ಜನಸ್ನೇಹಿಯಾದ ರಾಷ್ಟ್ರಪತಿ ಭವನ

7
ಪಾಳಿ ಬದಲಾವಣೆ ಕವಾಯತು ವೀಕ್ಷಣೆಗೆ ಅವಕಾಶ

ಜನಸ್ನೇಹಿಯಾದ ರಾಷ್ಟ್ರಪತಿ ಭವನ

Published:
Updated:
ಜನಸ್ನೇಹಿಯಾದ ರಾಷ್ಟ್ರಪತಿ ಭವನ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಭವನ ಇನ್ನು ಮುಂದೆ ಜನಸ್ನೇಹಿಯಾಗಲಿದೆ. ಪ್ರತಿ ಶನಿವಾರ ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆಯುವ ಆಕರ್ಷಕ ಪಾಳಿ ಬದಲಾವಣೆ ಕವಾಯತು ವೀಕ್ಷಿಸಲು 200 ಜನರಿಗೆ ಅವಕಾಶ ಕಲ್ಪಿಸುವಂತೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಮುಂದಾಗಿದ್ದಾರೆ.ಪ್ರತಿ ಶನಿವಾರ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸರಣಿ ಸೇನಾ ಕಾರ್ಯಕ್ರಮಗಳು ಜರುಗುತ್ತವೆ. ಆ ದಿನ ಅಶ್ವಪಡೆಯಿಂದ ಆಕರ್ಷಕ ಪಾಳಿ ಬದಲಾವಣೆ ಕವಾಯತು ನಡೆಯುತ್ತದೆ. ರಾಷ್ಟ್ರಪತಿಯವರ ಅಂಗರಕ್ಷಕರು ಶಿಸ್ತಿನಿಂದ ಸಾಲಿನಲ್ಲಿ ಅಲಂಕರಿಸಿದ ಕುದುರೆಗಳ ಮೇಲೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಬ್ಯಾಂಡ್ ಮತ್ತು ಕಹಳೆ ಮೊಳಗಿಸಲಾಗುತ್ತದೆ. ಮದ್ರಾಸ್ ರೆಜಿಮೆಂಟ್‌ಗೆ ಸೇರಿದ ಆಯ್ದ ಯೋಧರಿಂದ ನಡೆಯುವ ಈ ಕವಾಯತು ನೋಡುವುದೇ ಕಣ್ಣಿಗೆ ಬಲು ಸೊಗಸು. ರಾಷ್ಟ್ರಪತಿಯವರ ಮನೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಇದನ್ನು ನಡೆಸಲು ತೀರ್ಮಾನಿಸಲಾಗಿದೆ. ಈವರೆಗೆ ಇದನ್ನು ಉತ್ತರ ಬ್ಲಾಕ್‌ನಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು.`ಆಕರ್ಷಕ ಪಾಳಿ ಬದಲಾವಣೆ ಕವಾಯತು ನೋಡುವುದರ ಮೇಲಿದ್ದ ಎಲ್ಲ ರೀತಿಯ ನಿರ್ಬಂಧವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಪ್ರತಿ ಶನಿವಾರ 200 ಜನರಿಗೆ ಕವಾಯತು ನೋಡಲು ಅವಕಾಶ ನೀಡಲಾಗುವುದು. ರಾಷ್ಟ್ರಪತಿ ಭವನ ಸಾರ್ವಜನಿಕರಿಗೆ ಮುಕ್ತಗೊಳಿಸಲು ಪ್ರಣವ್ ಮುಖರ್ಜಿಯವರ ನಿರ್ದೇಶನದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ವೇಣು ರಾಜಮೋನಿ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಚಳಿಗಾಲದಲ್ಲಿ ಕವಾಯತು ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. 30 ನಿಮಿಷಗಳ ವರೆಗೆ ನಡೆಯುವ ಕಾರ್ಯಕ್ರಮ `ಮಾ ತುಝೇ ಸಲಾಮ್' ಹಾಡಿಗೆ ಎ.ಆರ್. ರೆಹಮಾನ್ ಸಂಯೋಜಿಸಿರುವ ಸಂಗೀತದ ಮೇಲೆ ಬ್ಯಾಂಡ್ ನುಡಿಸುವುದು ಒಳಗೊಂಡಿದೆ. `ಸಾರೇ ಜಹಾನ್ ಸೇ ಅಚ್ಛಾ' ಮತ್ತು `ಭಾರತ್ ಮಾತಾ ಕೀ ಜೈ' ದೇಶಭಕ್ತಿ ಗೀತೆಗಳು ಸೇರಿವೆ.ಆಕರ್ಷಕ ಪಾಳಿ ಬದಲಾವಣೆ ಕವಾಯತಿನ ಸಂಪ್ರದಾಯವನ್ನು ರಾಷ್ಟ್ರಪತಿ ಭವನದಲ್ಲಿ 2007ರಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸೇನೆಯ ಬ್ಯಾಂಡ್‌ನಿಂದ ರಾಷ್ಟ್ರಗೀತೆಯೊಂದಿಗೆ ಪಾಳಿ ಕವಾಯತನ್ನು ಮುಗಿಸಲಾಗುತ್ತದೆ.ಸದ್ಯ ರಾಷ್ಟ್ರಪತಿ ಭವನದಲ್ಲಿರುವ ಮದ್ರಾಸ್ ರೆಜಿಮೆಂಟ್‌ನ ಯೋಧರು ಮೂರು ವರ್ಷಗಳವರೆಗೆ ಇಲ್ಲಿಯೇ ಇರಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯ ನಿರ್ವಹಿಸಿ ಇಲ್ಲಿಗೆ ಬಂದಿದ್ದಾರೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಇಂದಿಗೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕೆಲ ರಾಷ್ಟ್ರಗಳಂತೂ ಅನ್ಯ ದೇಶದ ಪ್ರಜೆಗಳಿಗೂ ಕವಾಯತು ನೋಡಲು ಅವಕಾಶ ಕಲ್ಪಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry