ಶುಕ್ರವಾರ, ಮೇ 7, 2021
19 °C

ಜನಾರ್ದನ ರೆಡ್ಡಿ ಬಂಧನದಿಂದ ದುಷ್ಪರಿಣಾಮ ಇಲ್ಲ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನವು ಕೊಪ್ಪಳ ವಿಧಾನಸಭಾ ಉಪ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ವರದಿಯಲ್ಲಿ ಹೆಸರಿಸಿದ ಮಾತ್ರಕ್ಕೆ ಆರೋಪಿ ಎಂದಾಗುವುದಿಲ್ಲ. ಈ ಕಾರಣದಿಂದ ರೆಡ್ಡಿ ಬಂಧನ ಯಾವುದೇ ದುಷ್ಪರಿಣಾಮ ಬೀರದು ಎಂದರು.ಕಳೆದ 3 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಜನಪರ ಯೋಜನೆಗಳು ಕೊಪ್ಪಳ ಚುನಾವಣೆಗೆ ಮಾನದಂಡವಾಗಲಿದೆ. ಈ ವರೆಗೂ ಉಪ ಚುನಾವಣೆಯಲ್ಲಿ ಆದ ಫಲಿತಾಂಶ ಮತ್ತೆ ಮರುಕಳಿಸಲಿದೆ. ಆದರೆ ಅಂತರ 20 ಸಾವಿರದ ಗಡಿ ದಾಟಲಿದೆ ಎಂದರು.ಕಾಂಗ್ರೆಸ್ ವೃಥಾ ಆರೋಪದಲ್ಲಿ ತೊಡಗಿದೆ. ಜೆಡಿಎಸ್ ಮುಗಿದ ಅಧ್ಯಾಯವಾಗಿದೆ.  ವಿಧಾನಸಭೆಯ ಒಳಗೆ ಮತ್ತು ಹೊರಗೆ ಎರಡೂ ಪಕ್ಷಗಳು ಕಾರ್ಯ ನಿರ್ವಹಿಸಲು ವಿಫಲವಾಗಿವೆ ಎಂದು ಆರೋಪಿಸಿದರು.ಶೀಘ್ರವೇ ಹೊಸ ಲೋಕಾಯುಕ್ತರು: ಉಪ ಚುನಾವಣೆ ಮುಗಿಯುತ್ತಿದ್ದಂತೆಯೇ ಹೊಸ ಲೋಕಾಯುಕ್ತರ ನೇಮಕಕ್ಕೆ ಮುಂದಾಗುವುದಾಗಿ ಅವರು ಹೇಳಿದರು. ಪ್ರತಿಪಕ್ಷಗಳೊಂದಿಗೆ ಚರ್ಚಿಸಿ, ಅವರುಗಳ ವಿಶ್ವಾಸ ಪಡೆದು ನೇಮಕಕ್ಕೆ ಮುಂದಾಗುವುದಾಗಿ ತಿಳಿಸಿದರು.ಲೋಕಾಯುಕ್ತರ ವರದಿಯಲ್ಲಿ ಸೂಚಿಸಿರುವಂತೆ 771 ಅಧಿಕಾರಿಗಳ ಮೇಲೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರದಿಯನ್ನು ಸಿದ್ಧಪಡಿಸಲು ತಿಳಿಸಿದ್ದು, ವರದಿಯ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಸಕರ ಮೇಲೂ ಕ್ರಮಕ್ಕೆ ಮುಂದಾಗಲು ನಿರ್ಧರಿಸಿದ್ದು ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಲಾಗಿದೆ. ಸಮಗ್ರ ವರದಿಯ ನಂತರ ಅವರ ಮೇಲೂ ಕ್ರಮ ಜರುಗಿಸುವುದಾಗಿ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.