ಜನ್ನತ್‌ನಗರದ ಜನರಿಗಿಲ್ಲ ಪಡಿತರ:ಗ್ಯಾಸ್ ಇಲ್ಲದಿದ್ದರೂ ಕಾರ್ಡ್‌ನಲ್ಲಿ ಗ್ಯಾಸ್ ಇದೆ ಎಂದು ನಮೂದು

7

ಜನ್ನತ್‌ನಗರದ ಜನರಿಗಿಲ್ಲ ಪಡಿತರ:ಗ್ಯಾಸ್ ಇಲ್ಲದಿದ್ದರೂ ಕಾರ್ಡ್‌ನಲ್ಲಿ ಗ್ಯಾಸ್ ಇದೆ ಎಂದು ನಮೂದು

Published:
Updated:

ಧಾರವಾಡ: `ಸರ್ಕಾರ ಜನರಿಗೆ ನೀಡಿದ ಸೌಲಭ್ಯಗಳನ್ನು ಕಿತ್ತುಕೊಳ್ಳಲು ಹೆಚ್ಚು ಆತುರ ವಹಿಸಬೇಡಿ. ಬದಲಾಗಿ ದೊಡ್ಡ ಮನಸ್ಸಿನಿಂದ ಅವರಿಗೆ ಪಡಿತರ ಕಾರ್ಡುಗಳನ್ನು ಹಂಚಿಕೆ ಮಾಡಿ. ತಪ್ಪಾಗಿದ್ದರೆ ಆಮೇಲೆ ನೋಡೋಣ. ಕಾರ್ಡ್‌ನಲ್ಲಿ ತಪ್ಪಿದೆ ಎಂದು ರೇಷನ್ ಕೊಡುವುದನ್ನು ನಿಲ್ಲಿಸಬೇಡಿ...~-ಇದು ನಾಲ್ಕು ದಿನಗಳ ಹಿಂದಷ್ಟೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಡಿ.ಎನ್.ಜೀವರಾಜ್ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಅಧಿಕಾರಿಗಳಿಗೆ ನೀಡಿದ್ದ ಸೂಚನೆ. ಅಧಿಕಾರಿ ಗಳೂ `ಆಗಲಿ~ ಎಂದು ತಲೆಯಾಡಿಸಿದ್ದರು.ಅದೇ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಗಳವಾರ ಬೆಳಿಗ್ಗೆಯೇ ಜನ್ನತ್‌ನಗರದ ರಸೂಲ್‌ಬಿ ಬಸ್ತಿವಾಡ, ಫಾತಿಮಾ ಬುಡ್ಡೇಸಾಬ್ ಯಲಿಗಾರ, ಹಮೀದಾ ಬ್ಯಾಕೋಡ, ಹಮೀದಾ ಅಬ್ಬ್ಯಾಳ, ಯಾಸ್ಮೀನ್ ಸಂದಲ್‌ವಾಲೆ ಸೇರಿದಂತೆ ಹಲವು ಮಹಿಳೆಯರು ಬಂದಿದ್ದರು.ಕಾರಣವಿಷ್ಟೇ, ಸಚಿವರು ಮಾತನ್ನು ಅಧಿಕಾರಿಗಳು ಹಾಗೂ ರೇಷನ್ ವಿತರಕರು ಕಾರ್ಯರೂಪಕ್ಕೆ ತರದೇ ಇರುವುದನ್ನು ಪ್ರಶ್ನಿಸಲು! ಕಳೆದ 10 ವರ್ಷಗಳಿಂದ ಹಳೆಯ ಪಡಿತರ ಚೀಟಿಯನ್ನು ಹೊಂದಿರುವ ರಸೂಲ್‌ಬಿಗೆ ಈಗಷ್ಟೇ ಹೊಸ ಪಡಿತರ ಕಾರ್ಡ್ ನೀಡಲಾಗಿದೆ. ಆದರೆ ಯಾಕಾದರೂ ಕಾರ್ಡ್ ಬಂತೋ... ಮೊದಲಿನ ಕಾರ್ಡ್ ಇದ್ದರೆ ಛಲೋ ಇತ್ತಲ್ಲ ಎಂದು ಆ ಮಹಿಳೆ ಪರಿತಪಿಸುತ್ತಿದ್ದಾಳೆ. ಅದಕ್ಕೆ ಕಾರಣವೂ ಇದೆ. ಮೊದಲಿನ ಕಾರ್ಡ್‌ನಲ್ಲಿ `ಅಡುಗೆ ಅನಿಲ ರಹಿತ ಬಿಪಿಎಲ್ ಕಾರ್ಡ್~ ಎಂದು ಬರೆದಿದ್ದರೆ ಹೊಸ ಕಾರ್ಡ್‌ನಲ್ಲಿ `ಬಿಪಿಎಲ್ ಅನಿಲ~ ಎಂದು ಬರೆಯಲಾಗಿದೆ. `ಹಂಗಿದ್ರ ಗ್ಯಾಸ್ ತಗೊಂಡಿಲ್ಲೇನು~ ಎಂದು ಪ್ರಶ್ನಿಸಿದರೆ, `ಎಲ್ಲಿ ನಿಂತು ಆಣಿ ಮಾಡು ಅಂತೀರಿ ಅಲ್ಲಿ ಮಾಡ್ತೀವ್ರಿ. ಬೇಕಾದ್ರ ಗ್ಯಾಸ್ ಏಜೆನ್ಸಿದವ್ರನ್ ಕೇಳ್ರೀಪಾ?~ ಎನ್ನುತ್ತಾರೆ ರಸೂಲ್‌ಬೀ ಮತ್ತು ಹಮೀದಾ.ಜನ್ನತ್‌ನಗರದ ಸುಮಾರು 50ಕ್ಕೂ ಅಧಿಕ ಕುಟುಂಬಗಳ ಕಾರ್ಡ್‌ಗಳಲ್ಲಿ ಹೀಗೆ ತಪ್ಪಾಗಿದೆ. ಅದರ ನೇರ ಪರಿಣಾಮ ಬೀರಿದ್ದು ಮಾತ್ರ ಇತ್ತೀಚೆಗೆ. ಪ್ರತಿ ತಿಂಗಳಂತೆ ಈ ಬಾರಿಗೂ ರೇಷನ್ ತರಲು ನ್ಯಾಯಬೆಲೆ ಅಂಗಡಿಗೆ ಹೋದ ಈ ಮಹಿಳೆಯರಿಗೆ ರೇಷನ್ ಸಿಗಲಿಲ್ಲ. ಸೀಮೆ ಎಣ್ಣೆಯೂ ಸಿಗಲಿಲ್ಲ.

 

ಅದಕ್ಕೆ ಅಂಗಡಿಕಾರರು, `ಕಾರ್ಡ್ ಸರಿಪಡಿಸಿಕೊಂಡು ಬಂದರೆ ಮಾತ್ರ ರೇಷನ್, ಇಲ್ಲದಿದ್ದರೆ ಇಲ್ಲ~ ಎಂಬ ಉತ್ತರ ನೀಡಿದ್ದಾರೆ. ಈ ಕುಟುಂಬದವರಿಗೆ ವಿದ್ಯಾ ಕುರ್ತಕೋಟಿ, ಎಸ್.ಬಿ.ಹಾಲಭಾವಿ ಎಂಬ ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆ ಮಾಡುತ್ತಾರೆ. ಅವರೇ ಹೀಗೆ ಉತ್ತರ ನೀಡಿದ್ದಾರೆ ಎಂದು ಕಾರ್ಡುದಾರರು ಆರೋಪಿಸುತ್ತಾರೆ.ಪ್ರತಿ ತಿಂಗಳೂ 20 ಕೆಜಿ ಅಕ್ಕಿ, 3 ಕೆಜಿ ಗೋಧಿ, 6 ಲೀಟರ್ ಸೀಮೆ ಎಣ್ಣೆ ಪಡೆಯುತ್ತಿದ್ದ ಈ ಕುಟುಂಬದವರಿಗೆ ಅಕ್ಟೋಬರ್ ಪಡಿತರ ಬಂದ್ ಆಗಿದೆ. `ಕಳೆದ ತಿಂಗಳು ನಾನು ಬಳಸಿ ಉಳಿಸಿದ್ದ ರೇಷನ್‌ನಲ್ಲಿಯೇ ಅಕ್ಕ ಫಾತಿಮಾ 5 ಕೆಜಿ ಅಕ್ಕಿ ಒಯ್ದಿದ್ದಾಳೆ. ಇವರು ರೇಷನ್ ಕೊಡುವುದೇ ಇಲ್ಲ ಎಂದರೆ ನಾವು ಹೇಗೆ ದಿನ ಕಳೆಯಬೇಕು~ ಎಂದು ರಸೂಲ್‌ಬೀ ಕೇಳಿದರು.ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಇಲಾಖೆಯ ಉಪನಿರ್ದೇಶಕ ಕೆ.ಎಸ್. ಕಲ್ಲನ ಗೌಡರ, `ಕಾರ್ಡು ಹಂಚಿಕೆಯಾದ ಬಳಿಕ ಇದೇ ಮೊದಲ ಬಾರಿಗೆ ಇಂಥ ಸಮಸ್ಯೆ ಕೇಳುತ್ತಿದ್ದೇನೆ. ಸಂಬಂಧಪಟ್ಟ ಅಂಗಡಿಯವ ರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ~ ಎಂದರು.`ಸಮಸ್ಯೆ ಸಹಜ~

ಜಿಲ್ಲೆಯಲ್ಲಿ ಸುಮಾರು 1.65 ಲಕ್ಷ ಜನರಿಗೆ ಪಡಿತರ ಕಾರ್ಡುಗಳನ್ನು ಹಂಚಿಕೆ ಮಾಡ ಬೇಕಾಗಿರುವುದರಿಂದ ಕೆಲ ಕಾರ್ಡುಗಳಲ್ಲಿ ದೋಷ ಉಂಟಾಗುವುದು ಸಹಜ. ಆ ರೀತಿ ತಪ್ಪುಗಳಿದ್ದ ಕಾರ್ಡುಗಳನ್ನು ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಸರಿಪಡಿಸಿ ಕೊಡುತ್ತೇವೆ.

-ಸಮೀರ್ ಶುಕ್ಲ, ಜಿಲ್ಲಾಧಿಕಾರಿಮುಖ್ಯಾಂಶಗಳು

*50ಕ್ಕೂ ಹೆಚ್ಚು ಕುಟುಂಬಗಳ ಕಾರ್ಡ್‌ಗಳಲ್ಲಿ ತಪ್ಪು.

*ರೇಷನ್ ಪಡೆಯಲು ಪರದಾಟ

*ಕಾರ್ಡ್ ಸರಿಪಡಿಸಿಕೊಂಡು ಬಾರದಿದ್ದರೆ ರೇಷನ್ ಇಲ್ಲ

*ಅಕ್ಟೋಬರ್ ಪಡಿತರ ಬಂದ್  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry