ಭಾನುವಾರ, ಮೇ 16, 2021
22 °C

ಜನಾರ್ದನ ರೆಡ್ಡಿ ಆಪ್ತರಿಗೀಗ ಸಿಬಿಐ ಗುಮ್ಮ..!

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಜನಾರ್ದನ ರೆಡ್ಡಿ ಆಪ್ತರಿಗೀಗ ಸಿಬಿಐ ಗುಮ್ಮ..!

ಬಳ್ಳಾರಿ: ಸಿಬಿಐನಿಂದ ಬಂಧಿತರಾಗಿ ರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಹುತೇಕರಲ್ಲಿ ಇದೀಗ ಸಿಬಿಐ ಬಂಧನದ ಭೀತಿ ಆವರಿಸಿದೆ.ಕಳೆದ ಸೋಮವಾರ ಜನಾರ್ದನ ರೆಡ್ಡಿ ಬಂಧನ ಆಗುತ್ತಿದ್ದಂತೆಯೇ ಅವರ ಆಪ್ತರು, ಸಹಚರರು, ಬಿಜೆಪಿಯಲ್ಲಿ ಸಕ್ರಿಯವಾಗಿದ್ದವರು, ಸಿಬಿಐ ಮರು ದಾಳಿ ನಡೆಸಲಿದೆ ಎಂಬ ಚರ್ಚೆಯಲ್ಲೇ ತೊಡಗಿದ್ದರ ನಡುವೆಯೇ, ಭಾನುವಾರ ಬೆಳಿಗ್ಗೆ ಧುತ್ತನೆ ಪ್ರತ್ಯಕ್ಷವಾಗಿರುವ ಸಿಬಿಐ ತಂಡ ರೆಡ್ಡಿ ಆಪ್ತರು ಬೆವರುವಂತೆ ಮಾಡಿದೆ.ಗಣಿಗಾರಿಕೆ, ಅದಿರು ಸಾಗಣೆ, ಟ್ರಾನ್ಸ್‌ಪೋರ್ಟ್ ಏಜೆನ್ಸಿ ಜತೆಗೆ ಆಡಳಿತಾರೂಢ ಬಿಜೆಪಿ ಸೇರಿ `ಸಕ್ರಿಯ~ ರಾಜಕಾರಣದಲ್ಲಿ ತೊಡಗಿದ ಜಿಲ್ಲೆಯ ಬಹುತೇಕರು, ತಮ್ಮ ಮೇಲೂ ಸಿಬಿಐ ದಾಳಿ ಆಗಲಿದೆಯೇ ಎಂಬ ಭೀತಿ ಎದುರಿಸುವಂತಾಗಿದೆ.ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಸಲ್ಲಿಸಿದ್ದ ವರದಿಯಿಂದಾಗಿ ಮೊದಲೇ ತೀವ್ರ ಭಯಕ್ಕೆ ಒಳಗಾಗಿದ್ದವರಿಗೆ, ಇದೀಗ ಸಿಬಿಐ ನಡೆಸುತ್ತಿರುವ ದಾಳಿಯು ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.`ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರು~ ಎಂಬಂತೆ ವರ್ತಿಸಿ, `ಇಂದಲ್ಲ ನಾಳೆ ತಮ್ಮನ್ನೂ ಬಂಧಿಸಬಹುದು~ ಎಂಬ ಭಯದಿಂದ ಕೆಲವರು ಬಳ್ಳಾರಿಯಿಂದಲೇ ಕಾಲ್ಕಿತ್ತಿದ್ದು, ಇನ್ನು ಕೆಲವರು ಊರಲ್ಲಿದ್ದರೂ ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತವಾಗಿದ್ದಾರೆ.ಸಿಬಿಐನ ಒಂದು ತಂಡ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ಕರೆದೊಯ್ದರೆ, ಇನ್ನೊಂದು ತಂಡ ಬಳ್ಳಾರಿಯಲ್ಲೇ ಬೀಡುಬಿಟ್ಟಿದೆ. ರೆಡ್ಡಿ ಸಹಚರರು, ಆಪ್ತರು, ಫಲಾನುಭವಿಗಳು, ಗಣಿಗಾರಿಕೆ ಸಂಬಂಧಿ ಚಟುವಟಿಕೆಯಲ್ಲಿ ತೊಡಗಿದವರನ್ನೆಲ್ಲ ಸಿಬಿಐ ಬಂಧಿಸಿ ವಿಚಾರಣೆಗೆ ಒಳಪಡಿಸಲಿದೆ ಎಂಬ ವದಂತಿಗಳು ಜಿಲ್ಲೆಯಾದ್ಯಂತ ಹರಡಿವೆ ಯಲ್ಲದೆ, ಹೊಸಪೇಟೆ, ಸಂಡೂರು ಪಟ್ಟಣಗಳಿಂದಲೂ ಅನೇಕರು ಕಾಲ್ಕೀಳುವಂತೆ ಮಾಡಿವೆ.ಭಾನುವಾರ ರಾತ್ರಿ ಬೆಂಗಳೂರಿನಿಂದ ಆಗಮಿಸಿದ ಸಿಬಿಐ ತಂಡ ರೆಡ್ಡಿ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವು ದರಿಂದ `ಯಾರಿಗೂ ಉಳಿಗಾಲವಿಲ್ಲ. ಆಪ್ತರೆಲ್ಲರೂ ಬಂಧಿತರಾಗಿ ವಿಚಾ ರಣೆಗೆ ಒಳಗಾಗುವುದು ಅನಿವಾರ್ಯ~ ಎಂಬ ಚರ್ಚೆಗಳು ಸಾರ್ವಜನಿಕರಿಂದ ಕೇಳಿಬಂದವು.ರೆಡ್ಡಿ ನಿಕಟವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಗುರುಲಿಂಗನಗೌಡ  ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತಲ್ಲದೆ, ಇತರ ಆಪ್ತರಾದ ಗೋನಾಳ್ ರಾಜಶೇಖರಗೌಡ, ವೆಂಕಟರೆಡ್ಡಿ, ಯರ‌್ರಂಗಳಿ ತಿಮ್ಮಾರೆಡ್ಡಿ ಅವರ ಮನೆ ಮೇಲೂ ದಾಳಿ ನಡೆದಿದೆ ಎಂಬ ಗಾಳಿ ಸುದ್ದಿಯೂ ಕೆಲಕಾಲ ತೇಲಾಡಿತು.ಲೋಕಾಯುಕ್ತರ ವರದಿಯಲ್ಲಿ ಜನಾರ್ದನರೆಡ್ಡಿ ಅವರ ನೂರಾರು ಜನ ಆಪ್ತರು, 600ಕ್ಕೂ ಅಧಿಕ ಅಧಿಕಾರಿಗಳು ಸೇರಿದ್ದು, ಅವರೆಲ್ಲರೂ `ತಪ್ಪು ದಂಡ ತೆರಲೇಬೇಕು~ ಎಂಬ ಮಾತುಗಳು ಕೇಳುತ್ತಿದ್ದು, ರಾತ್ರಿ ಕಳೆದು ಬೆಳಗಾಗುವುದರೊಳಗೆ ಹಣದ ಥೈಲಿ ತಂದು ಚೆಲ್ಲಿರುವ `ಅಕ್ರಮ ಗಣಿಗಾರಿಕೆ~ ಇದೀಗ ಅನೇಕರನ್ನು ಪೆಡಂಭೂತವಾಗಿ ಕಾಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.