ಜನಸೇವಕದ ಜೀವಾಳವಾಗಿದ್ದ ಗೌರೀಶ

7

ಜನಸೇವಕದ ಜೀವಾಳವಾಗಿದ್ದ ಗೌರೀಶ

Published:
Updated:
ಜನಸೇವಕದ ಜೀವಾಳವಾಗಿದ್ದ ಗೌರೀಶ

ಗೋಕರ್ಣಕ್ಕೆ ಸಾಹಿತ್ಯ ಆಸಕ್ತರು ಯಾರೇ ಹೋದರೂ ಮೊದಲು ಗೌರೀಶ ಕಾಯ್ಕಿಣಿ ಅವರನ್ನು ಭೇಟಿಯಾಗುತ್ತಿದ್ದರೂ ನಂತರ ಮಹಾಬಳೇಶ್ವರನ ದರ್ಶನ ಪಡೆಯುತ್ತಿದ್ದರು. ಇಂಥ ಗೌರೀಶರಿಗೆ ಸ್ನೇಹಿತರೆಲ್ಲ `ಅಭಿನವ ಸಾಕ್ರೆಟಿಸ್~ ಎಂದೇ ಆರಾಧಿಸುತ್ತಿದ್ದೆವು. ಅವರ ಲೇಖನ ವ್ಯವಸಾಯ ಹರಟೆಯಿಂದ ಹಿಡಿದು ಗೆರಟೆಯವರೆಗೂ ವ್ಯಾಪಿಸಿತ್ತು. ತತ್ವಜ್ಞಾನದಿಂದ ಹಿಡಿದು ಪಾಕಜ್ಞಾನದವರೆಗೂ ವ್ಯಾಪಿಸಿತ್ತು.ನಾಡಿನ ಉದ್ದಗಲಕ್ಕೂ ಅಂದಿನ ಪತ್ರಿಕೆಗಳು ಅವರಿಂದ ಕೋರಿ ಪಡೆದ ಲೇಖನಗಳನ್ನು ಪ್ರಕಟಿಸುತ್ತಿದ್ದವು. ಆ ಕಾಲದಲ್ಲಿ ತಾವು ಬರೆಯಿಸಿಕೊಂಡ ಲೇಖನಗಳಿಗೆ ಸಂಭಾವನೆ ನೀಡುವ ಶಕ್ತಿ ಕೆಲವೇ ಪತ್ರಿಕೆಗಳಿಗೆ ಇತ್ತು. ಶಕ್ತಿ ಇದ್ದಂಥವು ಕೂಡ ಅವರಿಂದ ಲೇಖನಗಳನ್ನು ತರಿಸಿಕೊಂಡು ಸಂಭಾವನೆ ನೀಡದೆ ಪ್ರಕಟಿಸುತ್ತಿದ್ದವು. ಈ ಮಾತಿಗೆ ಅಪವಾದವೆಂಬಂತೆ ಅಂಕೋಲೆಯಿಂದ ಡಾ.ದಿನಕರ ದೇಸಾಯಿ ತಮ್ಮ ಕೆನರಾ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಪ್ರಕಟಿಸುತ್ತಿದ್ದ `ಜನಸೇವಕ~ ಪತ್ರಿಕೆ ಮೂಲಕ ಗೌರೀಶರ ಲೇಖನ-ಶ್ರಮಕ್ಕೆ ಪ್ರತಿ ತಿಂಗಳು ಸಂಭಾವನೆ ನೀಡುತ್ತಿದ್ದರು. ಜನಸೇವಕ ಪತ್ರಿಕೆಯನ್ನು ದಿನಕರ ದೇಸಾಯಿ ತಮ್ಮ ಹುಟ್ಟೂರಾದ ಅಂಕೋಲೆಯಿಮದ ಪ್ರಕಟಿಸುತ್ತಿದ್ದರು. ಈ ಪತ್ರಿಕೆಗೆ ಗೌರೀಶ ಕಾಯ್ಕಿಣಿಯವರು 1957ರ ಏಪ್ರಿಲ್‌ನಿಂದ ಕೊನೆಯ ಸಂಚಿಕೆಯವರೆಗೂ ಅದರ ಜೀವಾಳವಾಗಿದ್ದರು. ಪ್ರತಿ ವಾರ ಒಂದು ವಿಶೇಷ ಲೇಖನ ಅಲ್ಲದೇ `ಅಡಿಗೆ ಭಟ್ಟ~ರಾಗಿ ವಾರದ ಉಪ್ಪಿನಕಾಯಿ ಬಡಿಸುತ್ತಿದ್ದರು. ಸುದ್ದಿಗೆ ಗುದ್ದು ಕೊಡುವ ಈ ವಿಭಾಗ ಅವರ ಹರಿತ ಲೆಕ್ಕಣಿಕೆಗೆ ತನ್ನ ಕ್ಷೇತ್ರ ಒದಗಿಸಿತು. ಅವರ ಸಾಹಿತ್ಯ ದರ್ಪಣ ವಿಸ್ತೃತ ಪುಸ್ತಕ ವಿಮರ್ಶಾ ವಿಭಾಗವಾಗಿತ್ತು.ಜನಸೇವಕ ಬಳಗದೊಂದಿಗೆ ಲೇಖನ ಬರೆಯುವುದರ ಮೂಲಕ ಬೆರೆತುಕೊಂಡಿದ್ದ ಪ್ರತಿಭೆಗಳಲ್ಲಿ ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಸುಂದರ ನಾಡಕರ್ಣಿ, ವಿಷ್ಣು ನಾಯ್ಕ ಮೊದಲಾದವರಿಗೆ ಗೌರೀಶ ಕಾಯ್ಕಿಣಿ ದಾರಿದೀಪದಂತೆ ಇದ್ದರು. ಎಷ್ಟೇ ಆದರೂ ಅವರು ಶಿಕ್ಷಕರು. ಹೀಗಾಗಿ ಸಾಹಿತ್ಯದ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದರು. ಆರಂಭದಲ್ಲಿ ಬಂಕಿಕೊಡ್ಲದ ಆನಂದಾಶ್ರಮದ ಹೈಸ್ಕೂಲ್ ನಂತರ ಗೋಕರ್ಣದ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತಿಯಾಗುವವರೆಗೆ ದುಡಿದರು.1947-52ರ ಅವಧಿಯಲ್ಲಿ ಡಿ.ವಿ. ಚಿತ್ತಾಲ, ಎಸ್.ಆರ್. ಬೊಮ್ಮಾಯಿ, ಶ್ರೀನಿವಾಸ ಹಾವನೂರ, ಮ.ಗ. ಶೆಟ್ಟಿ ಮೊದಲಾದವರೆಲ್ಲ ಸೇರಿ ಗೌರೀಶ ಕಾಯ್ಕಿಣಿ ಸಂಪಾದಕತ್ವದಲ್ಲಿ `ಬೆಳಕು~ ಎಂಬ ಸಾಪ್ತಾಹಿಕವನ್ನು ಗೋಕರ್ಣದಿಂದ ಪ್ರಕಟಿಸಿದರು. ಇದರೊಂದಿಗೆ ವಿ. ಸೀತಾರಾಮಯ್ಯ ಅಧ್ಯಕ್ಷತೆಯಲ್ಲಿ ಕುಮಟಾದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಗೌರೀಶ ಕಾಯ್ಕಿಣಿ ಮತ್ತು ಸಂಗಡಿಗರಿಂದ ಸಂಘಟಿತವಾಗಿತ್ತು.

ಹೀಗೆ ಉತ್ತರ ಕನ್ನಡದಲ್ಲಿ ಅಲ್ಲದೇ ರಾಜ್ಯದಾದ್ಯಂತ ತಮ್ಮ ಸಾಹಿತ್ಯ ಪ್ರಭಾವದಿಂದ ಅನೇಕರನ್ನು ಬೆಳೆಸಿದರು. ಜೊತೆಗೆ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಅಸಂಖ್ಯರ ಮೇಲೆ ಪ್ರಭಾವ ಬೀರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry