮುಗಿದ ತಕ್ಷಣ  ಪುರಸಭೆ ಮಾರ್ಗದರ್ಶನದಂತೆ ನಿಮ್ಮ ಸ್ವಂತ ಖರ್ಚಿನಲ್ಲಿ ಈ ಭಾಗಕ್ಕೆ ಇಳಿಜಾರು ಕಾಂಕ್ರೀಟು ಅಥವಾ ಪಿಚಿಂಗ್ ನಿರ್ಮಿಸಿಕೊಡತಕ್ಕದ್ದು.ಇದಕ್ಕೆ ತಪ್ಪಿದ್ದಲ್ಲಿ ಪುರಸಭೆ ಆಡಳಿತಾಧಿಕಾರಿಗಳೂ ಆಗಿರುವ  ಉಪವಿಭಾಗಾಧಿಕಾರಿ ಅವರ ನಿರ್ಣಯದಂತೆ ನಿಮ್ಮ ಗುತ್ತಿಗೆದಾರ ಲೈಸೆನ್ಸ್ ರದ್ದುಪಡಿಸಿ, ನಿಮ್ಮ ಹೆಸರು  ಕಪ್ಪು ಪಟ್ಟಿಯಲ್ಲಿ ಸೇರಿಸಿ,  ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗವುದು' ಎಂದು ಎಚ್ಚರಿಕೆ ನೀಡಿದ್ದಾರೆ.ಗುತ್ತಿಗೆದರನ ಪ್ರತಿಕ್ರಿಯೆ: ಅದಕ್ಕೆ ಪ್ರತಿಯಾಗಿ ಗುತ್ತಿಗೆದಾರ ಗೋಪಾಲ ನಾಯ್ಕ ಅವರು ನೋಟಿಸ್‌ಗೆ ಉತ್ತರಿಸಿದ್ದು ಹೀಗೆ- `ಪುರಸಭೆಯಿಂದ ತಡೆಗೋಡೆ ಕಾಮಗಾರಿ ಟೆಂಡರ್ ಪಡೆದ ನಾನು ಪುರಸಭೆ ಕಿರಿಯ ಎಂಜಿನಿಯರ್ ಅವರು ಸೂಚಿಸಿದ ಸ್ಥಳದಲ್ಲಿ, ಅವರ ಮಾರ್ಗದರ್ಶನದಂತೆ, ಅವರ ಸಮ್ಮುಖದ್ಲ್ಲಲಿಯೇ ಪ್ರತಿಯೊಂದು ಹಂತದ ಕಾಮಗಾರಿ ನಿರ್ವಹಿಸಿದ್ದೇನೆ.ಕಾಮಗಾರಿ ಮುಗಿದ ನಂತರ ಅದರ ಗುಣಮಟ್ಟದ ಬಗ್ಗೆ ಗುಣಮಟ್ಟ ಮಂಡಳಿಯಿಂದ ದೃಢೀಕರಣ ಪತ್ರ ನೀಡಲಾಗಿದೆ. ಪುರಸಭೆ ಕಿರಿಯ ಎಂಜಿನಿಯರ್ ಅವರ ಶಿಫಾರಸಿನಂತೆ ನನ್ನ ಕಾಮಗಾರಿ ಬಿಲ್ ಸಹ ಪಾವತಿ ಮಾಡಲಾಗಿದೆ.ಹೀಗಿರುವಾಗ ಕಾಮಗಾರಿ ಕಳಪೆ ಎಂದಾದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಎದುರು ಕಮಗಾರಿ ಪರಿಶೀಲನೆ ನಡೆಸಬಹುದಾಗಿದೆ. ಕಾಮಗಾರಿ ಸಂದರ್ಭದಲ್ಲಿ ನನ್ನ ಸಲಹಾ  ಎಂಜಿನಿಯರ್ ಅವರು ತಡೆಗೋಡೆ ಎತ್ತರ, ದಪ್ಪಕ್ಕೆ ಅನುಗುಣವಾಗಿ ಅಡಿಪಾಯ ಇನ್ನಷ್ಟು ಭದ್ರವಾಗಬೇಕು ಎಂದು ಪುರಸಭೆ  ಎಂಜಿನಿಯರ್ ಅವರೊಂದಿಗೆ ಚರ್ಚಿಸಿ ಸಲಹೆ ನೀಡಿದ್ದು ಇರುತ್ತದೆ. ಆದರೆ ಪುರಸಭೆ  ಎಂಜಿನಿಯರ್ ಅವರು ಅದನ್ನು ತಿರಸ್ಕರಿಸಿ, ತಾವು ಸೂಚಿಸಿದ ತಾಂತ್ರಿಕ ಸಲಹೆಯಂತೆ ಕಾಮಗಾರಿ ನಿರ್ವಹಿಸಲು ನನಗೆ ಸೂಚಿಸಿದರು.ಅದರಂತೆ ನಾನು ಕಾಮಗಾರಿ ನಿರ್ವಹಿಸಿದ್ದೇನೆ. ಕಾಮಗಾರಿ ಗುಣಮಟ್ಟದಲ್ಲಿ ದೋಷ ಇದ್ದಿದ್ದರೆ ತಡೆಗೋಡೆ ಎಲ್ಲಿಯಾದರೂ ಬಿರುಕು ಬಿಡುತ್ತಿತ್ತು. ಆದರೆ ಹಾಗಾಗದೆ, ಇಡೀ ತಡೆಗೋಡೆಯೇ ಒಂದು ಬದಿ ವಾಲಿದೆ. ಎಂಜಿನಿಯರ್ ಅವರ ತಾಂತ್ರಿಕ  ವೈಫಲ್ಯವನ್ನುಕಾಮಗಾರಿಯ ಗುಣಮಟ್ಟದ ಮೇಲೆ ಹೇರುವುದು ವೈಜ್ಞಾನಿಕವಾಗಿ ಸಮ್ಮತವಲ್ಲ.  ಕಾಮಗಾರಿ  ದುರಸ್ತಿ ವೆಚ್ಚವನ್ನು ಪುರಸಭೆ ಭರಿಸುವುದಾದರೆ ಸಾರ್ವಜನಿಕರ ಹಿತದೃಷ್ಟಿಯಿಂದ ನಾನು ದುರಸ್ತಿ ಕಾಮಗಾರಿ ನಿರ್ವಹಿಸಬಹುದಾಗಿದೆ'.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.