ಭಾನುವಾರ, ಏಪ್ರಿಲ್ 18, 2021
31 °C

ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೇಳೆ ಕಾಳುಗಳ ಬೆಲೆ ದಿಢೀರ ಏರಿಕೆ ಆಗಿದ್ದರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ.ಕಳೆದ ಒಂದು ತಿಂಗಳ ಅವಧಿಯಲ್ಲಿ ಬೇಳೆ ಕಾಳುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಆಗಿದೆ. ಹೀಗಾಗಿ ಜನ ಬೆಲೆ ಕೇಳಿಯೇ ಬೆಚ್ಚಿ ಬೀಳುವಂತಾಗಿದೆ.ತೊಗರಿ ಬೇಳೆ, ಉದ್ದಿನ ಬೇಳೆ, ಚಣಗಿ ಬೇಳೆ, ಕಡಲೆ ಬೇಳೆ, ಹೆಸರು ಮತ್ತಿತರ ಬೇಳೆ ಕಾಳುಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿದೆ.ತಿಂಗಳ ಹಿಂದೆ ರೂ. 50ಕ್ಕೆ ಕೆ.ಜಿ. ಆಗಿದ್ದ ಉದ್ದಿನ ಬೇಳೆಯ ಬೆಲೆ ಈಗ ರೂ. 70 ಆಗಿದೆ. ಚಣಗಿ ಬೇಳೆ ರೂ. 40 ರಿಂದ 50ಕ್ಕೆ ಜಿಗಿದಿದೆ. ರೂ. 58 ಆಗಿದ್ದ ತೊಗರಿ ಬೇಳೆ ರೂ. 72 ರ ಆಸುಪಾಸಿನಲ್ಲಿದೆ. ಕಡಲೆ ಬೇಳೆ ರೂ. 40 ರಿಂದ ದ್ವಿಗುಣಕ್ಕೆ ಸಮ ಅಂದರೆ ರೂ. 70 ರಿಂದ 75 ಆಗಿದೆ. ಹೆಸರು ಬೇಳೆಯೂ ಇದಕ್ಕೆ ಹೊರತಾಗಿ   ಉಳಿದಿಲ್ಲ.ಇನ್ನು ಅಕ್ಕಿ, ಗೋಧಿ, ಸಿಹಿ ಎಣ್ಣೆ, ಸಕ್ಕರೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ದರದಲ್ಲಿಯೂ ಭಾರಿ ಏರಿಕೆ ಆಗಿದ್ದರಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ನಾಗರಿಕರಾದ ಬಸವರಾಜ ಎಸ್.

ಕೆಲ ತಿಂಗಳ ಹಿಂದೆ ರೂ. 1,900 ಕ್ಕೆ ಕ್ವಿಂಟಲ್ ಆಗಿದ್ದ ಗೋಧಿ ಬೆಲೆ ಇದೀಗ ಕ್ವಿಂಟಲ್‌ಗೆ ರೂ. 2100 ರಿಂದ ರೂ. 2,300 ಆಗಿದೆ. ರೂ. 2800 ರಿಂದ ರೂ. 3,200 ಆಗಿದ್ದ  ಕ್ವಿಂಟಲ್ ಗುಣಮಟ್ಟದ ಅಕ್ಕಿ ಬೆಲೆ ರೂ. 3,800 ರಿಂದ ರೂ. 4,000 ಆಗಿದೆ ಎಂದು ಹೇಳುತ್ತಾರೆ.ಇದೀಗ ಒಂದಾದ ಮೇಲೊಂದರಂತೆ ಹಬ್ಬಗಳು ಬರುತ್ತಿವೆ. ಎಲ್ಲ ಬೆಲೆಗಳು ತುಟ್ಟಿ, ಕೈಗೆಟುಕದಂಥವು ಅನ್ನಿಸಿದರೂ ಸಾಲು ಸೂಲ ಮಾಡಿ ಖರೀದಿಸಿ ಆಚರಿಸದೇ ವಿಧಿಯಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಬರದಿಂದಾಗಿ ಹೈರಾಣಾಗಿರುವ ಜಿಲ್ಲೆಯ ಜನ ಈಗ ಬೆಲೆ ಏರಿಕೆಯ ಹೊಡೆತದಿಂದ ಕಂಗಾಲಾಗುವಂತಾಗಿದೆ ಎನ್ನುತ್ತಾರೆ ಶಿವಕುಮಾರ ಬಿ.ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ಆಹಾರ ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇತ್ತು. ಆದರೆ, ದಿನೇ ದಿನೇ ಬೆಲೆ ಗಗನಮುಖಿ ಆಗುತ್ತಲೇ ಇರುವುದು ಬಡವರನ್ನು ಆತಂಕಕ್ಕೀಡು ಮಾಡಿದೆ ಎಂದು ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.