ಜನಾಕರ್ಷಣೆಯ ಗಾಂಧಿ ಸ್ಮಾರಕ ಉದ್ಯಾನ

ಬುಧವಾರ, ಜೂಲೈ 17, 2019
25 °C

ಜನಾಕರ್ಷಣೆಯ ಗಾಂಧಿ ಸ್ಮಾರಕ ಉದ್ಯಾನ

Published:
Updated:

ಬೆಳಗಾವಿ: ನಿತ್ಯ ಬೆಳಿಗ್ಗೆ ವಾಯುವಿಹಾರಿಗಳ ಹರಟೆ ಒಂದೆಡೆಯಾದರೆ, ಸಂಜೆ ಮಕ್ಕಳ ಜಾತ್ರೆ ನೆರೆದಿರುತ್ತದೆ. ಇದಕ್ಕಿಂತ ಹೆಚ್ಚಾಗಿ ಪಕ್ಷಿಗಳ ಕಲರವ ಸುತ್ತಮುತ್ತಲಿನ ಪ್ರದೇಶವನ್ನೇ ಆವರಿಸಿರುತ್ತದೆ. ಇದು ಪಾಲಿಕೆ ಒಡೆತನದಲ್ಲಿ ಶಹಾಪುರದಲ್ಲಿರುವ ಛತ್ರಪತಿ ಶಿವಾಜಿ ಉದ್ಯಾನ ಹಾಗೂ ಗಾಂಧಿ ಸ್ಮಾರಕ ಉದ್ಯಾನದಲ್ಲಿ.ಸುಮಾರು 10 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿರುವ ಈ ಉದ್ಯಾನವನ ಈಗ ಆಕರ್ಷಣೀಯ ಕೇಂದ್ರ. ಬೆಳಿಗ್ಗೆ 6 ರಿಂದ 9ರ ವರೆಗೆ ಹಾಗೂ ಸಂಜೆ 4 ರಿಂದ 8ರ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಉದ್ಯಾನದಲ್ಲಿರುವ 50 ಕ್ಕಿಂತ ಹೆಚ್ಚು ಆಸನಗಳಲ್ಲಿ ಬೆಳಿಗ್ಗೆ ವೃದ್ಧರ ಹರಟೆ ನಡೆದಿರುತ್ತದೆ. ಸಂಜೆ ಹೊತ್ತಿಗೆ ಮಕ್ಕಳ ಕಲರವ ಜೋರಾಗಿರುತ್ತದೆ.ಸಿಂಹಾಸನದಲ್ಲಿ ಶಿವಾಜಿ ಮಹಾರಾಜರು ವಿರಾಜಮಾನ ರಾಗಿರುವುದು ಶಿವಾಜಿ ಉದ್ಯಾನದ ಪ್ರಮುಖ ಆಕರ್ಷಣೆ. ನೂರಾರು ಜಾತಿಯ ಗಿಡ-ಮರಗಳು ತಂಪಾದ ಗಾಳಿಯನ್ನು ಬೀಸುತ್ತ, ಉದ್ಯಾನಕ್ಕೆ ಬಂದವರ ಮನಸ್ಸಿಗೆ ಮುದ ನೀಡುತ್ತವೆ. ಅಖಿಲ ಭಾರತ ಕಾಂಗ್ರೆಸ್ ಅಧಿವೇಶನವು ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ನೆನಪಿಗಾಗಿ ಗಾಂಧಿ ಸ್ಮಾರಕ ಉದ್ಯಾನ ಎಂದು ನಾಮಕರಣ ಮಾಡಲಾಗಿದೆ. ಗಾಂಧಿ ಸ್ಮಾರಕ ಪ್ರಮುಖ ಆಕರ್ಷಣೆ.ಶಿವಾಜಿ ಉದ್ಯಾನ ಹಾಗೂ ಗಾಂಧಿ ಸ್ಮಾರಕ ಉದ್ಯಾನ ಎಂಬ ಹೆಸರನ್ನು ಒಂದೇ ಉದ್ಯಾನಕ್ಕಿಡಲಾಗಿದ್ದು, ಪ್ರವೇಶ ದ್ವಾರ ಸಹ ಒಂದೇ ಆಗಿದೆ. ಆದರೆ ಶಿವಾಜಿ ಉದ್ಯಾನಕ್ಕಿಂತ ಗಾಂಧಿ ಸ್ಮಾರಕ ಉದ್ಯಾನ ಹೆಚ್ಚಿನ ಆಕರ್ಷಣೀಯ ತಾಣವಾಗಿದೆ. ಮಕ್ಕಳ ಉದ್ಯಾನ ಸಹ ಈ ಗಾಂಧಿ ಸ್ಮಾರಕದ ಬಳಿಯೇ ಇದೆ.ಎರಡೂ ಉದ್ಯಾನಗಳನ್ನು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗೆ ನವೀಕರಿಸಲಾಗಿದೆ. ವಾಕಿಂಗ್ ಪಾತ್, ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಒದಗಿಸಲಾಗಿದೆ. ಗಾಂಧಿ ಸ್ಮಾರಕ ಉದ್ಯಾನದಲ್ಲಿ ಮಕ್ಕಳ ಉದ್ಯಾನ ಅಸ್ತಿತ್ವಕ್ಕೆ ಬಂದು ತಿಂಗಳಾಗಿದೆ. ಇಲ್ಲಿ ಜೋಕಾಲಿ, ಜಾರುಗುಂಡಿ ಸೇರಿದಂತೆ ವಿವಿಧ ಆಕರ್ಷಣೀಯ ಆಟಿಕೆಗಳನ್ನು ಅಳವಡಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ಬಾತುಕೋಳಿ, ಕುದುರೆ, ಮೀನ ಮಾಡಲಾಗಿದ್ದು, ಇವುಗಳಿಗೆ ಸ್ಪ್ರಿಂಗ್ ಹಾಕಲಾಗಿದೆ. ಮಕ್ಕಳು ಇವುಗಳ ಮೇಲೆ ಸವಾರಿ ಮಾಡಬಹುದು.ಮೂಲ ಸೌಕರ್ಯದ ಕೊರತೆ: ಇಷ್ಟೆಲ್ಲ ಆಕರ್ಷಣೆಯಾಗಿದ್ದರೂ ಸಹ ಈ ಎರಡೂ ಉದ್ಯಾನಗಳಲ್ಲಿ ಮೂಲ ಸೌಕರ್ಯದ ಕೊರತೆ ತಪ್ಪಿಲ್ಲ. ಉದ್ಯಾನದಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಉದ್ಯಾನದ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ದೀಪಗಳಿಲ್ಲ.  ಎರಡೂ ಉದ್ಯಾನಗಳನ್ನು ಪ್ರತ್ಯೇಕಿಸುವಂತೆ ಮಧ್ಯದಲ್ಲಿ ದೊಡ್ಡ ನಾಲಾ ಹರಿದಿದೆ. ನಾಲಾಕ್ಕೆ ಎರಡೂ ಬದಿಗೆ ಯಾವುದೇ ಗೋಡೆ ಇರದ ಕಾರಣ, ಮಕ್ಕಳು ನಾಲಾದಲ್ಲಿ ಬೀಳಬಹುದು ಎಂಬುದು ಪಾಲಕರ ಆತಂಕ.`ಗಾಂಧಿ ಸ್ಮಾರಕ ಉದ್ಯಾನದ ನವೀಕರಣದ ಕೆಲಸ ಆಗಿ ಒಂದು ತಿಂಗಳಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಈ ಕೆಲಸ ಮಾಡಲಾಗಿದೆ. ಇದಕ್ಕಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಪ್ರತ್ಯೇಕ ಅನುದಾನ ಮಂಜೂರು ಮಾಡಿಸಿದ್ದಾರೆ. ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪ್ರಸ್ತಾವ ಸಹ ಸಲ್ಲಿಸಲಾಗಿದೆ~ ಎಂದು ಪಾಲಿಕೆಯ ಸಹಾಯಕ ಎಂಜಿನಿಯರ್ ವಿ.ಆರ್.ಬಿರಡಿ ಹೇಳುತ್ತಾರೆ.`ನಗರದ ಅರ್ಧದಷ್ಟು ಭಾಗದ ನೀರು ಈ ನಾಲಾ ಮೂಲಕವೇ ಹರಿಯುತ್ತದೆ. ಎರಡೂ ಬದಿಗೆ ಗೋಡೆ ನಿರ್ಮಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ನಾಲಾ ಮೇಲೆ ಕಾಂಕ್ರೀಟ್ ಹಾಕಲು ಕನಿಷ್ಠ 80 ಲಕ್ಷ ರೂಪಾಯಿ ಬೇಕಾಗುತ್ತದೆ. ಎರಡೂ ಕಡೆಗೆ ಗೋಡೆ ನಿರ್ಮಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗುವುದು~ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎನ್.ಪೂಜಾರ ಹೇಳುತ್ತಾರೆ.

 

`ಮಕ್ಕಳ ಜಾತ್ರೆ ನಡೆಯುತ್ತದೆ, ಆದರೆ ಉದ್ಯಾನದ ನಿರ್ವಹಣೆ ಸರಿಯಿಲ್ಲ. ದೊಡ್ಡ ನಾಲಾ ಸ್ವಚ್ಛತೆ ಕಂಡಿಲ್ಲ. ನಾನೊಬ್ಬನೇ ಕೆಲಸ ಮಾಡುವುದು ಕಷ್ಟಸಾಧ್ಯ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕರು ಸಹ ಇದಕ್ಕೆ ಸಹಕರಿಸಬೇಕು~

- ಅಶೋಕ ಉಜಗಾಂವಕರ,     ಉದ್ಯಾನದ ಕಾರ್ಮಿಕ

`ನಾಲಾದಿಂದ ಉದ್ಯಾನದ ಸೌಂದರ್ಯಕ್ಕೆ ಹೊಡೆತ ಬಿದ್ದಿದೆ. ನಾಲಾದಲ್ಲಿ ನೀರು ನಿಲ್ಲದೇ, ಸರಾಗವಾಗಿ ಹರಿಯುವ ವ್ಯವಸ್ಥೆ ಆಗಬೇಕು. ಉದ್ಯಾನದಲ್ಲಿ ಮೂಲ ಸೌಕರ್ಯ ಒದಗಿಸುವ ಅಗತ್ಯವಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ~ ಎಂದು ಹೇಳುತ್ತಾರೆ ಉದ್ಯಾನದ ಕೆಲಸಗಾರ ಪರಶುರಾಮ ಚೌಗಲೆ.

- ಪರಶುರಾಮ ಚೌಗಲೆ, ಉದ್ಯಾನ ಕೆಲಸಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry