ಭಾನುವಾರ, ಏಪ್ರಿಲ್ 11, 2021
29 °C

ಜನಸಾಗರದ ನಡುವೆ ಕವ್ವಾಲಿ ಕೀ ಶಾಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ರಮ್ಜಾನ್ ಹಬ್ಬ ಆಚರಣೆಯ ಮರುದಿನವಾದ ಮಂಗಳವಾರ ಸಹಸ್ರಾರು ಮುಸ್ಲಿಂ ಬಾಂಧವರು ಇಲ್ಲಿಯ ಇಂದಿರಾ ಗಾಜಿನ ಮನೆಯ ಬಯಲು ರಂಗಮಂದಿರದಲ್ಲಿ ಕವ್ವಾಲಿಗಳನ್ನು ಕೇಳಿ ಆನಂದಿಸಿದರು.

ಡಾ. ಗಂಗೂಬಾಯಿ ಮ್ಯೂಸಿಕ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವ್ವಾಲಿ ಕಲಾವಿದರಾದ  ರೆಹಮಾನ್ ಜಾವೇದ್ ಮತ್ತು ಮೆಹಬೂಬ ಪರ್ವೇಜ್ ಅವರು ನೆರೆದಿದ್ದ ಜನರಿಗೆ ಮನರಂಜನೆ ನೀಡಿದರು.`ಅಲ್ಲಾ ತೇರಿ ಯಾದ್ ಆತಿ ಹೈ.....~  ಎಂಬ ಕವ್ವಾಲಿ ಹಾಡುವುದರೊಂದಿಗೆ  ರೆಹಮಾನ್ ಜಾವೇದ್ ಕಾರ್ಯಕ್ರಮ ಆರಂಭಿಸಿದರು. ಪ್ರತಿಯೊಂದು ಕವ್ವಾಲಿಗೂ ಯುವಕರು ಸೀಟಿ ಹೊಡೆಯುತ್ತಿದ್ದರು. ಮಕ್ಕಳು ನೃತ್ಯ ಮಾಡುತ್ತ್ದ್ದಿದರೆ, ಮಹಿಳೆಯರು ಚಪ್ಪಾಳೆ ಹೊಡೆಯುತ್ತಿದ್ದರು. ಕವ್ವಾಲಿಯ ಮಧ್ಯೆ ತಾಳಕ್ಕೆ ತಕ್ಕ ಹಾಗೆ ಕಲಾವಿದರು ಆಡುತ್ತಿದ್ದ ಮಾತುಗಳನ್ನು ನಿಶ್ಯಬ್ದದಿಂದ ಆಲಿಸುತ್ತಿದ್ದ ಜನ ಕವ್ವಾಲಿ ಆರಂಭವಾದೊಡನೆ `ಮಾಷಾ ಅಲ್ಲಾಹ್~ ಎಂದು ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು.ಪ್ರತಿಯೊಂದು ಕವ್ವಾಲಿಯಲ್ಲೂ ಮೊದಲ ಸಾಲು ಹಾಡಿದರೆ ಸಾಕು, ಜನರೇ ದನಿಗೂಡಿಸಿ ಕವ್ವಾಲಿ ಆರಂಭಿಸುತ್ತಿದ್ದರು. ಜನರ ಉತ್ಸಾಹ ಕಂಡ ಕಲಾವಿದರು ಹಾಡಿದ ಸಾಲುಗಳನ್ನು ಮತ್ತೆ ಮತ್ತೆ ಹಾಡುತ್ತಿದ್ದರು. ಈ ಕಾರ್ಯಕ್ರಮ ಸಾವಿರಾರು ಮುಸ್ಲಿಂ ಬಾಂಧವರನ್ನು ಒಂದೆಡೆಗೆ ಸೇರಿಸಿತ್ತು. ಎಲ್ಲರೂ ಅಪ್ಪಿಕೊಂಡು `ಈದ್ ಮುಬಾರಕ್~ ಎಂದು ಶುಭಾಶಯ ಹಂಚಿಕೊಳ್ಳುತ್ತಿದ್ದರು. ಕುಟುಂಬ ಸಮೇತರಾಗಿ ಬಂದಿದ್ದ ಜನರು ಜೊತೆಯಲ್ಲಿ ತಂದಿದ್ದ ತಿಂಡಿ-ತಿನಿಸುಗಳನ್ನು ಹಂಚಿ ತಿಂದು, ಕವ್ವಾಲಿಗಳನ್ನು ಅನುಭವಿಸಿದರು.ಕಾರ್ಯಕ್ರಮದಲ್ಲಿ ಗಂಗೂಬಾಯಿ ಮ್ಯೂಸಿಕ್ ಫೌಂಡೇಶನ್ ಅಧ್ಯಕ್ಷ ಮನೋಜ್ ಹಾನಗಲ್, ಧಾರವಾಡ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಅಸುಂಡಿ, ವೆಂಕಟೇಶ್ ಸವದತ್ತಿ ಮುಂತಾದವರು ಹಾಜರಿದ್ದರು.ನೋಟಿನ ಸುರಿಮಳೆ....

ಮೆಹಬೂಬ್ ಪರ್ವೇಜ್ ಅವರ ಕವ್ವಾಲಿಗೆ ಢೋಲಕ್ ಬಾರಿಸುತ್ತಿದ್ದ ಕಲಾವಿದ ಮೊಹಮ್ಮದ್ ಜಾಫರ್ ಅವರ ಮೇಲೆ ಜನರು ನೋಟುಗಳ ಮಳೆ ಸುರಿಸಿದರು. ಢೋಲಕ್ ತಾಳದ ಜೊತೆ ಜನರ ಚಪ್ಪಾಳೆ ಬೆರೆತು ಹೋಗಿದ್ದವು. ಹರ್ಷಚಿತ್ತರಾದ ಯುವಕರು ಅವರ ಮೇಲೆ ನೋಟುಗಳ ಮಳೆಯನ್ನೇ ಸುರಿಸಿದರು.ಯುವಕನೊಬ್ಬ ನೂರಾರು ನೋಟುಗಳನ್ನು ಒಂದೇ ಬಾರಿಗೆ ಅವರ ಮೇಲೆ ಮಳೆಗರೆದ. ಇದರಿಂದ ಉತ್ತೇಜಿತರಾದ ಇತರ ಯುವಕರೂ ನೋಟುಗಳನ್ನು ಅವರ ಮೇಲೆ ಸುರಿಯುತ್ತಿದ್ದರು. ಮಕ್ಕಳು ಕೂಡ ಇತರ ಕಲಾವಿದರಿಗೆ ದುಡ್ಡು ತಂದು ಕೊಡುತ್ತಿದ್ದುದು ಗಮನ ಸೆಳೆಯಿತು. ಕೆಲವರು ನೋಟನ್ನು ಕೈಗೆ ಕೊಟ್ಟು ಅವರಿಂದ ಆಶೀರ್ವಾದ ಪಡೆಯುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.