ಮಂಗಳವಾರ, ನವೆಂಬರ್ 12, 2019
28 °C

`ಜನವಿರೋಧಿ ಪಕ್ಷ ದೂರ ಇರಿಸಿ'

Published:
Updated:

ರಾಯಚೂರು:  ರಾಜ್ಯ ವಿಧಾನಸಭೆ ಚುನಾವಣೆಗೆ 11 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಯುಸಿಐ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜನ ವಿರೋಧಿಯಾಗಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಸೋಲಿಸಿ ಜನರ ಆಗು ಹೋಗುಗಳಿಗೆ ಸ್ಪಂದಿಸುವ ಮತ್ತು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳ ವಿರುದ್ಧವಾಗಿರುವ ಅಭ್ಯರ್ಥಿಗಳನ್ನು ರಾಜ್ಯದ ಮತದಾರರು ಚುನಾಯಿಸಬೇಕು ಎಂದು ಎಸ್‌ಯುಸಿಐ ಕರ್ನಾಟಕ ರಾಜ್ಯ ಸವಿತಿ ಸದಸ್ಯ ಮಂಜುನಾಥ ಬಿ.ಆರ್ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕು. ಜನ ಸಮಸ್ಯೆ ಪರಿಹಾರಕ್ಕೆ ಐಕ್ಯ ಹೋರಾಟ ರೂಪಿಸುವುದು ಸಂಘಟನೆ ಉದ್ದೇಶ. ಸಂಘಟನೆಗೆ ಈ ಚುನಾವಣೆ ಎಂಬುದು ಹೋರಾಟದ ಭಾಗವಾಗಿದೆಯಷ್ಟೇ. ಜನಪರ ಹೋರಾಟ ಸಂಘಟನೆ ಮೂಲವಾಗಿದೆ ಎಂದು ಹೇಳಿದರು.ಎಸ್‌ಯುಸಿಐ ಸಂಘಟನೆ ಅಭ್ಯರ್ಥಿಗಳು ಮಾತ್ರವೇ ಹೋರಾಟದಲ್ಲಿ ಹದಗೊಂಡು ಬಂದವರಾಗಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವವರಾಗಿದ್ದಾರೆ. ಒಂದು ವೇಳೆ ಎಸ್‌ಯುಸಿಐ ಅಭ್ಯರ್ಥಿಗಳು ಗೆದ್ದು ಬಂದರೆ ಜನತೆಯ ಸಮಸ್ಯೆಗಳನ್ನು ಸದನದಲ್ಲಿ ಎತ್ತುತ್ತಾರೆ. ಹೊರಗಿನ ಚಳವಳಿ ಬಲಪಡಿಸುತ್ತಾರೆ ಎಂಬ ಆಶ್ವಾಸನೆ ನೀಡುವುದಾಗಿ ತಿಳಿಸಿದರು.ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಘಟನೆಯ ನಾಯಕಿ ಅಪರ್ಣಾ ಬಿ.ಆರ್, ಬಿಜಾಪುರ ವಿಧಾನಸಭಾ ಕ್ಷೇತ್ರಕ್ಕೆ ಎಚ್.ಟಿ ಮಲ್ಲಿಕಾರ್ಜುನ, ಗುಲ್ಬರ್ಗ ಗ್ರಾಮೀಣ ಕ್ಷೇತ್ರಕ್ಕೆ ನಿಂಗಣ್ಣ, ಗುಲ್ಬರ್ಗ ದಕ್ಷಿಣ ಕ್ಷೇತ್ರಕ್ಕೆ ವಿ ನಾಗಮ್ಮಾಳ್, ಬಳ್ಳಾರಿ ನಗರ ಕ್ಷೇತ್ರಕ್ಕೆ ಡಿ ನಾಗಲಕ್ಷ್ಮೀ, ಬಳ್ಳಾರಿ ಗ್ರಾಮೀಣ  ಕ್ಷೇತ್ರಕ್ಕೆ ಎ ದೇವದಾಸ್, ಬಸವನಗುಡಿ ಕ್ಷೇತ್ರಕ್ಕೆ ಎನ್ ರವಿ, ರಾಜಾಜಿನಗರಕ್ಕೆ ಬಿ.ಎಸ್ ಪ್ರತಿಭಾಕುಮಾರಿ, ಮಲ್ಲೇಶ್ವರಂ ಕ್ಷೇತ್ರಕ್ಕೆ ಎಂ.ಎಸ್ ಪ್ರಕಾಶ್, ಧಾರವಾಡ ಕ್ಷೇತ್ರಕ್ಕೆ ಎಚ್.ಜಿ ದೇಸಾಯಿ, ಚಾಮರಾಜನಗರಕ್ಕೆ ಎಂ ಉಮಾದೇವಿ ಅವರು ಸ್ಪರ್ಧಿಸಲಿದ್ದಾರೆ ಎಂದು ವಿವರಿಸಿದರು.ಐದು ವರ್ಷದ ಆಡಳಿತ ಅವಧಿಯಲ್ಲಿ ಬಿಜೆಪಿಯು ಜನತೆ ನಿರೀಕ್ಷೆ ಹುಸಿಗೊಳಿಸಿತು.ರೈತರ ಪರಿಸ್ಥಿತಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳೂ ಬಿಕ್ಕಟ್ಟಿಗೆ ಸಿಲುಕಿವೆ.    ಭಾರಿ ಸಂಖ್ಯೆಯ ಉದ್ಯೋಗ ಸೃಷ್ಟಿಯ ಹೇಳಿಕೆ ನೀಡುತ್ತ ಕೋಟ್ಯಾಂತರ ಹಣ ದುಂದುವೆಚ್ಚ ಮಾಡಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿತು. ಆದರೆ ವಾಸ್ತವದಲ್ಲಿ ಉದ್ಯೋಗಗಳು ಸೃಷ್ಟಿಗೊಳ್ಳಲಿಲ್ಲ. ಅಲ್ಲದೇ 1.5 ಲಕ್ಷ ಎಕರೆ ಭೂಮಿಯನ್ನು ವಿಶೇಷ ಆರ್ಥಿಕ ವಲಯಕ್ಕೆ ವಶಪಡಿಸಿಕೊಂಡು ರೈತ ಕುಟುಂಬಗಳನ್ನು ಬೀದಿಪಾಲು ಮಾಡಿದೆ ಎಂದು ಆರೋಪಿಸಿದರು.ನೇಮಕಾತಿಯನ್ನೇ  ಕೈ ಬಿಡಲಾಗಿದೆ. ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ, ಕುಡಿಯುವ ನೀರು ಪೂರೈಕೆ, ಇತ್ಯಾದಿ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಕಟಿಬದ್ಧವಾಗಿ ನಿಂತಿದೆ.  ಶೈಕ್ಷಣಿಕ ಕ್ಷೇತ್ರದ ಸಮಸ್ಯೆ ಉಲ್ಬಣಗೊಂಡಿವೆ. ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ಕೇವಲ ಹಣವುಳ್ಳವರಿಗೆ ಶಿಕ್ಷಣ ಎಂಬಂತಾಗಿದೆ. ಆಡಳಿತಾರೂಢ ಬಿಜೆಪಿ ಜನ ವಿರೋಧಿ ನಿಲುವಿನಿಂದ ಜನತೆಯ ಜೀವನ ಎಲ್ಲಾ ರಂಗಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚುನಾಯಿತ ಪ್ರತಿನಿಧಿಗಳು ಪರಸ್ಪರ ಟೀಕೆ, ಆರೋಪದಲ್ಲಿಯೇ ಕಾಲ ಹರಣ ಮಾಡಿದ್ದಾರೆ ಎಂದು ಹೇಳಿದರು.ಆಡಳಿತರೂಢ ಬಿಜೆಪಿ ಒಳಜಗಳ, ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಜವಾಬ್ದಾರಿ ನಿಭಾಯಿಸಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಬಂಡವಾಳಶಾಹಿಪರ ಕೆಲಸ ಮಾಡುತ್ತಿದೆ. ಅಡುಗೆ ಅನಿಲ, ಡಿಸೇಲ್, ಪೆಟ್ರೊಲ್ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಮಧ್ಯಮ ವರ್ಗದ ಹಿತ ಕಡೆಗಣಿಸಿದೆ ಎಂದು ದೂರಿದರು.ತಾನು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಪಕ್ಷ ಪ್ರಾದೇಶಿಕ ಹಿತಾಸಕ್ತಿ ಬಿಂಬಿಸುವುದಾಗಿ ಬಣ್ಣಿಸಿಕೊಳ್ಳುತ್ತ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಈ ಪಕ್ಷವೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ ಎಂದು ಹೇಳಿದರು.ಎಲ್ಲ ಪಕ್ಷಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ. ಜಾತಿವಾದ, ಸ್ವಜನಪಕ್ಷಪಾತ, ಬಂಡವಾಳಶಾಹಿ ವರ್ಗದ ಏಜೆಂಟನಂತೆ ಕಾರ್ಯ ನಿರ್ವಹಿಸುತ್ತಿವೆ. ಜನತೆ ಎಸ್‌ಯುಸಿಐ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. ಅಪರ್ಣಾ ಬಿ.ಆರ್, ಟಿ.ಎಸ್ ಸುನಿತ್‌ಕುಮಾರ್, ಎನ್.ಎಸ್ ವಿರೇಶ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)