ಜನಹಿತಕ್ಕೆ ಕುಲಾಂತರಿ ತಂತ್ರಜ್ಞಾನ ಬಳಸಲು ಸಲಹೆ

7
ಕೃಷಿ ವಿಶ್ವವಿದ್ಯಾಲಯದಲ್ಲಿ ನೊಬೆಲ್‌ ಪುರಸ್ಕೃತ ವೆಂಕಟರಾಮನ್‌ ಸಂವಾದ

ಜನಹಿತಕ್ಕೆ ಕುಲಾಂತರಿ ತಂತ್ರಜ್ಞಾನ ಬಳಸಲು ಸಲಹೆ

Published:
Updated:

ಬೆಂಗಳೂರು: ‘ಕುಲಾಂತರಿ (ಜಿ.ಎಂ) ತಳಿ ತಂತ್ರ­ಜ್ಞಾನವನ್ನು ಕುರುಡಾಗಿ ವಿರೋ­ಧಿಸದೆ, ಬರದ ಹೊಡೆತವನ್ನು ತಾಳಬ­ಲ್ಲಂತಹ ತಳಿಗಳ ಅಭಿವೃದ್ಧಿಗಾಗಿ ಅದನ್ನು ಬಳಸ­ಬೇಕು’ ಎಂದು ನೊಬೆಲ್‌ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್‌ ರಾಮ­ಕೃಷ್ಣನ್‌ ಭಾರತೀಯ ವಿಜ್ಞಾನಿಗಳಿಗೆ ಸಲಹೆ ನೀಡಿದರು.ಬೆಂಗಳೂರು ಕೃಷಿ ವಿಶ್ವವಿದ್ಯಾಲಯ­ದಲ್ಲಿ ಈಚೆಗೆ  ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು ಈ ಸಲಹೆಯನ್ನು ಕೊಟ್ಟರು.‘ರಾಸಾಯನಿಕ ಪ್ರಭಾವವನ್ನೂ ಮೀರಿ ಪೌಷ್ಟಿಕಾಂಶಯುಕ್ತ ಧಾನ್ಯವನ್ನು ಬೆಳೆಯುವಂತಹ ತಳಿಗಳ ಅಭಿವೃದ್ಧಿಗೂ ಕುಲಾಂತರಿ ತಂತ್ರಜ್ಞಾನವನ್ನು ಬಳಕೆ ಮಾಡಬಹುದು. ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಬೇಕು’ ಎಂದು ಹೇಳಿದರು.‘ಯೂರೋಪ್‌ನಲ್ಲಿ ರಾಜಕೀಯ ಕಾರಣಗಳಿಗಾಗಿ ಕುಲಾಂತರಿ ವ್ಯವಸ್ಥೆ­ಯನ್ನು ವಿರೋಧಿಸುತ್ತಾರೆ. ಭಾರತೀಯ ವಿಜ್ಞಾನಿಗಳು ಅವರ ಹಾದಿಯಲ್ಲಿ ಸಾಗುವ ಅಗತ್ಯವಿಲ್ಲ’ ಎಂದು ಪ್ರತಿ­ಪಾದಿಸಿದರು. ‘ಯೂರೋಪ್‌ನಲ್ಲಿ ಕುಲಾಂತರಿ ತಳಿಗಳನ್ನು ವಿರೋಧಿಸು­ವವರು ತಾಂತ್ರಿಕವಾಗಿ ಪ್ರಸ್ತುತ ಸನ್ನಿವೇಶದ ಮಾಹಿತಿಯನ್ನು ಪಡೆದಿಲ್ಲ. ಹಿಂದಿನ ಮಾಹಿತಿ ಹಿಡಿದುಕೊಂಡು ಸಮಸ್ಯೆ ಬಗೆಗೆ ಅವರು ಬಿಂಬಿಸುತ್ತಿದ್ದಾರೆ. ಆದರೆ, ಸಂಶೋಧನೆಗಳಿಂದ ಸುಧಾರಣೆ­ಯಾಗಿದ್ದು, ಅವರು ಪ್ರತಿಪಾದಿಸುವ ಸಮಸ್ಯೆ ಈಗ ಇಲ್ಲವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.‘ಕುಲಾಂತರಿ ತಳಿಗಳಲ್ಲಿ ಏನಾದರೂ ಅಪಾಯ ಇದೆಯೇ ಎನ್ನುವುದನ್ನು ಸರಿಯಾದ ಪರೀಕ್ಷೆ ಮೂಲಕ ಮನವರಿಕೆ ಮಾಡಿಕೊಳ್ಳಬೇಕು ಎಂಬುದನ್ನು ನಾನೂ ಒಪ್ಪುತ್ತೇನೆ. ತಂತ್ರಜ್ಞಾನವನ್ನು ಜಾಗೃತಿಯಿಂದ ಬಳಸುವ ಅಗತ್ಯವಿದೆ. ಹಾಗೆಂದ ಮಾತ್ರಕ್ಕೆ ನಾವು ತಂತ್ರಜ್ಞಾನ­ವನ್ನೇ ಬಳಸುವುದಿಲ್ಲ ಎನ್ನುವುದು ಪ್ರಮಾದ’ ಎಂದು ಹೇಳಿದರು.‘ಬಹುರಾಷ್ಟ್ರೀಯ ಕಂಪೆನಿಗಳನ್ನು ವಿರೋಧಿಸುವ ಉದ್ದೇಶದಿಂದಲೇ ಕುಲಾಂತರಿ ತಳಿಗಳ ವಿರುದ್ಧ ಅಪಸ್ವರ ಎತ್ತಲಾಗುತ್ತಿದೆ’ ಎಂದ ಅವರು, ‘ಕೃಷಿ ವಿಶ್ವವಿದ್ಯಾಲಯಗಳು ಜನರಿಗೆ ಸರಿ­ಯಾದ ಮಾಹಿತಿ ಕೊಡಬೇಕು ಮತ್ತು ಸಮಸ್ಯೆ ಪರಿಹರಿಸುವ ತಂತ್ರಜ್ಞಾನಗಳ ಬಗೆಗಿರುವ ತಪ್ಪು ಕಲ್ಪನೆಯನ್ನು ಹೋಗ­ಲಾಡಿಸಬೇಕು’ ಎಂದು ತಿಳಿಸಿದರು.ಕುಲಪತಿ ಡಾ.ಕೆ. ನಾರಾಯಣಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry