ಶನಿವಾರ, ಏಪ್ರಿಲ್ 17, 2021
27 °C

ಜನಸ್ನೇಹಿ ನ್ಯಾಯಮಂಡಳಿಯತ್ತ ಹೆಜ್ಜೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಜತೋತ್ಸವದ ಹೊಸ್ತಿಲಿನಲ್ಲಿ ಇರುವ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಘಟಕವು ಕೇಂದ್ರ ಸರ್ಕಾರದ ಕೆಳ ದರ್ಜೆಯ ನೌಕರರಿಗೂ ಅನುಕೂಲ ಆಗುವಂತಹ `ಜನಸ್ನೇಹಿ~ ನ್ಯಾಯಮಂಡಳಿಯಾಗಿ ಪರಿವರ್ತನೆಗೊಳ್ಳಲು ಸಿದ್ಧತೆ ನಡೆಸಿದೆ.ದೇಶದಲ್ಲಿಯೇ ಪ್ರಥಮ ಬಾರಿಗೆ `ಇ-ಫೈಲಿಂಗ್~ ವ್ಯವಸ್ಥೆಯನ್ನು ಜಾರಿಗೆ  ತರಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ವಕೀಲರ ಸಹಾಯವಿಲ್ಲದೇ, ಕಕ್ಷಿದಾರರು ಚಿಕ್ಕಪುಟ್ಟ ಪ್ರಕರಣಗಳನ್ನು ಒಂದು ದಿನದೊಳಗೆ ಬಗೆಹರಿಸಿಕೊಳ್ಳಬಹುದು ಎನ್ನುವುದು ನ್ಯಾಯಮಂಡಳಿಯ ಆಶಯ.ಸಿಎಟಿ ನ್ಯಾಯಾಂಗ ಅಧಿಕಾರಿಯಾಗಿ ಕಳೆದ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿರುವ ಡಾ. ಕೆ.ಬಿ.ಸುರೇಶ್ ಅವರು ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. `ಈ ನ್ಯಾಯಮಂಡಳಿ ಕರ್ನಾಟಕದಲ್ಲಿ ಸ್ಥಾಪನೆಯಾಗಿ 25 ವರ್ಷ ಕಳೆದರೂ ಮುಕ್ಕಾಲು ಭಾಗ ಜನರಿಗೆ ಇಂತಹ ಒಂದು ನ್ಯಾಯಮಂಡಳಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದೇ ತಿಳಿದಿಲ್ಲ.  ನ್ಯಾಯಾಲಯ ಎಂದರೆ ಸಾಮಾನ್ಯ ಜನರು ಭಯಭೀತರಾಗುತ್ತಾರೆ.ಕೋರ್ಟ್‌ಗಳ ಉಸಾಬರಿಯೇ ಬೇಡ ಎನ್ನುತ್ತಾರೆ. ಜನರಿಗಾಗಿಯೇ ಇರುವ ನ್ಯಾಯಾಲಯದ ಬಗ್ಗೆ ಈ ರೀತಿಯ ಧೋರಣೆ ಹೋಗಲಾಡಿಸುವ ಅಗತ್ಯ ಇದೆ. ಆದುದರಿಂದ ನ್ಯಾಯಮಂಡಳಿಯಲ್ಲಿ ಸಾಕಷ್ಟು ಬದಲಾವಣೆ ತಂದು ಅದನ್ನು ಜನಸ್ನೇಹಿಯಾಗಿ ಮಾಡುವ ಉದ್ದೇಶ ಹೊಂದಿದ್ದೇವೆ~ ಎಂದರು.ಶೀಘ್ರ ಇತ್ಯರ್ಥ ಹೇಗೆ?: `ಬಲವಾದ ಕಾರಣ ಇಲ್ಲದೆ ಕೆಲಸದಿಂದ ತೆಗೆದರೆ, ಅಮಾನತು ಮಾಡಿದರೆ, ಬಡ್ತಿ ನೀಡದಿದ್ದರೆ, ಪಿಂಚಣಿ ಸೌಕರ್ಯ ನೀಡದಿದ್ದರೆ ಹೀಗೆ ಹತ್ತು ಹಲವಾರು ಕಾರಣಗಳಿಗೆ ಕೇಂದ್ರ ಸರ್ಕಾರಿ ನೌಕರರು ಕಾನೂನು ಮೊರೆ ಹೋಗುವ ಅಗತ್ಯ ಇರುತ್ತದೆ. ಆದರೆ, ಸಾಮಾನ್ಯವಾಗಿ 10-15 ವರ್ಷ ಕಳೆದರೂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವುದಿಲ್ಲ ಎಂಬ ಭಾವನೆ ಇದೆ. ಈ ಅಂಶ ಹಾಗೂ ಇನ್ನಿತರ ಕಾರಣಗಳಿಗೆ ನ್ಯಾಯಾಲಯಗಳಿಗೆ ಹೋಗಲು ಅಂಜುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರ ಇತ್ಯರ್ಥಕ್ಕೆ ಯೋಜನೆ ರೂಪಿಸಲಾಗಿದೆ~ ಎಂದು ಡಾ.ಸುರೇಶ್ ವಿವರಿಸಿದರು.`ಇಂಟರ್‌ನೆಟ್ ಮೂಲಕ ಸಿಎಟಿಗೆ ತಮ್ಮ ಪ್ರಕರಣವನ್ನು ದಾಖಲು ಮಾಡಿದ ತಕ್ಷಣ, ಅದನ್ನು ರಿಜಿಸ್ಟ್ರಾರ್ ಪರಿಶೀಲನೆ ಮಾಡುತ್ತಾರೆ. ಅರ್ಹ ಅರ್ಜಿಗಳಿದ್ದರೆ ಅದನ್ನು ನ್ಯಾಯಾಧೀಶರ ಗಮನಕ್ಕೆ ತರಲಾಗುತ್ತದೆ. ಸಿಎಟಿಯ ಅಧ್ಯಕ್ಷರು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಕಾರಣ, ಅವರಿಗೆ ಸಾಕಷ್ಟು ಅನುಭವ ಇರುತ್ತದೆ. ಅರ್ಜಿಯನ್ನು ಓದಿದ ತಕ್ಷಣ ಅರ್ಜಿದಾರರ ಮನವಿ ಪುರಸ್ಕರಿಸಬೇಕೆ, ಬೇಡವೆ ಎಂಬ ಬಗ್ಗೆ ಅವರಿಗೆ ತಿಳಿಯುತ್ತದೆ. ಇಲ್ಲದೇ ಹೋದರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ನಂತರ ಮುಂದಿನ ವಿಚಾರಣೆ ನಡೆಸಲಾಗುತ್ತದೆ. ಇದರಿಂದ ಕಕ್ಷಿದಾರರು ನಿರಾಳರಾಗಬಹುದು, ಅರ್ಜಿಗಳು ಕೂಡ ಶೀಘ್ರ ಇತ್ಯರ್ಥಗೊಳ್ಳಲು ಸಹಾಯವಾಗುವುದು. ಈ ರೀತಿಯ ಸಾಫ್ಟ್‌ವೇರ್ ಅಳವಡಿಕೆಗೆ ತಯಾರಿ ನಡೆಸಲಾಗಿದೆ~ ಎಂದು ತಿಳಿಸಿದರು.`ಸದ್ಯ, ಬೆಂಗಳೂರು ಒಂದರಲ್ಲಿಯೇ ನ್ಯಾಯಮಂಡಳಿಯ ಪೀಠ ಇದೆ. ಇದರ ಸಂಚಾರಿ ಪೀಠವನ್ನು ಧಾರವಾಡ, ಗುಲ್ಬರ್ಗ, ಮಂಗಳೂರಿನಲ್ಲಿ ಸ್ಥಾಪಿಸುವ ಉದ್ದೇಶವೂ ಸಿಎಟಿಗೆ ಇದೆ. ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ  ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದೆ. ಇದು ಹೈಕೋರ್ಟ್‌ನಿಂದ ಬಹಳ ಅಂತರದಲ್ಲಿ ಇದೆ ಎಂದು ವಕೀಲರು ಅಳಲು ತೋಡಿಕೊಂಡಿದ್ದಾರೆ. ಅವರ ಮನವಿಯಂತೆ ಶೀಘ್ರದಲ್ಲಿ ಕಾವೇರಿ ಭವನದ ಸಮೀಪ ಇರುವ ಕಂದಾಯ ಭವನದಲ್ಲಿ ಕೋರ್ಟ್ ಕಾರ್ಯ ಆರಂಭಿಸಲಿದೆ.ರಜತಮಹೋತ್ಸವ ಸಮಾರಂಭ ಇದೇ ಶನಿವಾರ ವಿಧಾನಸೌಧದಲ್ಲಿ ನಡೆಯಲಿದ್ದು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.