ಜನಸಾಗರದ ನಡುವೆ ಕೃಷ್ಣನ ನಾಡಲ್ಲಿ ಉಕ್ಕಿತು ನಗೆಗಡಲು...

7

ಜನಸಾಗರದ ನಡುವೆ ಕೃಷ್ಣನ ನಾಡಲ್ಲಿ ಉಕ್ಕಿತು ನಗೆಗಡಲು...

Published:
Updated:

ಉಡುಪಿ: ರಾಧೆಯ ಗೆದ್ದನು ಆಗೊಲ್ಲ

        ರುಕ್ಮಿಣಿಯ ಕದ್ದನು ಆಗೊಲ್ಲ

        ಹದಿನಾರು ಸಾವಿರ ಹೆಂಡಂದಿರ

        ಸಂಭಾಳಿಸಿದ ಆಗೊಲ್ಲ ಈಗಿನವರಿಗೆ 

        ಒಬ್ಬರನ್ನು  ಸುಧಾರಿಸಲು ಆಗಲ್ಲ,  

        ಆಗೊಲ್ಲ, ಆಗೊಲ್ಲ...

   *ನದಿದಾಟಲು ತೆಪ್ಪವಿರಬೇಕು

        ಸಂಸಾರ ದಾಟಲು ತೆಪ್ಪಗಿರಬೇಕು

   *ವಿಘ್ನೇಶ್ವರ ಬುದ್ಧಿವಂತ ಯಾಕೆ?

           ಆತ ಮದುವೆಯಾಗಿಲ್ಲ ಅದಕ್ಕೆ.

   * ನಮ್ಮ ಮನೆಯಲ್ಲಿ ಮಿಕ್ಸರ್ ಇಲ್ಲ,

        ಗ್ರೈಂಡರ್ ಇಲ್ಲ, ವಾಷಿಂಗ್ ಮೆಷಿನ್ 

        ಇಲ್ಲ  ಎಂದೆಲ್ಲ ಗೊಣಗುವುದಿಲ್ಲ

       ಯಾಕೆಂದರೆ ನಾನಿದ್ದೀನಲ್ಲ

   *ರೋಗಿ ಕೈ ನರ್ಸ್ ಹಿಡಿದರೆ ಅದು 

           ಚೆಕ್‌ಅಪ್, ನರ್ಸ್ ಕೈ ರೋಗಿ      

           ಹಿಡಿದರೆ ಅದು ಪಿಕ್‌ಅಪ್

ಇವೆಲ್ಲ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಬಳಗ ಭಾನುವಾರ ಸಂಜೆ ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ‘ನಗೆ ಹಬ್ಬ’ ಕಾರ್ಯಕ್ರಮದಲ್ಲಿ ಕೇಳಿಬಂದ ಒಂದಿಷ್ಟು ನಗೆ ತುಣುಕುಗಳು.ಇಳಿಸಂಜೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ ಹಾಸ್ಯ ಸಾಹಿತಿಗಳ ಮಾತಿಗೆ ನಗೆಗಡಲಲ್ಲಿ ಮುಳುಗಿತು. ಕೆಲಕಾಲ ಬದುಕಿನ ಎಲ್ಲ ಜಂಜಡಗಳನ್ನು ಮೈಮರೆತ ರಸಿಕರು ಹಾಸ್ಯದ ರಸದೌತಣ ಸವಿದರು.ಹಾಸ್ಯ ಕಾರ್ಯಕ್ರಮ ಆರಂಭಿಸಿದ ಎಂ.ಎಸ್.ನರಸಿಂಹ ಮೂರ್ತಿ, ಉಡುಪಿಯಲ್ಲಿ ಹಾಸ್ಯ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಸಾಗರ ಸೇರಿದ್ದು ಕಂಡು ಇಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆಯೇನೋ ಎಂದು ಖುಷಿಯಾಗುತ್ತಿದೆ ಎಂದರು.ಹಾಸ್ಯವನ್ನು ಸಂದರ್ಭಾನುಸಾರ ಬಳಸಬೇಕು, ಯಾವುದೇ ಕಷ್ಟಕರ ಸನ್ನಿವೇಶದಲ್ಲಿ ಕೂಡ ಹಾಸ್ಯಪ್ರಜ್ಞೆ ನಮ್ಮಲ್ಲಿದ್ದರೆ ಆ ಪರಿಸ್ಥಿತಿ ನಿಭಾಯಿಸಿಕೊಂಡು ಹೋಗಬಹುದು ಎಂದು ಹೇಳಿ ಹಲವು ಹಾಸ್ಯ ಪ್ರಸಂಗಗಳನ್ನು ಸ್ಮರಿಸಿಕೊಂಡರು. ನಂತರ ಮಾತನಾಡಿದ ರಿಚರ್ಡ್ ಲೂಯಿಸ್ ಸಾಕಷ್ಟು ನಗೆ ತುಣುಕುಗಳನ್ನು, ಹಾಸ್ಯ ಪ್ರಸಂಗಗಳನ್ನು ಹೇಳಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ನಗೆಯುಕ್ಕಿಸಿದರು.ಹಳೆಕಾಲದ ಮತ್ತು ಇಂದಿನ ಚಿತ್ರಗೀತೆಗಳನ್ನು ರಸವತ್ತಾಗಿ ಹಾಡಿ, ಕುಣಿದು ಮೈಸೂರು ಆನಂದ್ ರಂಜಿಸಿದರು.ಕವಿ ಡುಂಡಿರಾಜ್ ಹನಿಗವನಗೊಳೊಂದಿಗೆ ನಗೆಯುಕ್ಕಿಸಿದರು. ಹಾಸ್ಯದಲ್ಲಿ ಪಂಚ್ ಬಹಳ ಅಗತ್ಯ. ಪಂಚ್ ಮತ್ತು ಪಂಚೆ ಎರಡೂ ವೇದಿಕೆಯಲ್ಲಿ ನಿಂತಾಗ ಬಹಳ ಅಗತ್ಯ ಎಂದು ಮಾರ್ಮಿಕವಾಗಿ ಹೇಳಿ ಎಂದಿನಂತೆ ನೆರೆದವರಲ್ಲಿ ನಗೆಯುಕ್ಕಿಸಿದರು. ಇನ್ನು ಬೆಳಗಾವಿಯ ರವಿ ಭಜಂತ್ರಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಹಾಸ್ಯವನ್ನು ಹೇಳಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿದರು. ಇತರರನ್ನು ನೋಡಿ ನಗುವ ನೀನು ನಿನ್ನನ್ನೇ ನೋಡಿಕೊಂಡು ನಗು, ನೀನು ಖುಷಿಯಾಗಿದ್ದರೆ ಮಾತ್ರ ಇನ್ನೊಬ್ಬರನ್ನು ಖುಷಿಯಾಗಿಡಲು ಸಾಧ್ಯ ಎನ್ನುವ ಅರ್ಥಗರ್ಭಿತ ಸಾಲುಗಳು ಹಾಸ್ಯದ ನಡುವೆಯೇ ಅವರಿಂದ ಕೇಳಿ ಬಂದವು.ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಬಳಗದ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್‌ಕುಮಾರ್, ಡೆಕ್ಕನ್ ಹೆರಾಲ್ಡ್ ಸಹಾಯಕ ಸಂಪಾದಕ ಕೆ.ಸುಬ್ರಹ್ಮಣ್ಯ, ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ ಎಸ್. ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry