ಭಾನುವಾರ, ಜೂನ್ 20, 2021
20 °C

ಜನ ಬಯಸಿದರೆ ಗ್ಲಾಮರಸ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರರಂಗದಲ್ಲಿ ಒಂದಷ್ಟು ಕಾಲ ಸುದ್ದಿಯಲ್ಲಿದ್ದ ನಟಿ ಶುಭಾ ಪೂಂಜಾ ಇದ್ದಕ್ಕಿದ್ದಂತೆ ಮರೆಯಾಗಿದ್ದರು. ಕಿರುತೆರೆಯ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಅವರು ಕೆಲ ಸಮಯದಿಂದ ಅಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.

 

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದ ಅವರ ಖ್ಯಾತಿ ಅಷ್ಟು ಬೇಗ ಕುಂದಿ ಹೋಯಿತೇ ಎಂಬ ಪ್ರಶ್ನೆ ಮೂಡಿತ್ತು. `ಸ್ವಲ್ಪ ಕಾಲ ಚಿತ್ರರಂಗದಿಂದ ಮರೆಯಾಗಿದ್ದು ನಿಜ. ಇದು ಚಿತ್ರಗಳ ನಡುವಿನ ಸಣ್ಣ `ಗ್ಯಾಪ್~ ಅಷ್ಟೇ, ಅಂತ್ಯವಲ್ಲ~- ಇದು ಶುಭಾ ನೀಡುವ ಉತ್ತರ.`ಕಂಠೀರವ~ ಚಿತ್ರದ ಬಳಿಕ ಬಂದ ಕೆಲವು ಚಿತ್ರಗಳು ಇಷ್ಟವಾಗಲಿಲ್ಲ. ಮತ್ತೆ ಕೆಲವು ಅವಕಾಶಗಳನ್ನು ಒಪ್ಪಿಕೊಳ್ಳುವುದು ತಡವಾಯಿತು. ಹೀಗೆ ಅನೇಕ ಚಿತ್ರಗಳು ಕೈತಪ್ಪಿ ಹೋದವು ಎಂದು ಕಾರಣಗಳನ್ನು ನೀಡುವ ಶುಭಾ ಕನ್ನಡದಲ್ಲಿ ನೆಲೆ ಸಿಗದಿದ್ದರೆ ಬೇರೆ ಭಾಷೆಯತ್ತ ಮುಖ ಮಾಡುವ ಸೂಚನೆ ನೀಡಿದ್ದಾರೆ. ಮಲಯಾಳಂ ಚಿತ್ರದಲ್ಲಿ ಅವರನ್ನು ಅವಕಾಶ ಅರಸಿ ಬಂದಿದೆಯಂತೆ. ತೆಲುಗಿನಲ್ಲಿ ನೆಲೆ ಕಂಡುಕೊಳ್ಳುವ ಆಸೆಯೂ ಅವರಿಗಿದ್ದಂತಿದೆ.`ಚಿತ್ರಗಳು ಇಲ್ಲದಿದ್ದಾಗ ಜನ ನನ್ನನ್ನು ಮರೆತು ಹೋಗಬಾರದು ಎಂಬ ಕಾರಣಕ್ಕೆ ಕಿರುತೆರೆಯಲ್ಲಿ ಕಾಣಿಸಿಕೊಂಡೆ. ಈಗ ಮತ್ತೆ ಅವಕಾಶಗಳು ಬರುತ್ತಿವೆ. ಹೀಗಾಗಿ ಕಿರುತೆರೆಯಿಂದ ಈಚೆ ಬಂದಿದ್ದೇನೆ~ ಎನ್ನುವುದು ಶುಭಾ ತಮ್ಮ ಕಿರುತೆರೆಯ ಅಂತರ್ಧಾನಕ್ಕೆ ನೀಡುವ ಕಾರಣ.`ಗುಂಡ್ರಗೋವಿ~ ಸತ್ಯ ಜೊತೆ `ಬೀರ~ ಚಿತ್ರದಲ್ಲಿನ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿ ನಟಿಸಿರುವ ಶುಭಾ, ಮೊದಲ ಬಾರಿಗೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರಂತೆ. `ಗೋಲ್‌ಮಾಲ್~ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಜೊತೆ ನಟಿಸಿರುವ ಅವರದು ಹಾಸ್ಯಮಯ ಪಾತ್ರವಂತೆ. ಅಲ್ಲೂ ಗ್ಲಾಮರಸ್ ಆಗಿ ನಟಿಸಿದ್ದೇನೆ ಎನ್ನುತ್ತಾರೆ.ಕನ್ನಡದಲ್ಲಿ ಹೊಸ ನಿರ್ದೇಶಕರೊಬ್ಬರ ನಾಯಕಿ  ಪ್ರಧಾನ ಚಿತ್ರದಲ್ಲೂ ಶುಭಾ ನಟಿಸಲಿದ್ದಾರೆ. ಅದು ತುಂಬಾ ಬೋಲ್ಡ್ ಪಾತ್ರ. `ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿಲ್ಲ. `ಬಿ~, `ಸಿ~ ಸೆಂಟರ್‌ಗಳ ಹೀರೋಯಿನ್ ಎಂದೆನಿಸಿಕೊಳ್ಳುವುದಕ್ಕೆ ನಾನು ಇಷ್ಟಪಡುತ್ತೇನೆ. ಮಾಸ್‌ಗೆ ಇಷ್ಟವಾಗುವ ಕಮರ್ಷಿಯಲ್ ಚಿತ್ರಗಳಲ್ಲೇ ನಟಿಸುತ್ತೇನೆ~ ಎಂದು ಶುಭಾ ಅವರು ಹಿಂಜರಿಕೆಯಿಲ್ಲದೆ ಹೇಳುತ್ತಾರೆ.`ಮೊಗ್ಗಿನ ಮನಸ್ಸು~ ಚಿತ್ರದ ಮುಗ್ಧ ಕಾಲೇಜು ವಿದ್ಯಾರ್ಥಿನಿಯ ಪಾತ್ರದಿಂದ ಮನೆಮಾತಾದ ಶುಭಾರನ್ನು ಆ ಪಾತ್ರ ಎಂದಿಗೂ ಕಾಡುತ್ತದೆಯಂತೆ. ಅಂತಹ ಪಾತ್ರಗಳಿದ್ದರೆ ಇನ್ನೂ ಚೆನ್ನ ಎನ್ನುವ ಅವರಿಗೆ ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗುವ ಭಯವಿದೆ.ಬೇರೆ ರೀತಿಯ ಪಾತ್ರಗಳಲ್ಲಿ ನನ್ನಿಂದ ನಟಿಸುವುದು ಸಾಧ್ಯವೇ ಎಂಬ ಅನುಮಾನ ಹುಟ್ಟುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪಾತ್ರಗಳ ಬಗ್ಗೆ ನನಗೆ ಪಶ್ಚಾತ್ತಾಪ ಮೂಡಬಾರದು. ಹೀಗಾಗಿ ಪಾತ್ರಗಳ ಮೇಲೆ ಪ್ರಯೋಗ ಮಾಡಲು ಹೊರಟಿದ್ದೇನೆ ಎನ್ನುವುದು ಅವರ ಹೊಸ ವರಸೆ. ತಮಿಳಿನಲ್ಲಿ ಮೊದಲು ಬಣ್ಣ ಹಚ್ಚಿದ ಅವರನ್ನು ಅಲ್ಲಿನ ಚಿತ್ರರಂಗ ಕೈ ಹಿಡಿಯಲಿಲ್ಲ. ಅಂತರ ಹೆಚ್ಚುತ್ತದೆ ಎಂಬ ಕಾರಣಕ್ಕೆ ನಿರಂತರ ಸಿನಿಮಾಗಳನ್ನು ಮಾಡುವುದೂ ಸರಿಯಲ್ಲ.ಅದರ ಪರಿಣಾಮದ ಅನುಭವ ಈ ಮುಂಚೆಯೇ ತಮಿಳಿನಲ್ಲಿ ಆಗಿತ್ತು. ಆದರೆ ಒಳ್ಳೆ ಸ್ಕ್ರಿಪ್ಟ್ ಬಂದರೆ ಸಾಲು ಸಾಲು ಸಿನಿಮಾಗಳನ್ನು ಮಾಡಬಹುದು. ನಾಯಕಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪಾತ್ರಗಳು ಬೇಕು.ಕನ್ನಡದಲ್ಲಿ ನಿರಂತರವಾಗಿಲ್ಲದಿದ್ದರೂ ಆಫರ್‌ಗಳು ಬರುತ್ತಿವೆ. ಅನ್ಯಭಾಷೆಗೆ ಹೋದ ತಕ್ಷಣ ಹೆಸರು ಮಾಡುವುದು ಸುಲಭವಲ್ಲ. ದೊಡ್ಡ ಹಿಟ್ ಸಿಗಬೇಕು. ಇಲ್ಲದಿದ್ದರೆ ಎಲ್ಲೂ ಅವಕಾಶಗಳು ಸಿಗದಂತಾಗುತ್ತದೆ. ಆದರೆ ಕನ್ನಡದಲ್ಲಿ ನನಗೊಂದು ಐಡೆಂಟಿಟಿ ಇದೆ.ಹೀಗಾಗಿ ಅವಕಾಶಗಳೂ ಸಿಗುತ್ತವೆ ಎಂದು ಹೇಳುತ್ತಾರೆ. ಚಿತ್ರಗಳು ಸೋತದ್ದಕ್ಕೆ ನಾಯಕಿಯರಿಗೇನೂ ತೊಂದರೆ ಆಗೊಲ್ಲ ಎನ್ನುವ ಅವರು ಗಾಸಿಪ್‌ನ ಬಿರುಮಳೆಯಲ್ಲಿ ನೆನೆಯುತ್ತಿದ್ದರೂ ಅದರ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲವಂತೆ.ಐಟಂ ಸಾಂಗ್ ಒಲ್ಲೆ ಎನ್ನುವ ಶುಭಾ ಅದಕ್ಕೆ ಕಾರಣ ನೀಡುವುದು ಹೀಗೆ. `ಐಟಂ ಸಾಂಗ್‌ಗೆ ನಾಯಕಿಯರು ಹೆಜ್ಜೆ ಹಾಕುವುದು ತಪ್ಪಲ್ಲ. ನನಗೆ ವೈಯಕ್ತಿಕವಾಗಿ ಅದು ಇಷ್ಟವಿಲ್ಲ. ಅಲ್ಲದೆ ಈಗ ಐಟಂ ಸಾಂಗ್‌ಗೆ ನರ್ತಿಸಿದರೆ ಅವಕಾಶಗಳಿಲ್ಲದಿರುವುದರಿಂದ ನಟಿಸುತ್ತಾಳೆ ಎಂಬ ಕುಹಕದ ಮಾತು ಬರುತ್ತದೆ~.ಜನ ಇಷ್ಟಪಟ್ಟರೆ ಮಾತ್ರ ಗ್ಲಾಮರಸ್ ಗೆಟಪ್. ಅವರಿಗೆ ಹಿಡಿಸದಿದ್ದರೆ ಮತ್ತೆ ಹಳ್ಳಿ ಹುಡುಗಿಯಾಗಿ ಮರಳುತ್ತೇನೆ ಎನ್ನುವ ಶುಭಾಗೆ ಮದುವೆ ಬಗ್ಗೆ ಯಾಕೋ ಹಿಂಜರಿಕೆ. ಮದುವೆ ಮಾತೆತ್ತಿದರೆ `ಅದರ ಸಹವಾಸವೇ ಬೇಡ~ ಎಂದು ಗಟ್ಟಿಯಾಗಿ ನಗುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.