ಜನಸಂಪರ್ಕ ಸಭೆ ಇರುವುದು ಜನರ ಹಿತಕ್ಕೆ

7

ಜನಸಂಪರ್ಕ ಸಭೆ ಇರುವುದು ಜನರ ಹಿತಕ್ಕೆ

Published:
Updated:

ಹನುಮಸಾಗರ: ಪ್ರತಿ ಪಂಚಾಯಿತಿ ಹಂತದಲ್ಲಿ ನಡೆಯುವ ಜನಸಂಪರ್ಕ ಸಭೆಯ ಉದ್ದೇಶ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಸ್ಪಂದನೆ ಸಿಗಲಿ ಎಂಬುದು, ಅಧಿಕಾರಿಗಳೆ ಸಭೆಗೆ ಗೈರು ಹಾಜರಾದರೆ ಸಮಸ್ಯೆಗೆ ಪರಿಹಾರ ಸಿಗುವುದು ಹೇಗೆ, ಇದೇ ರೀತಿ ಗೈರು ಹಾಜರಿ ಮುಂದುವರೆದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಶನಿವಾರ ಸಮೀಪದ ರಾಂಪೂರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಜನಸಂಪರ್ಕದ ಸಭೆಯಲ್ಲಿ ತಾಲ್ಲೂಕ ಮಟ್ಟದ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಖುದ್ದಾಗಿ ಹಾಜರಿರುವಂತೆ ಹೇಳುತ್ತ ಬಂದರೂ ಇದೂವರೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ತರಾಟೆ ತೆಗೆದುಕೊಂಡರು. ಕೆಲ ಅಧಿಕಾರಿಗಳು ತಮ್ಮ ಸಹಾಯಕರನ್ನು ಕಳಿಸುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತದೆ, ಏನಾದರೂ ಸಮಸ್ಯೆ ಎದುರಾದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ರಾಂಪೂರ ಗ್ರಾಮ ತಾಲ್ಲೂಕಿನಂದ ದೂರವಿರುವ ಸಣ್ಣ ಗ್ರಾಮವಾಗಿದ್ದು ಕುಡಿಯುವ ನೀರು ಸೇರಿದಂತೆ ವಿದ್ಯುತ್, ರಸ್ತೆಯಂತಹ ಮೂಲಭೂತ ಸೌಲಭ್ಯಗಳಿಂದ ಇಲ್ಲಿನ ಜನರು ವಂಚಿತರಾಗಿರುವುದು ನಿಮ್ಮ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಕಡುಬಡವರಿಗೆ ನೀಡುವ ಬಿಪಿಎಲ್ ಕಾರ್ಡುಗಳು ಸರಿಯಾಗಿ ಹಂಚಿಕೆಯಾಗದೇ ಇರುವುದು, ಪಡಿತರ ಧಾನ್ಯ ಸರಿಯಾಗಿ ವಿತರಣೆಯಾಗದಿರುವುದು, ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆದು ಎಷ್ಟೋ ದಿನಗಳಾಗಿದ್ದರೂ ಪೈಪ್ ಲೈನ್ ಹಾಗೂ ವಿದ್ಯುತ್ ಸಂಪರ್ಕ ಇಲ್ಲಿಯವರೆಗೆ ಕಲ್ಪಿಸದೇ ಇರುವುದು, ಇಲ್ಲಿನ ಹತ್ತಾರು ಭೂಹಿಡುವಳಿದಾರರು 30 ವರ್ಷಗಳಿಂದಲೂ ಆಕ್ರಮ ಸಕ್ರಮದಲ್ಲಿ ವ್ಯವಸಾಯ ಮಾಡುತ್ತಿದ್ದು ಅವರಿಗೆ ಹಕ್ಕುಪತ್ರ ನೀಡಲು ಸರ್ಕಾರದಿಂದ ಆದೇಶ ಬಂದಿದ್ದರೂ ಇದುವರೆಗೂ ಹಂಚಿಕೆ ಮಾಡದಿರುವುದು, ಹರಿಜನ ಸಮುದಾಯ ಭವನ, ದೇವದಾಸಿಯರಿಗೆ ವಿವಿಧ ಸೌಲಭ್ಯ, ರಸ್ತೆ ಸುಧಾರಣೆ ಕುರಿತು ಗ್ರಾಮಸ್ಥರು ಸಮಸ್ಯೆಗಳ ಪಟ್ಟಿಯನ್ನೇ ಶಾಸಕರ ಗಮನಕ್ಕೆ ತಂದರು.ಇದಕ್ಕೆ ಸ್ಪಂದನೆ ನೀಡಿದ ಶಾಸಕರು ಎಷ್ಟೇ ಹೊತ್ತಾದರೂ ಪರ್ವಾಯಿಲ್ಲ ಇಂದೆ ರೈತರಿಗೆ ಹಕ್ಕುಪತ್ರ ನೀಡಿರಿ ಎಂದು ಪಟ್ಟುಹಿಡಿದದ್ದು ಕಂಡುಬಂದಿತು. ಇದೇ ಸಂದರ್ಭದಲ್ಲಿ ನಾಲ್ಕಾರು ಜನರಿಗೆ ಸಂಧ್ಯಾಸುರಕ್ಷಾ ಕಾರ್ಡ ವಿತರಿಸಲಾಯಿತು. ತಸೀಲ್ದಾರ ವಿರೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry