ಜನಾರ್ದನ ರೆಡ್ಡಿ ವಿರುದ್ಧ ಶೀಘ್ರ ಆರೋಪ ಪಟ್ಟಿ

7

ಜನಾರ್ದನ ರೆಡ್ಡಿ ವಿರುದ್ಧ ಶೀಘ್ರ ಆರೋಪ ಪಟ್ಟಿ

Published:
Updated:
ಜನಾರ್ದನ ರೆಡ್ಡಿ ವಿರುದ್ಧ ಶೀಘ್ರ ಆರೋಪ ಪಟ್ಟಿ

ಹೈದರಾಬಾದ್: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಇತರ ಆಪಾದಿತರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಡಿಸೆಂಬರ್ 4ಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದೆ.ಮೂವರು ಪ್ರಮುಖ ಆಪಾದಿತರು ಈಗಾಗಲೇ ಜೈಲಿನಲ್ಲಿದ್ದು, ನಾಲ್ಕನೇ ಆಪಾದಿತೆಯಾಗಿರುವ ಆಂಧ್ರ ಪ್ರದೇಶದ ಕೈಗಾರಿಕೆ ಮತ್ತು ಗಣಿ ಇಲಾಖೆಯ ಮಾಜಿ ಕಾರ್ಯದರ್ಶಿ ಶ್ರೀಲಕ್ಷ್ಮಿ ಅವರು ಸಿಬಿಐ ಜಂಟಿ ನಿರ್ದೆಶಕ ಲಕ್ಷ್ಮಿನಾರಾಯಣ ಅವರ ಮುಂದೆ ಪ್ರಥಮ ಬಾರಿ ಹಾಜರಾಗಿ, ಮಾಫಿ  ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ.ಅದೇ ರೀತಿ ಈಗ ಸಿಬಿಐ ವಶದಲ್ಲಿರುವ ಸರ್ಕಾರಿ ಖನಿಜ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ್ ಸಹ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡು ತನಿಖೆಗೆ ಸಹಕರಿಸುತ್ತಿದ್ದೆ. ಶ್ರೀಲಕ್ಷ್ಮಿ ಅವರ ಪಾಸ್‌ಪೋರ್ಟ್‌ನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಸೋಮವಾರ ಅವರನ್ನು ಬಂಧಿಸಲು ಸಿದ್ಧತೆ ನಡೆದಿದೆ.ಗಣಿ ಮಾಲೀಕರಿಗೆ ಬೆದರಿಕೆ ಹಾಕಿ ಓಬಳಾಪುರಂ ಕಂಪೆನಿಗೆ ಗಣಿಗಳನ್ನು ಗುತ್ತಿಗೆ ನೀಡುವಂತೆ ಒತ್ತಾಯಿಸಿದ ಮತ್ತು ಆರ್‌ಆರ್ ಗ್ಲೋಬಲ್ ಕಂಪೆನಿಗೆ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆಪಾದನೆ ಎದುರಿಸುತ್ತಿರುವ ಜಗನ್‌ಮೋಹನ ರೆಡ್ಡಿ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಗುರಿಪಡಿಸಲು ಸಿಬಿಐ ನಿರ್ಧರಿಸಿದೆ.ಗಣಿ ಮಾಲೀಕ ಶಶಿಕುಮಾರ್ ಅವರು ಸಿಬಿಐ ಮುಂದೆ ಹೇಳಿಕೆ ನೀಡಿ, ಶ್ರೀಲಕ್ಷ್ಮಿ ಮತ್ತು ರಾಜಗೋಪಾಲ್ ಅವರು ತಮಗೆ ಗಣಿ ಗುತ್ತಿಗೆ ಸಿಗದಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಆಪಾದಿಸಿದ್ದಾರೆ.ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಶ್ರೀಲಕ್ಷ್ಮಿ ಅವರು ತಮ್ಮನ್ನು ಕಚೇರಿಗೆ ಕರೆಸಿಕೊಂಡು ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಎಂ.ಜಿ.ವಿ. ಕುಮಾರ್ ಭಾನು ಅವರನ್ನು ಭಾನುವಾರ ಸಿಬಿಐ ಅಧಿಕಾರಿಗಳು ಆರು ಗಂಟೆ ಕಾಲ ವಿಚಾರಣೆ ನಡೆಸಿದ್ದು, ಇನ್ನೊಮ್ಮೆ ಅವರನ್ನು ಪ್ರಶ್ನೆಗೆ ಒಳಪಡಿಸುವ    ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry