ಸೋಮವಾರ, ಮೇ 23, 2022
27 °C

ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಅಮಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜನಸ್ನೇಹಿ ಪೊಲೀಸ್ ವ್ಯವಸ್ಥೆಯೇ ನನ್ನ ಪ್ರಥಮ ಆದ್ಯತೆ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, `ಠಾಣೆಗೆ ಆಗಮಿಸುವ ಜನರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ. ಇಲ್ಲದಿದ್ದರೆ ಸಣ್ಣ ಪುಟ್ಟ ವ್ಯಾಜ್ಯಗಳು ಅಪರಾಧ ಕೃತ್ಯಕ್ಕೆ ತಿರುಗುತ್ತವೆ. ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಮುನ್ಸೂಚನೆ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಜನಸ್ನೇಹಿ ಆಗಿರುವುದು ಅಗತ್ಯ' ಎಂದು ಒತ್ತಿ  ಹೇಳಿದರು.`ಪ್ರಥಮ ಬಾರಿಗೆ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದೇನೆ. ಈ ತನಕ ದಕ್ಷಿಣ ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಉತ್ತರ ಕರ್ನಾಟಕವು ಹೊಸ ಸವಾಲು. ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸಮರ್ಥವಾಗಿ ನಿಭಾಯಿಸುವ ಧೈರ್ಯವಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.`ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯುವುದಿಲ್ಲ' ಎಂದ ಅವರು, `ಸರ್ಕಾರ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಸಿಬ್ಬಂದಿ ಮತ್ತಿತರ ಸಮಸ್ಯೆಗಳು ಎಲ್ಲೆಡೆ ಇರುತ್ತವೆ. ಆದರೆ ನಮ್ಮ ದೃಷ್ಟಿಕೋನ ಬದಲಾದರೆ, ಎಲ್ಲವನ್ನೂ ಬದಲು ಮಾಡಲು ಸಾಧ್ಯ. ಆ ದೃಢವಿಶ್ವಾಸ ಪೊಲೀಸರಲ್ಲಿ ಬರಬೇಕು' ಎಂದು  ಆಶಿಸಿದರು.`ಸಂಚಾರ, ಸರಗಳವು ಮತ್ತಿತರ ಪ್ರಮುಖ ಅಪರಾಧಗಳ ನಿಯಂತ್ರಣಕ್ಕೆ ಯತ್ನಿಸುತ್ತೇನೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಬಳಕೆಯೊಂದಿಗೆ ಅಪರಾಧ ಪ್ರಕರಣ ಇಳಿಸಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡುತ್ತೇನೆ' ಎಂದರು. ಡಿವೈಎಸ್ಪಿ ತಿಮ್ಮಪ್ಪ ಹಾಗೂ ಎ.ಡಿ.ಬಸಣ್ಣವರ್ ಇದ್ದರು.ಅಮಿತ್ ಸಿಂಗ್ ನೂತನ ಎಸ್ಪಿ

ಗುಲ್ಬರ್ಗ:
ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಮಿತ್ ಸಿಂಗ್ ಶನಿವಾರ ಸಂಜೆ ಅಧಿಕಾರ ಸ್ವೀಕರಿಸಿದರು.ಬಿಹಾರ ಪಾಟ್ನಾ ಮೂಲದ ಅಮಿತ್ ಸಿಂಗ್, 2007 ಕರ್ನಾಟಕ ಕೇಡರ್ ಐಪಿಎಸ್(ಭಾರತೀಯ ಪೊಲೀಸ್ ಸೇವೆ) ಅಧಿಕಾರಿ. 10 ಡಿಸೆಂಬರ್ 2007ರಲ್ಲಿ ಹಾಸನದಲ್ಲಿ ಪ್ರೊಬೆಷನರಿ ವೃತ್ತಿ ಆರಂಭಿಸಿದ ಅಮಿತ್, ಬಳಿಕ ದಕ್ಷಿಣ ಕನ್ನಡದ ಮಂಗಳೂರು ಹಾಗೂ ಪುತ್ತೂರು ಉಪವಿಭಾಗಗಳಲ್ಲಿ ಜಿಲ್ಲಾ ಪೊಲೀಸ್ ಸಹಾಯಕ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ  21 ಮಾರ್ಚ್ 2011ರಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಸನಕ್ಕೆ ನಿಯುಕ್ತಿಗೊಂಡರು. 2 ವರ್ಷ 3 ತಿಂಗಳ ಬಳಿಕ ಗುಲ್ಬರ್ಗಕ್ಕೆ ವರ್ಗಾವಣೆಗೊಂಡಿದ್ದಾರೆ.ಐಪಿಎಸ್ ತೇರ್ಗಡೆಗೊಳ್ಳುವ ಮೊದಲು ಲೋಕಸಭಾ ಕಾರ್ಯದರ್ಶಿ ಕಾರ್ಯಾಲಯದಲ್ಲಿ ವರದಿಗಾರಿಕೆ ಅಧಿಕರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 36 ಹರೆಯದ (8 ನವೆಂಬರ್1976) ಅಮಿತ್ ಸ್ನಾತಕೋತ್ತರ ಪದವಿ      ಪೂರೈಸಿದ್ದಾರೆ.ಗುಲ್ಬರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎನ್.ಸತೀಶ್ ಕುಮಾರ್ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾಗಿ ಬೆಂಗಳೂರಿಗೆ ವರ್ಗಗೊಂಡಿದ್ದಾರೆ. ಡಿಸೆಂಬರ್ 7ರಂದು ಅಧಿಕಾರ ಸ್ವೀಕರಿಸಿದ್ದ ಸತೀಶ್ ಕುಮಾರ್ ಕೇವಲ ಏಳು ತಿಂಗಳಲ್ಲಿ ವರ್ಗಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.