ಶನಿವಾರ, ಅಕ್ಟೋಬರ್ 19, 2019
29 °C

ಜನಹಿತ ಕಡೆಗಣನೆ: ಬಿಎಸ್‌ವೈ

Published:
Updated:

ಬೆಂಗಳೂರು: `ರಾಜ್ಯದ ಹಿತ ಮರೆತಿರುವ ರಾಜಕಾರಣಿಗಳು ದೇಶದ ಸಂಸ್ಕೃತಿಯನ್ನು ಹಾಳು ಮಾಡುವ ಪ್ರಯತ್ನದಲ್ಲಿರುವುದು ಖಂಡನೀಯ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಗುಣಧರನಂದಿ ಮಹಾರಾಜರ ಅಭಿನಂದನಾ ಸಮಿತಿಯು ನಗರದ ಕೆ.ಆರ್. ರಸ್ತೆಯಲ್ಲಿರುವ ಕರ್ನಾಟಕ ಜೈನ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನಯೋಗ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.`ಜನರ ವಿಶ್ವಾಸವನ್ನು ಹಾಳು ಮಾಡುವ ಕೆಲಸಕ್ಕೆ ರಾಜಕಾರಣಿಗಳು ಮುಂದಾಗಿದ್ದಾರೆ. ಅನ್ಯಾಯವನ್ನು ಖಂಡಿಸುವ ಮನೋಭಾವ ಅವರಲ್ಲಿ ಕಾಣುತ್ತಿಲ್ಲ. ರಾಜಕಾರಣಿಗಳು ತಮ್ಮಲ್ಲೇ ಕಚ್ಚಾಟ ನಡೆಸುವುದರಿಂದ ಹೊರ ಬರಬೇಕು. ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಜೈನ ಧರ್ಮವು ಸತ್ಯ, ತ್ಯಾಗ, ಅಹಿಂಸಾ ತತ್ವವನ್ನು ಪ್ರತಿಪಾದಿಸುತ್ತಾ ಬಂದಿದೆ. ಈ ಸಮುದಾಯವು ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಆದ್ಯತೆ ನೀಡಿದೆ. ಧರ್ಮ, ಸಂಸ್ಕೃತಿಯ ಸಂದೇಶ ಸಾರುತ್ತಿರುವವರಿಗೆ ಆರ್ಥಿಕ ನೆರವು ನೀಡುವುದು ಎಲ್ಲರ ಕರ್ತವ್ಯ. ನನ್ನ ಅಧಿಕಾರಾವಧಿಯಲ್ಲಿ ಎಲ್ಲ ಸಮುದಾಯದ ಶಿಕ್ಷಣ ಸಂಸೆ, ಮಠಮಾನ್ಯಗಳಿಗೆ ಅನುದಾನ ನೀಡಿದ್ದೇನೆ~ ಎಂದರು.ಗುಣಧರನಂದಿ ಮಹಾರಾಜರು, `ದೇಶದಲ್ಲಿ ಹೊಟ್ಟೆಕಿಚ್ಚುಪಡುವವರ ಸಂಖ್ಯೆ ದೊಡ್ಡದಿದೆ. ಇದಕ್ಕೆ ರಾಜಕಾರಣಿಗಳು ಹೊರತಲ್ಲ. ರಾಜಕೀಯವಾಗಿ ಬೆಳೆಸುವುದು ಹಾಗೆಯೇ ರಾಜಕೀಯವಾಗಿ ತುಳಿಯುವುದು ನಡೆದೇ ಇದೆ. ನಂಬಿದವರಿಂದಲೇ ಯಡಿಯೂರಪ್ಪ ಅವರಿಗೆ ಮೋಸವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಯಶಸ್ಸು ಸಿಗಲಿದೆ~ ಎಂದು ಹಾರೈಸಿದರು.ಅಭಿನಂದನಾ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್, `ದೇಶದಾದ್ಯಂತ ಸುತ್ತಾಟ ನಡೆಸುತ್ತಿರುವ ಗುಣಧರನಂದಿ ಮಹಾರಾಜರು ಜನರಿಗೆ ನೀತಿ, ಸಂದೇಶವನ್ನು ಸಾರುತ್ತಿದ್ದಾರೆ. ಆ ಮೂಲಕ ಜನರಲ್ಲಿ ಜೀವನ ಮೌಲ್ಯಗಳ ಬಗ್ಗೆ ಪ್ರಚಾರ ನಡೆಸುತ್ತಿರುವುದು ಶ್ಲಾಘನೀಯ~ ಎಂದರು.

 

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ವಿ. ಧನಂಜಯಕುಮಾರ್, ಶಾಸಕ ಸಂಜಯ್ ಪಾಟೀಲ್, ಕರ್ನಾಟಕ ಜೈನ ಸಂಘದ ಅಧ್ಯಕ್ಷ ಎಸ್. ಜಿತೇಂದ್ರಕುಮಾರ್ ಉಪಸ್ಥಿತರಿದ್ದರು.

 

Post Comments (+)