ಶನಿವಾರ, ಮೇ 21, 2022
28 °C

ಜನವಾಡದಲ್ಲಿ ಆದರ್ಶ ವಿದ್ಯಾಲಯ : ಬೀದರ್‌ನಲ್ಲಿ ತರಗತಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಮಂಜೂರಾದದ್ದು ಜನವಾಡಕ್ಕೆ, ತರಗತಿಗಳು ಬೀದರ್‌ನಲ್ಲಿ... ಬೀದರ್ ತಾಲ್ಲೂಕಿನ ಜನವಾಡ ಪಟ್ಟಣದ ಆದರ್ಶ ವಿದ್ಯಾಲಯದ ಸ್ಥಿತಿ ಇದು.ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರ್ಕಾರ 11ನೇ ಪಂಚವಾರ್ಷಿಕ ಯೋಜನೆಯಡಿ 2011 ರಲ್ಲಿ ದೇಶಾದ್ಯಂತ ಆಂಗ್ಲಮಾಧ್ಯಮ ಆದರ್ಶ ವಿದ್ಯಾಲಯಗಳನ್ನು ಆರಂಭಿಸಿದೆ.ರಾಜ್ಯದಲ್ಲಿ 74 ಮತ್ತು ಬೀದರ್ ಜಿಲ್ಲೆಯಲ್ಲಿ ನಾಲ್ಕು ಆದರ್ಶ ವಿದ್ಯಾಲಯಗಳಿವೆ. ಬೀದರ್ ತಾಲ್ಲೂಕಿನ ಜನವಾಡ, ಹುಮನಾಬಾದ್ ತಾಲ್ಲೂಕಿನ ಬೇಮಳಖೇಡ, ಔರಾದ್ ಪಟ್ಟಣ ಮತ್ತು ಬಸವಕಲ್ಯಾಣ ತಾಲ್ಲೂಕಿನ ರಾಜೋಳಾ ಗ್ರಾಮಗಳಲ್ಲಿ ಆದರ್ಶ ವಿದ್ಯಾಲಯಗಳನ್ನು ತೆರೆಯಲಾಗಿದೆ.ಮೂರು ವರ್ಷಗಳ ಹಿಂದೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿ ಜನವಾಡ ಪಟ್ಟಣಕ್ಕೆ ಆದರ್ಶ ವಿದ್ಯಾಲಯ ಮಂಜೂರು ಮಾಡಲಾಗಿದೆ. ಜನವಾಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಇದರ ಸ್ಥಾಪನೆಯ ಉದ್ದೇಶ.

ಆದರೆ, ಕಳೆದ ಮೂರು ವರ್ಷಗಳಿಂದ ಜನವಾಡದಲ್ಲಿ ವಿದ್ಯಾಲಯಕ್ಕೆ ನಿವೇಶನವೇ ದೊರೆತಿಲ್ಲ.

 

ಹೀಗಾಗಿ ಅನಿವಾರ್ಯವಾಗಿ ತರಗತಿಗಳನ್ನು ಬೀದರ್‌ನಲ್ಲಿ ನಡೆಸಲಾಗುತ್ತಿದೆ. ಇದರಿಂದಾಗಿ ಜನವಾಡ, ಮರಕಲ್, ಕೌಠಾ(ಬಿ) ಸೇರಿದಂತೆ ಬೀದರ್ ಹಾಗೂ ಔರಾದ್ ತಾಲ್ಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾಲಯಕ್ಕಾಗಿ ಬೀದರ್‌ನತ್ತಲೇ ಮುಖ ಮಾಡಬೇಕಾಗಿದೆ ಎಂದು ಹೇಳುತ್ತಾರೆ ಪಾಲಕರು. ಆದರ್ಶ ವಿದ್ಯಾಲಯದಲ್ಲಿ 6 ರಿಂದ 10ನೇ ತರಗತಿವರೆಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಐದನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ. ಜನವಾಡದಲ್ಲಿ ವಿದ್ಯಾಲಯಕ್ಕಾಗಿ ಏನಿಲ್ಲವೆಂದರೂ 12 ಕೋಣೆಗಳು ಬೇಕು. ನಿವೇಶನ ದೊರೆತರೆ ಕಟ್ಟಡ ನಿರ್ಮಾಣ ಆಗಬಹುದು. ಆದರೆ, ಈವರೆಗೆ ನಿವೇಶನವನ್ನೇ ಕಲ್ಲಿಸಲಾಗಿಲ್ಲ ಎಂದು ದೂರುತ್ತಾರೆ ನಾಗರಿಕರು.ಪಟ್ಟಣದ ಹೊರವಲಯದ ಪಶು ಆಸ್ಪತ್ರೆಯ ಸಮೀಪ ಕಟ್ಟಡಕ್ಕಾಗಿ ಮೂರು ಎಕರೆ ಜಾಗ ಗುರುತಿಸಲಾಗಿದೆ. ಈಗಾಗಲೇ ತಹಸೀಲ್ದಾರರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತವೂ ಅದನ್ನು ಸರ್ಕಾರಕ್ಕೆ ರವಾನಿಸಿದೆ. ಆದರ್ಶ ವಿದ್ಯಾಲಯ ಕೇಂದ್ರ ಪುರಸ್ಕೃತ ಯೋಜನೆ ಆಗಿದೆ. ಇದರಲ್ಲಿ ಕೇಂದ್ರದ ಶೇ. 75 ಹಾಗೂ ರಾಜ್ಯ ಸರ್ಕಾರದ ಶೇ. 25 ರಷ್ಟು ಪಾಲಿದೆ. ಹೀಗಾಗಿ ಭೂಮಿ ಉಚಿತವಾಗಿ ಕೊಡಬಹುದೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

 

ಸದ್ಯ ಬೀದರ್‌ನ ಜನವಾಡ ರಸ್ತೆಯಲ್ಲಿ ಇರುವ ಹಳೆಯ ಸರ್ಕಾರಿ ಡಿ.ಎಡ್. ಕಾಲೇಜು ಕಟ್ಟಡದಲ್ಲಿ ಆದರ್ಶ ವಿದ್ಯಾಲಯದ ಪಾಠ ಪ್ರವಚನಗಳು ನಡೆಯುತ್ತಿವೆ. ಪ್ರಸ್ತುತ ಸಾಲಿನಲ್ಲಿ ಈಗಾಗಲೇ 43ಕ್ಕೂ ಅಧಿಕ ಮಕ್ಕಳು ಪ್ರವೇಶ ಪಡೆದಿದ್ದು, ಇನ್ನೂ ಪ್ರವೇಶ ಪ್ರಕ್ರಿಯೆ ಜಾರಿಯಲ್ಲಿದೆ. ಪಟ್ಟಣಕ್ಕೆ ಮಂಜೂರಾಗಿರುವ ವಿದ್ಯಾಲಯದ ತರಗತಿಗಳು ಬೀದರ್‌ನಲ್ಲಿ ನಡೆಯುವಂತಾಗಿರುವುದು ದುರದೃಷ್ಟಕರ.ಪಟ್ಟಣದಲ್ಲಿ ಕೂಡಲೇ ವಿದ್ಯಾಲಯಕ್ಕೆ ನಿವೇಶನ ಮಂಜೂರು ಮಾಡಿ ಕಟ್ಟಡ ನಿರ್ಮಿಸಬೇಕು. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಜನವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನೀತಾ ಶ್ರೀನಿವಾಸ್ ಖರಾತ್ ಎಚ್ಚರಿಸುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.