ಶನಿವಾರ, ಮೇ 8, 2021
26 °C

ಜನ ಸಹಭಾಗಿತ್ವದಲ್ಲಿ ನದಿ ಪುನಶ್ಚೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಥೇಮ್ಸ ಮಾದರಿಯಲ್ಲಿ ನದಿ ಜೋಡಣೆ ಮಾಡುವುದರಿಂದ ಅರ್ಕಾವತಿ ನದಿ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. ನದಿ ಪಾತ್ರದಲ್ಲಿನ ಸಮುದಾಯಗಳನ್ನು ಪುನಶ್ಚೇತನ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದರೆ ಪುನಶ್ಚೇತನ ಸಾಧ್ಯ' ಎಂದು ರಾಜಸ್ತಾನದ ತರುಣ್ ಭಾರತ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟರು.`ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿ'ಯು ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನದಿಯನ್ನು ಅವಲಂಬಿಸಿಕೊಂಡು ಸಾವಿರಾರು ಸಮುದಾಯಗಳು ನದಿ ಪಾತ್ರದಲ್ಲಿ ವಾಸಿಸುತ್ತಿದ್ದಾರೆ. ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ಪುನಶ್ಚೇತನ ಕಾರ್ಯಕ್ಕೆ ಮುಂದಾಗಬೇಕು' ಎಂದು ಸಲಹೆ ನೀಡಿದರು.ನದಿಯ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗಣಿಗಾರಿಕೆ, ಕೈಗಾರಿಕಾ ತ್ಯಾಜ್ಯವನ್ನು ನದಿಗೆ ಹರಿಸುವುದು, ಕೆರೆ-ಕಾಲುವೆಗಳ ಅಸಮರ್ಪಕ ನಿರ್ವಹಣೆ, ಹೆಚ್ಚುತ್ತಿರುವ ಬೋರ್‌ವೆಲ್‌ಗಳಿಂದಾಗಿ ಅರ್ಕಾವತಿ ದಿನೇ ದಿನೇ ಅವಸಾನದತ್ತ ಸಾಗುತ್ತಿದೆ' ಎಂದರು. ಅರ್ಕಾವತಿ ಪುನಶ್ಚೇತನಕ್ಕಾಗಿ ಡಾ.ವಿಮಲಾಗೌಡ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ಸಲಹೆಗಳನ್ನು ಜಾರಿಗೊಳಿಸಿಲ್ಲ. ಪುನಶ್ಚೇತನ ಕಾಮಗಾರಿಗೆ ಸರ್ಕಾರ 2011ರಲ್ಲಿ 22.43 ಕೋಟಿ ಬಿಡುಗಡೆ ಮಾಡಿತ್ತು. ಈ ಕಾಮಗಾರಿಯು ಸಮರ್ಪಕವಾಗಿ ನಡೆದಿಲ್ಲ ಎಂದು ದೂರಿದರು.ನದಿ ಪುನಶ್ಚೇತನಕ್ಕಾಗಿ ಸರ್ಕಾರವು ನದಿ ಪ್ರಾಧಿಕಾರವನ್ನು ಜಾರಿಗೆ ತರಬೇಕು. ಸಾರ್ವಜನಿಕರು, ಮಹಿಳಾ ಸಂಘಸಂಸ್ಥೆಗಳು ಇದರಲ್ಲಿ ಭಾಗವಹಿಸುವಂತೆ ಮಾಡಬೇಕು ಮತ್ತು ನದಿ ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಅರ್ಕಾವತಿ ಪುನಶ್ಚೇತನಗೊಳಿಸಿದರೆ ಬೆಂಗಳೂರಿನ ನೀರಿನ ಸಮಸ್ಯೆಗೆ ಬಹುತೇಕ ಪರಿಹಾರ ದೊರೆಯಲಿದೆ ಹಾಗೂ ನದಿಯ ವಿನಾಶವನ್ನು ತಡೆಗಟ್ಟಬಹುದು ಎಂದರು.

ರಾಜ್ಯ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ರೈತ ಸಂಘದ ಸದಸ್ಯರಿಗೆ ಅಂತರ್ಜಲ ನಿರ್ವಹಣೆ, ನದಿ ಪುನಶ್ಚೇತನ, ಕೃಷಿಯಲ್ಲಿ ನೀರಿನ ನಿರ್ವಹಣೆ ಕುರಿತು ಅರಿವು ಮೂಡಿಸಲು ಜೂನ್ 30ರಂದು ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.