ಬುಧವಾರ, ಮೇ 12, 2021
18 °C

ಜನ ಸೇವೆಗೆ ಇರುವ ದಿನಗೂಲಿ ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾನು ರಾಜ್ಯದ ಜನರ ಸೇವೆಗಾಗಿ ಇರುವ ದಿನಗೂಲಿ ಮುಖ್ಯಮಂತ್ರಿ ಎಂಬುದರಲ್ಲಿ ಎರಡು ಮಾತಿಲ್ಲ. ನಾನು ಆರು ಕೋಟಿ ಜನರ ಸೇವಕ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನನ್ನು ದಿನಗೂಲಿ ಮುಖ್ಯಮಂತ್ರಿ ಎಂದು ಕರೆದಿರುವುದಕ್ಕೆ ಬೇಸರ ಇಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೋಮವಾರ ಇಲ್ಲಿ ತಿಳಿಸಿದರು.ಗೃಹ ಕಚೇರಿ `ಕೃಷ್ಣಾ~ದಲ್ಲಿ ಜನತಾ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮೊದಲ ಬಾರಿಗೆ ಕುಮಾರಸ್ವಾಮಿ ಸತ್ಯವನ್ನು ಹೇಳಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ~ ಎಂದು ಅವರು ವ್ಯಂಗ್ಯವಾಡಿದರು.`ಕುಮಾರಸ್ವಾಮಿ ಅವರ ಹೇಳಿಕೆಯನ್ನು ಜನಪ್ರತಿನಿಧಿಯಾದವರು ಮರೆಯಬಾರದು. ಮುಖ್ಯಮಂತ್ರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಟೀಕೆಗಳಿಗೆ ಉತ್ತರ ನೀಡುತ್ತೇನೆ~ ಎಂದು ಅವರು  ಪ್ರತಿಕ್ರಿಯಿಸಿದರು.`ನಾನು ಆರು ಕೋಟಿ ಜನರ ಪರವಾಗಿ ಕೂಲಿಗಾರನಾಗಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾಗ ಯಾವ ರೀತಿ ಕೆಲಸ ನಿರ್ವಹಿಸಿದರು ಎಂಬುದು ನಾಡಿನ ಜನತೆಗೆ ಗೊತ್ತಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮಾಡಲಾಗದ್ದನ್ನು ನಾನು ಮಾಡಿ ತೋರಿಸುತ್ತೇನೆ~ ಎಂದರು.`ಮುಖ್ಯಮಂತ್ರಿಯಾದವರು ಜನಸೇವಕರಾಗಿ ಕಾರ್ಯನಿರ್ವಹಿಸಬೇಕೇ ಹೊರತು, ರಾಜರಂತೆ ಮೆರೆಯಬಾರದು. ಇನ್ನು ಮುಂದೆ ಅವರ ಟೀಕೆಗಳಿಗೆ ಪ್ರತಿಕ್ರಿಯಿಸದೆ ಕೆಲಸ ಮಾಡಿ ತೋರಿಸುತ್ತೇನೆ~ ಎಂದು ಹೇಳಿದರು.ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸೋಮವಾರ ಬೆಳಿಗ್ಗೆ ಸದಾನಂದ ಗೌಡ ಸಮಾಲೋಚನೆ ನಡೆಸಿದರು.ಯಡಿಯೂರಪ್ಪ ಅವರ  ಡಾಲರ್ಸ್‌ ಕಾಲೊನಿಯ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ ಅವರು ಉಪಚುನಾವಣೆ, ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಬಂಧನ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.